ADVERTISEMENT

ಇಎಸ್‍ಐ ಆಸ್ಪತ್ರೆ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ

40 ಆಮ್ಲಜನಕ ಬೆಡ್‌, 40 ಐಸೊಲೇಶನ್‌ ಬೆಡ್‌ಗಳಿರುವ ಆಸ್ಪತ್ರೆಯನ್ನು ಕೋವಿಡ್‌ ಕೇರ್‌ಗೆ ಮೀಸಲಿಡಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಮೇ 2021, 3:37 IST
Last Updated 6 ಮೇ 2021, 3:37 IST
ದಾವಣಗೆರೆ ಇಎಸ್‌ಐ ಆಸ್ಪತ್ರೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮತ್ತು ಸಿಇಒ ಡಾ. ವಿಜಯ ಮಹಾಂತೇಶ ದಾನಮ್ಮನವರ ಭೇಟಿ ನೀಡಿ ಕೋವಿಡ್‌ ಕೇರ್‌ ಸೆಂಟರ್ ಮಾಡುವ ಬಗ್ಗೆ ಚರ್ಚಿಸಿದರು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ಇಎಸ್‌ಐ ಆಸ್ಪತ್ರೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮತ್ತು ಸಿಇಒ ಡಾ. ವಿಜಯ ಮಹಾಂತೇಶ ದಾನಮ್ಮನವರ ಭೇಟಿ ನೀಡಿ ಕೋವಿಡ್‌ ಕೇರ್‌ ಸೆಂಟರ್ ಮಾಡುವ ಬಗ್ಗೆ ಚರ್ಚಿಸಿದರು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಕೋವಿಡ್ ಕೇರ್ ಸೆಂಟರ್ ತೆರೆಯಲು ನಗರದ ಇಎಸ್‍ಐ ಆಸ್ಪತ್ರೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪರಿಶೀಲಿಸಿದರು.

40 ಆಕ್ಸಿಜನ್ ಮತ್ತು 40 ಐಸೊಲೇಶನ್ ಬೆಡ್‍ಗಳು ಸೇರಿದಂತೆ ಒಟ್ಟು 80 ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಬೇಕಾದ ಅಗತ್ಯಗಳ ಬಗ್ಗೆ ಅಲ್ಲಿನ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು.

‘ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ವ್ಯವಸ್ಥೆಗೆ 19 ಪಾಯಿಂಟ್‍ಗಳು ಇದ್ದು, ಅದರಲ್ಲಿ 2 ಕಡೆ ಲೀಕೇಜ್ ಆಗುತ್ತಿದೆ. ಆಸ್ಪತ್ರೆಯಲ್ಲಿ ಒಬ್ಬ ಟೆಕ್ನೀಷಿಯನ್ ಇದ್ದು ಇನ್ನೊಬ್ಬರ ಅಗತ್ಯವಿದೆ. ಹಾಗೂ ಬೆಡ್, ಸಿಲಿಂಡರ್ ವ್ಯವಸ್ಥೆ, ಫ್ಯಾನ್ ಸೇರಿ ಮೂಲ ಸೌಕರ್ಯಗಳು ಮತ್ತು ಮಾನವ ಸಂಪನ್ಮೂಲ ಕೊರತೆ ಇದೆ. ಸಾಧ್ಯವಾದಷ್ಟು ಜಿಲ್ಲಾಡಳಿತಕ್ಕೆ ಸಹಾಯ ಮಾಡಲು ಬದ್ಧರಿದ್ದೇವೆ’ ಎಂದುಇಎಸ್‍ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಬಸವನಗೌಡ ತಿಳಿಸಿದರು.

ADVERTISEMENT

ಆಸ್ಪತ್ರೆಯಲ್ಲಿ ಐಸಿಯು ಇಲ್ಲ. ಹಾಗಾಗಿ ಇಲ್ಲಿರುವ ಸಿಬ್ಬಂದಿಗೆ ಐಸಿಯು ನಿರ್ವಹಣೆ ಅನುಭವ ಇಲ್ಲ. ಅವರಿಗೆ ಒಂದು ವಾರದ ಮಟ್ಟಿಗೆ ತರಬೇತಿ ಕೊಟ್ಟಲ್ಲಿ ಅನುಕೂಲವಾಗುತ್ತದೆ. ಈಗಾಗಲೇ ಆಸ್ಪತ್ರೆಯಲ್ಲಿ 19 ಬೆಡ್‍ಗಳಿಗೆ ಆಕ್ಸಿಜನ್ ವ್ಯವಸ್ಥೆ ಇದೆ. 11 ಜಂಬೋ ಸಿಲಿಂಡರ್‌ಗಳು, 26 ಸಣ್ಣ ಸಿಲಿಂಡರ್‌ಗಳು ಹಾಗೂ 15 ಔಟ್‍ಲೆಟ್‍ಗಳು ಬೇಕಾಗುತ್ತದೆ ಎಂದು ಅರಿವಳಿಕೆ ತಜ್ಞೆ ಡಾ.ನಂದಿನಿ ವಿವರ ನೀಡಿದರು.

