ADVERTISEMENT

ಸಮುದಾಯಕ್ಕೆ ಕೊಡುಗೆ ನೀಡಿ: ಕಾಗಿನೆಲೆಶ್ರೀ

ಬೆಳ್ಳೂಡಿ ಕನಕ ಗುರುಪೀಠದಲ್ಲಿ ಯುಪಿಎಸ್‌ಸಿ, ಕೆಪಿಎಸ್‌ಸಿ ತರಬೇತಿ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 19:23 IST
Last Updated 3 ಜುಲೈ 2022, 19:23 IST
ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಕಾಗಿನೆಲೆ ಕನಕಗುರುಪೀಠದ ಶಾಖಾ ಮಠದಲ್ಲಿ ಭಾನುವಾರ ಮಠದ ಚಂದ್ರಗುಪ್ತ ಮೌರ್ಯ ಶಿಕ್ಷಣ ಸಂಸ್ಥೆ ಹಾಗೂ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಅಕಾಡೆಮಿ ಸಹಯೋಗದಲ್ಲಿ ನಡೆದ ಯುಪಿಎಸ್‌ಸಿ, ಕೆಪಿಎಸ್‌ಸಿ ತರಬೇತಿ ಕೇಂದ್ರದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ನೆರವೇರಿಸಿದರು. ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಸಿ.ಬಿ. ರಿಷ್ಯಂತ್‌ ಇದ್ದರು.
ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಕಾಗಿನೆಲೆ ಕನಕಗುರುಪೀಠದ ಶಾಖಾ ಮಠದಲ್ಲಿ ಭಾನುವಾರ ಮಠದ ಚಂದ್ರಗುಪ್ತ ಮೌರ್ಯ ಶಿಕ್ಷಣ ಸಂಸ್ಥೆ ಹಾಗೂ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಅಕಾಡೆಮಿ ಸಹಯೋಗದಲ್ಲಿ ನಡೆದ ಯುಪಿಎಸ್‌ಸಿ, ಕೆಪಿಎಸ್‌ಸಿ ತರಬೇತಿ ಕೇಂದ್ರದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ನೆರವೇರಿಸಿದರು. ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಸಿ.ಬಿ. ರಿಷ್ಯಂತ್‌ ಇದ್ದರು.   

ಹರಿಹರ: ‘ಯುಪಿಎಸ್‌ಸಿ, ಕೆಪಿಎಸ್‌ಸಿ ತರಬೇತಿ ಕೇಂದ್ರ ಆರಂಭಿಸುವ ಮೂಲಕ ಮಧ್ಯ ಕರ್ನಾಟಕದ ಯುವಜನರಿಗೆ ಉತ್ತಮ ಸೌಲಭ್ಯ ನೀಡಿದ ತೃಪ್ತಿ ಇದೆ. ಸಮುದಾಯ ನಮಗೇನು ನೀಡಿತು ಎನ್ನುವುದಕ್ಕಿಂತ ಸಮುದಾಯಕ್ಕೆ ನಾನೇನು ನೀಡಿದೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ’ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿ ಭಾನುವಾರ ಮಠದ ಚಂದ್ರಗುಪ್ತ ಮೌರ್ಯ ಶಿಕ್ಷಣ ಸಂಸ್ಥೆ ಹಾಗೂ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಅಕಾಡೆಮಿ ಸಹಯೋಗದಲ್ಲಿ ನಡೆದಯುಪಿಎಸ್‌ಸಿ, ಕೆಪಿಎಸ್‌ಸಿ ತರಬೇತಿಕೇಂದ್ರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಈ ಭಾಗದ ಆಕಾಂಕ್ಷಿಗಳು ದೂರದ ಮಹಾನಗರಗಳಲ್ಲಿ ಹಲವು ಲಕ್ಷ ರೂಪಾಯಿ ವ್ಯಯಿಸಿ ತರಬೇತಿ ಪಡೆಯುವುದು ಕಷ್ಟವಾಗಿತ್ತು. ಹೀಗಾಗಿ ಮಧ್ಯ ಕರ್ನಾಟಕದವರಿಗೆ ಅನುಕೂಲ ಕಲ್ಪಿಸಲು ಇಲ್ಲಿಕೇಂದ್ರ ತೆರೆಯಲಾಗಿದೆ. ಶುಲ್ಕವೂ ಕಡಿಮೆ. ತರಬೇತಿಯ ಖರ್ಚನ್ನು ಮಾತ್ರ ಸಂಗ್ರಹಿಸುತ್ತಿದ್ದೇವೆ. ಲಾಭದ ಉದ್ದೇಶವಿಲ್ಲ’ ಎಂದರು.

