ದಾವಣಗೆರೆ: ನಗರದ ಸ್ವರೂಪವನ್ನು ಬದಲಿಸಿ ಸರ್ವತೋಮುಖ ಬೆಳವಣಿಗೆಯ ಮಹಾತ್ವಕಾಂಕ್ಷೆಯಿಂದ ಅನುಷ್ಠಾನಕ್ಕೆ ಬಂದಿರುವ ‘ಸ್ಮಾರ್ಟ್ ಸಿಟಿ’ ಯೋಜನೆ ರಾಜಕೀಯ ಹಗ್ಗಜಗ್ಗಾಟದಲ್ಲಿ ನಲುಗುತ್ತಿದೆ. ಯೋಜನೆಯ ಪರಿಕಲ್ಪನೆಯಿಂದ ಉದ್ಘಾಟನೆಯವರೆಗೂ ರಾಜಕೀಯ ಹಿತಾಸಕ್ತಿ ಮುನ್ನೆಲೆಗೆ ಬಂದಿದ್ದು, ಅಭಿವೃದ್ಧಿ ಗೌಣವಾಗಿದೆ. ಕಾಂಗ್ರೆಸ್–ಬಿಜೆಪಿ ನಡುವಿನ ಹಿತಾಸಕ್ತಿ ಸಂಘರ್ಷಕ್ಕೆ ಯೋಜನೆಯೇ ದಾಳವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ‘ಸ್ಮಾರ್ಟ್ ಸಿಟಿ’ ಯೋಜನೆ ರೂಪುಗೊಂಡಿದೆ. ಪ್ರಮುಖ ನಗರಗಳನ್ನು ಕೇಂದ್ರೀಕರಿಸಿ ರೂಪಿಸಿದ ಈ ಯೋಜನೆಯನ್ನು ಜನರು ಬೆರಗುಗಣ್ಣಿನಿಂದ ನೋಡಿದ್ದರು. ಅಭಿವೃದ್ಧಿ ಯೋಜನೆಯಲ್ಲಿ ರಾಜಕೀಯ ಇಣುಕಿ ಜನರ ವಿಶ್ವಾಸವನ್ನು ಘಾಸಿಗೊಳಿಸಿದೆ.
‘ಸ್ಮಾರ್ಟ್ ಸಿಟಿ’ ಯೋಜನೆ ಅನುಷ್ಠಾನಕ್ಕೆ ಬಂದಾಗ ಬಿಜೆಪಿಯ ಜಿ.ಎಂ.ಸಿದ್ದೇಶ್ವರ ಸಂಸದರಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರಿಂದ ಎಸ್.ಎಸ್.ಮಲ್ಲಿಕಾರ್ಜುನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಮಹಾನಗರ ಪಾಲಿಕೆಯಲ್ಲಿಯೂ ಆಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. 2019ರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದ ಬಳಿಕ ಮಹಾನಗರ ಪಾಲಿಕೆ ಆಡಳಿತವೂ ಕಮಲದ ತೆಕ್ಕೆತೆ ಜಾರಿತು. ಈ ರಾಜಕೀಯ ಸ್ಥಿತ್ಯಂತರ ‘ಸ್ಮಾರ್ಟ್ ಸಿಟಿ’ ಯೋಜನೆಯ ಅನುಷ್ಠಾನದಲ್ಲಿ ಪರಿಣಾಮ ಬೀರಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
‘ಸ್ಮಾರ್ಟ್ ಸಿಟಿ’ಯಡಿ ಪೂರ್ಣಗೊಂಡ 54 ಯೋಜನೆಗಳನ್ನು ನಿರ್ವಹಣೆಗಾಗಿ ಮಹಾನಗರ ಪಾಲಿಕೆ ಸ್ವೀಕರಿಸಲು ಉತ್ಸುಕತೆ ತೋರುತ್ತಿಲ್ಲ ಎಂಬುದು ಜಿಲ್ಲಾಧಿಕಾರಿ ಅಂಗಳ ತಲುಪಿದೆ. ಯೋಜನೆಗಳ ಹಸ್ತಾಂತರಕ್ಕೆ ಮಹಾನಗರ ಪಾಲಿಕೆಗೆ ನಿರ್ದೇಶನ ನೀಡುವಂತೆ ಬಿಜೆಪಿ ಜಿಲ್ಲಾಡಳಿತದ ಮೊರೆ ಹೋಗಿದೆ. ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಸದಸ್ಯರ ನಿಯೋಗ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರನ್ನು ಭೇಟಿಯಾಗಿ ಈ ಬಗ್ಗೆ ಲಿಖಿತ ಕೋರಿಕೆ ಸಲ್ಲಿಸಿದೆ. ನಿರ್ವಹಣೆಗಾಗಿ ಯೋಜನೆಗಳನ್ನು ಸುಪರ್ದಿಗೆ ಪಡೆಯದಿರುವುದಕ್ಕೆ ಪಾಲಿಕೆಯ ಆಡಳಿತ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದೆ.