‘ಆಸ್ಪತ್ರೆಗೆ 100 ಜಂಬೋ ಸಿಲಿಂಡರ್ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವಹಿಸಲಾಗುವುದು. ಆಸ್ಪತ್ರೆಗೆ ಬೇಕಾದ 70 ಮಂಚಗಳನ್ನು ಹೊರಗಡೆಯಿಂದ ತರಿಸುತ್ತೇವೆ. ಹಾಗೂ ಕಾಟನ್ ಬೆಡ್, ಫ್ಯಾನ್, ಐವಿ ಡ್ರಿಪ್, ಆಕ್ಸಿಜನ್ ಸಿಲಿಂಡರ್, ಬಿಪಿ ಆಪರೇಟರ್‌ಗಳನ್ನು ದಾನಿಗಳಿಂದ ಪೂರೈಸುತ್ತೇವೆ. ಆಸ್ಪತ್ರೆಗೆ ಬೇಕಾದ ಟ್ರಾಲಿಗಳು, ವೀಲ್‍ಚೇರ್‌ಗಳು, ಐವಿ ಸ್ಟ್ಯಾಂಡ್ ಇತರೆ ಸವಲತ್ತುಗಳ ಕುರಿತು ಮಾಹಿತಿ ನೀಡಿದರೆ ಜಿಲ್ಲಾಡಳಿತದಿಂದ ಪೂರೈಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆಸ್ಪತ್ರೆಯಲ್ಲಿ ಈಗಾಗಲೇ ಹೊರರೋಗಿಗಳ ಚಿಕಿತ್ಸೆ ನಡೆಯುತ್ತಿದ್ದು ಈ ವ್ಯವಸ್ಥೆಗೆ ಧಕ್ಕೆ ಆಗದಂತೆ ಕೋವಿಡ್ ಸೆಂಟರನ್ನು ತೆರೆಯಬೇಕು. ಸಾಮಾನ್ಯ ರೋಗಿಗಳು ಹಾಗೂ ಕೋವಿಡ್ ಸೋಂಕಿತ ರೋಗಿಗಳಿಗೆ ಪ್ರತ್ಯೇಕ ದ್ವಾರಗಳನ್ನು ಮಾಡಬೇಕು. ಸಂಬಂಧಪಟ್ಟ ವೈದ್ಯರು, ಸಿಬ್ಬಂದಿ ಆಯಾ ದ್ವಾರಗಳ ಮೂಲಕವೇ ಹೋಗಿ ಬರಬೇಕು. ಸೋಂಕಿತರಿಗೆ ಬಿಸಿನೀರು ವ್ಯವಸ್ಥೆ ಮಾಡಲು ಮತ್ತು ಆಸ್ಪತ್ರೆಗೆ ಬಂದ ರೋಗಿಗಳು ಬಿಸಿ ನೀರು ಕುಡಿಯಲು 2 ಯೂನಿಟ್‍ಗೆ ಒಂದರಂತೆ ಸ್ಟೌ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ವ್ಯವಸ್ಥೆ ಇಲ್ಲ. ಎಕ್ಸ್‌ರೇ ಯೂನಿಟ್ ಇದೆ. ಆದರೆ ಫಿಲ್ಮ್‌ಗಳು ಇಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರನ್ನು ಮೊದಲ ಹಂತದ ಚಿಕಿತ್ಸೆ ಪೂರೈಸಿದ ಬಳಿಕ ಚೇತರಿಸಿಕೊಂಡ ರೋಗಿಗಳನ್ನು ಈ ಆಸ್ಪತ್ರೆಗೆ ವರ್ಗಾವಣೆ ಮಾಡಬಹುದು ಎಂದು ಸಿಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂಜಯ್ ಸಲಹೆ ನೀಡಿದರು.

ಕೋವಿಡ್ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಮತ್ತು ಡಿ ಗ್ರೂಪ್ ನೌಕರ ವರ್ಗದವರು ಸೇರಿ ಒಟ್ಟು 3 ತಂಡಗಳನ್ನು ರಚಿಸಿಕೊಳ್ಳಬೇಕು. ಪ್ರತಿ ತಂಡಕ್ಕೂ 3 ವೈದ್ಯರು, 3 ಸ್ಟಾಫ್ ನರ್ಸ್, 3 ಡಿ-ಗ್ರೂಪ್ ಸೇರಿದಂತೆ 9 ಜನರ ತಂಡ ರಚಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ‌ ನಾಯಕ್, ಆರ್.ಎಂ.ಒ ಡಾ. ಸಂಧ್ಯಾರಾಣಿ, ಹಿರಿಯ ತಜ್ಞ ಡಾ. ಅಣ್ಣಪ್ಪಸ್ವಾಮಿ, ಉಪ ವೈದ್ಯಕೀಯ ಅಧೀಕ್ಷಕ ಡಾ. ಚಿದಾನಂದ್, ಡಾ.ಚಂದನ, ಡಾ.ಪ್ರಸನ್ನ, ಡಾ.ಅನಿತರಾಣಿ, ಹಿರಿಯ ತಜ್ಞರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.