ADVERTISEMENT

‘ಬೆಳ್ಳೂಡಿಯಲ್ಲಿ ಶಾಖಾ ಮಠ ಆರಂಭಿಸಿದಾಗ ಅನೇಕ ಸವಾಲುಗಳು ಎದುರಾದವು. ಅವುಗಳನ್ನು ಲೆಕ್ಕಿಸದೆ 210 ದಿನಗಳಲ್ಲಿ ಮಠದ ಕಟ್ಟಡವನ್ನು ನಿರ್ಮಿಸಿ, ನಂತರ ಈ ಕ್ಷೇತ್ರಕ್ಕೆ ಸಮಾಜದವರನ್ನು ಶಾಸಕರನ್ನಾಗಿ ಮಾಡಿದ ತೃಪ್ತಿ ನಮಗಿದೆ. ಮಳೆಗಾಲದಲ್ಲಿ ರೈತರು ಬಿತ್ತನೆ ಮಾಡುತ್ತಾರೆ. ಅದೇ ರೀತಿ ಮಠದಿಂದ ಈ ಮಳೆಗಾಲದಲ್ಲಿ ಐಎಎಸ್, ಕೆಎಎಸ್ ಬೆಳೆಯ ಬೀಜಗಳನ್ನು ಬಿತ್ತನೆ ಮಾಡಲಾಗಿದೆ’ ಎಂದು ಸ್ವಾಮೀಜಿ ಹೇಳಿದರು.

‘30 ವರ್ಷಗಳ ಹಿಂದೆ ಸಮಾಜದ ಹಿರಿಯರು ಮಹತ್ವಾಕಾಂಕ್ಷೆಯಿಂದ ಕಾಗಿನೆಲೆಯಲ್ಲಿ ಕನಕಗುರು ಪೀಠವನ್ನು ಸ್ಥಾಪಿಸಿದ್ದರು. ಆ ಉದ್ದೇಶ ಈಡೇರುತ್ತಿದೆ. ನಿರಂಜನಾನಂದಪುರಿ ಶ್ರೀಗಳು ಹಿಡಿದ ಕೆಲಸ ಬಿಡುವುದಿಲ್ಲ. ಮಠವು ಜಾತ್ಯತೀತವಾಗಿ ಬೆಳೆಯುತ್ತಿದೆ’ ಎಂದು ಹೊಸದುರ್ಗ ಕನಕಗುರು ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

‘ಮಹಾನಗರಗಳಿಗೆ ಸೀಮಿತವಾಗಿದ್ದ ಮಹತ್ವದ ತರಬೇತಿ ಕೇಂದ್ರವನ್ನು ಗ್ರಾಮೀಣ ಭಾಗದಲ್ಲಿ ಆರಂಭಿಸಿದ್ದು ಜನಮುಖಿ ಕಾರ್ಯ. ಶುಲ್ಕವೂ ಕಡಿಮೆ ಇದೆ. ಇದಕ್ಕೆ ಎಲ್ಲ ಸಹಕಾರ ನೀಡುತ್ತೇನೆ. ಇಲ್ಲಿ ತರಬೆತಿ ಪಡೆಯಲು ಬಯಸುವ ಪ್ರತಿಭಾವಂತ ಹತ್ತು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