‘ಎಸ್.ಎಸ್.ಮಲ್ಲಿಕಾರ್ಜುನ ಅವರು ಆಸಕ್ತಿ ತೋರಿ ಯೋಜನೆಗಳ ರೂಪುರೇಷ ತಯಾರಿಸಿದ್ದರು. ಮಂಡಕ್ಕಿ ಬಟ್ಟಿ, ಬ್ಯಾರೇಜ್, ಬಸ್ ನಿಲ್ದಾಣದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಉತ್ತಮವಾಗಿ ಸಿದ್ಧಪಡಿಸಲಾಗಿತ್ತು. 2019ರ ಬಳಿಕ ಹಲವು ಯೋಜನೆಗಳನ್ನು ಬಿಜೆಪಿ ರಾಜಕೀಯ ಹಿತಾಸಕ್ತಿಗೆ ಬಳಸಿಕೊಂಡಿತು. ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳೆ ದಾವಣಗೆರೆಯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ತಿರುಗಿಸಲಾಯಿತು. ಬೈಸಿಕಲ್, ಇ–ಶೌಚಾಲಯದಂತಹ ಸಂಬಂಧವೇ ಇಲ್ಲದ ಯೋಜನೆಗಳು ಆಗ ರೂಪುಗೊಂಡವು’ ಎಂದು ಆರೋಪಿಸುತ್ತಾರೆ ‘ಸ್ಮಾರ್ಟ್ ಸಿಟಿ’ ಯೋಜನೆಯ ಸದಸ್ಯರೂ ಆಗಿರುವ ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ.
‘ಕೇಂದ್ರ ಸರ್ಕಾರದ ಅತ್ಯುತ್ತಮ ಯೋಜನೆಯಾದ ‘ಸ್ಮಾರ್ಟ್ ಸಿಟಿ’ಯ ಅವಧಿ ಮುಗಿಯುತ್ತ ಬಂದಿದೆ. ಹಲವು ವರ್ಷಗಳಿಂದ ಮುಕ್ತಾಯವಾದ ಕಾಮಗಾರಿ ಸುಪರ್ದಿಗೆ ಪಡೆಯಲು ಮಹಾನಗರ ಪಾಲಿಕೆ ನೆಪಗಳನ್ನು ಹೇಳುತ್ತಿದೆ. ಜನರ ತೆರಿಗೆ ಹಣದಲ್ಲಿ ರೂಪಿಸಿದ ಯೋಜನೆಗಳು ವಿನಾ ಕಾರಣ ಹಾಳಾಗುತ್ತಿವೆ. ಸರ್ಕಾರದ ಅನುದಾನವನ್ನು ಪೋಲು ಮಾಡುವುದನ್ನು ಬಿಜೆಪಿ ಒಪ್ಪುವುದಿಲ್ಲ. ಜನರ ದಾರಿ ತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್ ಜನಪ್ರತಿನಿಧಿಗಳು ಕೈಬಿಡಬೇಕು’ ಎನ್ನುತ್ತಾರೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಕೆ.ಪ್ರಸನ್ನಕುಮಾರ್.
ಕೇಂದ್ರ ಸರ್ಕಾರದ ಈ ಯೋಜನೆ ಸಾರ್ವಜನಿಕರ ಬಳಕೆಗೆ ಲಭ್ಯವಾದರೆ ಬಿಜೆಪಿಗೆ ಲಾಭವಾಗುತ್ತದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಯೋಜನೆಗಳ ಸುಪರ್ದಿಗೆ ವಿಳಂಬ ನಿರ್ವಹಣೆಗೆ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರುತ್ತಿದೆ.ಕೆ.ಪ್ರಸನ್ನಕುಮಾರ್ ವಿರೋಧ ಪಕ್ಷದ ನಾಯಕ ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.