ADVERTISEMENT

ಮೆಳ್ಳಕಟ್ಟೆ ರೈತನಿಗೆ ನಟ ಉಪೇಂದ್ರ ಸಹಾಯಹಸ್ತ

​ಪ್ರಜಾವಾಣಿ ವಾರ್ತೆ
Published 24 ಮೇ 2021, 20:12 IST
Last Updated 24 ಮೇ 2021, 20:12 IST
ತಾವು ಬೆಳೆದ ಪೇರಲ ಹಣ್ಣಿನ ಜೊತೆಗೆ ಮೆಳ್ಳಕಟ್ಟೆಯ ರೈತ ಸಹೋದರರಾದ ಜಯವರ್ಧನ ಹಾಗೂ ದೇವರಾಜ್.
ತಾವು ಬೆಳೆದ ಪೇರಲ ಹಣ್ಣಿನ ಜೊತೆಗೆ ಮೆಳ್ಳಕಟ್ಟೆಯ ರೈತ ಸಹೋದರರಾದ ಜಯವರ್ಧನ ಹಾಗೂ ದೇವರಾಜ್.   

ದಾವಣಗೆರೆ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿ ತಾಲ್ಲೂಕಿನ ಮೆಳ್ಳಕಟ್ಟೆ ಗ್ರಾಮದ ರೈತನಿಗೆ ಚಿತ್ರ ನಟ ಉಪೇಂದ್ರ ನೆರವಾಗಿದ್ದಾರೆ.

ರೈತ ಜಯವರ್ಧನ ಹಾಗೂ ಸಹೋದರ ದೇವರಾಜ್ ಅವರು ಬೆಳೆದಿದ್ದ 25 ಕೆ.ಜಿ.ಯ 10 ಬಾಕ್ಸ್‌ ಪೇರಲ ಹಣ್ಣನ್ನು ಖರೀದಿಸಿ ಜನರಿಗೆ ಉಚಿತವಾಗಿ ಹಂಚಿದ್ದಾರೆ.

ಜಯವರ್ಧನ ಅವರು 3 ಎಕರೆ ಜಮೀನಿನಲ್ಲಿ ಪೇರಲವನ್ನು ಬೆಳೆದಿದ್ದಾರೆ. ಕಟಾವು ಮಾಡುವ ವೇಳೆಗೆ ಲಾಕ್‌ಡೌನ್ ಶುರುವಾಯಿತು.

ADVERTISEMENT

ಹೊರಗಡೆ ಮಾರಾಟ ಮಾಡಲು ಹೋದರೆ ದಲ್ಲಾಳಿಗಳು ಒಂದು ಬಾಕ್ಸ್‌ಗೆ ₹ 100ಕ್ಕೆ ಕೇಳುತ್ತಿದ್ದರು. ಇದು ಬೆಳೆದಿರುವ ಖರ್ಚಿಗೂ ಸಾಕಾಗುತ್ತಿರಲಿಲ್ಲ.

ರೈತರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ನಟ ಉಪೇಂದ್ರ ಅವರು ಫೇಸ್‌ಬುಕ್ ಪೇಜ್‌ ತೆರೆದಿದ್ದು, ಜಯವರ್ಧನ ಅವರು ತಮ್ಮ ಮೊಬೈಲ್ ನಂಬರ್ ಹಾಕಿ ಅಳಲು ತೋಡಿಕೊಂಡಿದ್ದರು. ಇದನ್ನು ಗಮನಿಸಿದ ಉಪೇಂದ್ರ ಅವರು ರೈತನನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡರು.

ದಾವಣಗೆರೆಯ ಅಭಿಮಾನಿಯೊಬ್ಬರನ್ನು ಕಳುಹಿಸಿ ಒಂದು ಬಾಕ್ಸ್‌ಗೆ ₹ 300ರಂತೆ 10 ಬಾಕ್ಸ್ ಖರೀದಿಸಿ ₹ 3 ಸಾವಿರ ನೀಡಿದರು.

‘ಲಾಕ್‌ಡೌನ್ ಇಲ್ಲದಿದ್ದರೆ ಒಂದು ಬಾಕ್ಸ್‌ಗೆ ₹ 700ರಿಂದ ₹ 800 ದರ ಸಿಗುತ್ತಿತ್ತು. ₹4 ಲಕ್ಷದಿಂದ ₹ 5 ಲಕ್ಷ ವಹಿವಾಟು ನಡೆದು ₹ 2.50 ಲಕ್ಷ ಲಾಭ ಸಿಗುತ್ತಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಜಮೀನಿನಲ್ಲಿ ಪೇರಲ ಕೊಳೆತುಹೋಗಿದೆ. ₹2 ಲಕ್ಷ ಖರ್ಚು ಮಾಡಿದ್ದು, ಈ ಹಣವೂ ಸಿಗುತ್ತಿಲ್ಲ‘ ಎಂದು ರೈತ ದೇವರಾಜ್ ಅಳಲು ತೋಡಿಕೊಂಡರು.

‘ಈಗ ಮತ್ತೊಂದು ಬಾರಿಗೆ ಲಾಕ್‌ಡೌನ್‌ ಆಗಿದ್ದು, ಇನ್ನೂ 200 ಬಾಕ್ಸ್‌ ಪೇರಲ ಹಣ್ಣು ಹೊಲದಲ್ಲೇ ಕೊಳೆಯುತ್ತಿದೆ. ನಟ ಉಪೇಂದ್ರ ಅವರು ಒಳ್ಳೆಯ ಉದ್ದೇಶದಿಂದ ಫೇಸ್‌ಬುಕ್ ಪೇಜ್ ತೆರೆದಿದ್ದಾರೆ. ಇದೇ ರೀತಿ ಜನರು ಸಹಾಯಕ್ಕೆ ಮುಂದೆ ಬರಬೇಕು’ ಎಂದು ದೇವರಾಜ್ ಮನವಿ ಮಾಡುತ್ತಾರೆ.

ದೇವರಾಜ್ ಅವರ ಸಂಪರ್ಕ ಸಂಖ್ಯೆ: 8073176365

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.