ADVERTISEMENT

ಕೊರೊನಾ ಜಾಗೃತಿಗೆ ವಿಡಿಯೊ ಮೊರೆ ಹೋದ ಡಿಸಿ, ಸಿಇಒ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 3:08 IST
Last Updated 24 ಸೆಪ್ಟೆಂಬರ್ 2020, 3:08 IST

ದಾವಣಗೆರೆ: ಕೊರೊನಾ ನಿಯಂತ್ರಿಸಲು ಜನರ ಸಹಕಾರದ ಅಗತ್ಯವನ್ನು ವಿವರಿಸಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ದಿನಕ್ಕೊಂದು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಜಿಲ್ಲಾ ಪಂಚಾಯಿಸಿ ಸಿಇಒ ಪದ್ಮ ಬಸವಂತಪ್ಪ ಕೂಡ ಕೈಜೋಡಿಸಿದ್ದಾರೆ.

‘ಕೋವಿಡ್‌–19 ಪ್ರಕರಣ ದಿನೇ ದಿನೇ ಜಾಸ್ತಿಯಾಗುತ್ತಿದೆ. ಎಲ್ಲ ಆಸ್ಪತ್ರೆಗಳು ಒಗ್ಗೂಡಿಸಿ ಕೆಲಸ ಮಾಡುತ್ತಿರುವುದರಿಂದ ಮರಣ ಪ್ರಮಾಣ ಕಡಿಮೆಯಾಗಿದೆ. ಹಿಂದೆ ನಗರ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತಿದ್ದ ಪ್ರಕರಣ ಈಗ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿಯೂ ಪತ್ತೆಯಾಗುತ್ತಿದೆ. ಮಾರ್ಚ್‌, ಏಪ್ರಿಲ್‌, ಮೇ ತಿಂಗಳುಗಳಲ್ಲಿ ವಹಿಸಿದ್ದ ಎಚ್ಚರವನ್ನು ಈಗ ವಹಿಸುತ್ತಿಲ್ಲ. ಮಾಸ್ಕ್‌ ಧರಿಸುತ್ತಿಲ್ಲ. ಅಂತರ ಕಾಪಾಡಿಕೊಳ್ಳುತ್ತಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹೊರಗೆ ಹೋಗುವ ಬದಲು ಎಲ್ಲ ಸಮಯದಲ್ಲಿ ಹೊರಗೆ ಹೋಗುತ್ತಿದ್ದಾರೆ. ಮತ್ತೆ ಆ ಎಚ್ಚರಿಕೆಗಳನ್ನು ವಹಿಸಬೇಕು. ಪರೀಕ್ಷೆ ಮಾಡುವ ತಂಡಗಳಿಗೆ ಸಹಕಾರ ನೀಡಬೇಕು’ ಎಂದು ಮಹಾಂತೇಶ ಬೀಳಗಿ ಮಂಗಳವಾರ ವಿಡಿಯೊ ಮೂಲಕ ವಿನಂತಿಸಿದ್ದರು.

‘ನಿಮ್ಮ ಮನೆಯಲ್ಲಿ 60 ವರ್ಷದ ಮೇಲಿನವರು ಇರುತ್ತಾರೆ. ಅವರಿಗೆ ಬಿಪಿ, ಶುಗರ್‌ ಸಹಿತ ಬೇರೆ ಬೇರೆ ರೋಗಗಳಿರುತ್ತವೆ. ಅದಕ್ಕಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೊರೊನಾ ಲಕ್ಷಣ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಸಾಗಿಸಬೇಕು. ಯುವಕರಿಗೆ ಬರುವುದಿಲ್ಲ ಎಂದು ಸುತ್ತಾಡಿ ಬಂದರೆ, ನಿಮ್ಮಿಂದ ಗೊತ್ತಾಗದಂತೆ ಅವರಿಗೆ ಸೋಂಕು ಬರಬಹುದು’ ಎಂದು ಬುಧವಾರದ ವಿಡಿಯೊದಲ್ಲಿ ಯುವಕರನ್ನು ಎಚ್ಚರಿಸಿದ್ದಾರೆ.

ADVERTISEMENT

‘ಗಂಟಲು ದ್ರವ ಸಂಗ್ರಹಿಸಲು ಬಂದಾಗ ಜನರು ಸ್ಪಂದಿಸುತ್ತಿಲ್ಲ. ಎಲ್ಲಿ ಸೋಂಕು ಹೆಚ್ಚಿರುತ್ತದೆಯೋ ಅಲ್ಲಿ ಗಂಟಲು ದ್ರವ ಸಂಗ್ರಹಕ್ಕೆ ಆರೋಗ್ಯ ಸಿಬ್ಬಂದಿ ಬರುತ್ತಾರೆ. ನೀವು ಪರೀಕ್ಷೆ ಮಾಡಿಸಿಕೊಂಡರೆ ಸೋಂಕು ಇದ್ದರೆ ಬೇಗ ಗುಣಮುಖರನ್ನಾಗಿ ಮಾಡಲು ಸಾಧ್ಯ. ನಿಮಗೆ ಅಪನಂಬಿಕೆ ಇದ್ದರೆ ಸೋಂಕಿನಿಂದ ಗುಣಮುಖರಾಗಿ ಬಂದವರನ್ನು ಕೇಳಿ. ತಡವಾಗಿ ಬಂದಾಗ ಸಾವು ನೋವು ಉಂಟಾಗಿದೆ. ಅದಕ್ಕಾಗಿ ಬೇಗ ಪರೀಕ್ಷೆ ಮಾಡಿಸಿ’ ಎಂದು ಪದ್ಮ ಬಸವಂತಪ್ಪ ವಿಡಿಯೊ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.