‘ಸತತ ಪರಿಶ್ರಮದ ಮೂಲಕ ನಿರಂಜನಾನಂದಪುರಿ ಶ್ರೀಗಳು ಬೆಳ್ಳೂಡಿ ಶಾಖಾ ಮಠ ಹಾಗೂ ಶಿಕ್ಷಣ ಕೇಂದ್ರವನ್ನು ಬೆಳೆಸಿದ್ದಾರೆ. ಈಗ ಮೈಲಾರದಲ್ಲೂ ಶಾಖಾ ಮಠ ನಿರ್ಮಾಣ ಮಾಡಿಸುತ್ತಿದ್ದಾರೆ. ಶ್ರೀಗಳ ಈ ಕಾರ್ಯಕ್ಕೆ ನಮ್ಮ ಸಹಕಾರವಿದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರಹೇಳಿದರು.

‘ದೇಶದಲ್ಲಿ ಮಠ, ಮಂದಿರಗಳ ಮೂಲಕ ಅನ್ನ, ಅಧ್ಯಾತ್ಮದ ಜೊತೆಗೆ ಶಿಕ್ಷಣದ ದಾಸೋಹವೂ ನಡೆಯುತ್ತಿದೆ. ಈ ದಿಸೆಯಲ್ಲಿ ಮಠವು ಮಹತ್ವದ ಹೆಜ್ಜೆ ಇಟ್ಟಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಚ್.ಎಂ. ರೇವಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್‌ ಅಕಾಡೆಮಿ ಮುಖ್ಯಸ್ಥ ಜಿ.ಬಿ. ವಿನಯ್ ಕುಮಾರ್, ಹೊಸದುರ್ಗದ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ, ಐಎಎಸ್ ಅಧಿಕಾರಿ ಅಜಯ್ ನಾಗಭೂಷಣ್, ತಹಶೀಲ್ದಾರ್ ಡಾ.ಎಂ.ಬಿ.ಅಶ್ವತ್ಥ, ದಯಾನಂದ್ ಹಾಗೂ ಸಮಾಜದ ಮುಖಂಡರು ಇದ್ದರು.

ಎಸ್‌ಟಿ ಮೀಸಲಾತಿ: ಕೇಂದ್ರಕ್ಕೆ ಶಿಫಾರಸು ಮಾಡಲು ಒತ್ತಾಯ

ಹರಿಹರ: ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ನೀಡುವ ಸಂಬಂಧ ಮೈಸೂರಿನ ಬುಡಕಟ್ಟು ಸಂಶೋಧನಾ ಕೇಂದ್ರ ನೀಡಲಿರುವ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಶ್ರೀ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಸಂಬಂಧ 360 ಕಿ.ಮೀ ಪಾದಯಾತ್ರೆ ನಡೆಸಿ ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ ಪರಿಣಾಮ ರಾಜ್ಯ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ನೀಡಿತ್ತು. ಸಂಶೋಧನಾ ಕೇಂದ್ರದಿಂದ ಶೇ 98ರಷ್ಟು ಅಧ್ಯಯನ ಮುಗಿದಿದೆ. ಶೀಘ್ರ ವರದಿ ಸಲ್ಲಿಸಲಿದೆ’ ಎಂದರು.

******

ಬೆಂಗಳೂರಿನ ತರಬೇತಿ ಕೇಂದ್ರದಲ್ಲಿ ಇರುವ ಗುಣಮಟ್ಟದಲ್ಲೇ ಬೆಳ್ಳೂಡಿ ಕೇಂದ್ರದಲ್ಲೂ ಬೋಧನೆ ಇರಲಿದೆ. ಇನ್‌ಸೈಟ್ಸ್ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಹಲವರು ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.

–ಜಿ.ಬಿ.ವಿನಯ್ ಕುಮಾರ್, ಇನ್‌ಸೈಟ್ಸ್ ಐಎಎಸ್‌ ಅಕಾಡೆಮಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.