ADVERTISEMENT

ಸಂತೇಬೆನ್ನೂರು: ಮುಂದುವರಿದ ಮಳೆ ಕೊರತೆ, ಹಿಂಗಾರು ಬೆಳೆಯೂ ಮರೀಚಿಕೆ

ಕೆ.ಎಸ್.ವೀರೇಶ್ ಪ್ರಸಾದ್
Published 14 ಅಕ್ಟೋಬರ್ 2023, 6:01 IST
Last Updated 14 ಅಕ್ಟೋಬರ್ 2023, 6:01 IST
ಸಂತೇಬೆನ್ನೂರು ಬಳಿಯ ಹೊಲವೊಂದರಲ್ಲಿ ಮಳೆ ಇಲ್ಲದೆ ಸೊರಗುತ್ತಿರುವ ಹಿಂಗಾರು ಬೆಳೆ ಅಲಸಂದೆ
ಸಂತೇಬೆನ್ನೂರು ಬಳಿಯ ಹೊಲವೊಂದರಲ್ಲಿ ಮಳೆ ಇಲ್ಲದೆ ಸೊರಗುತ್ತಿರುವ ಹಿಂಗಾರು ಬೆಳೆ ಅಲಸಂದೆ   

ಸಂತೇಬೆನ್ನೂರು: ಸತತ ಎರಡು ತಿಂಗಳಿನಿಂದ ಮಳೆ ಇಲ್ಲದೆ ಸಂತೇಬೆನ್ನೂರು ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆ ಒಣಗಿನಿಂತಿದೆ. ಹಿಂಗಾರು ಬಿತ್ತನೆಗೂ ಮಳೆ ಇಲ್ಲದ ಹಿನ್ನೆಲೆಯಲ್ಲಿ ರೈತರು ಮುಗಿಲಿನತ್ತಲೇ ರೈತರು ಹತಾಶ ನೋಟ ನೆಟ್ಟಿದ್ದಾರೆ.

ಮುಂಗಾರಿನ ಪ್ರಮುಖ ಬೆಳೆ ಮೆಕ್ಕೆಜೋಳ ಕೊಯ್ಲಿನ ನಂತರ ಅಕ್ಟೋಬರ್ ಆರಂಭದಲ್ಲಿ ಹಿಂಗಾರು ಬೆಳೆಗಳನ್ನು ಬಿತ್ತಲು ಸಕಾಲ. ಹಿಂಗಾರಿನ ಪ್ರಮುಖ ಬೆಳೆ ಅಲಸಂದೆ. ಎರೆಭೂಮಿಯಲ್ಲಿ ಕಡಲೆ ಪ್ರಮುಖ ಬೆಳೆಯಾಗಿದೆ. ಕೆಲವೆಡೆ ಜೋಳ ಬೆಳೆಯುವುದು ವಾಡಿಕೆ. ಹಿಂಗಾರು ಹಂಗಾಮಿನಲ್ಲಾದರೂ ಮಳೆ ಬಂದರೆ ಬಿತ್ತನೆ ಮಾಡಬಹುದು ಎಂದು ರೈತರು ಕಾದಿದ್ದಾರೆ.

‘ತೆನೆ ಇಲ್ಲದೆ ಸೊರಗಿದ ಮೆಕ್ಕೆಜೋಳವನ್ನು ಹರಗಿ ದನಗಳಿಗೆ ಹಾಕಿದ್ದೇವೆ. ಅಲ್ಪ ಮಳೆ ಸುರಿದಿದ್ದರಿಂದ ಅಲಸಂದೆ ಬೀಜ ಬಿತ್ತಿದ್ದೇವೆ. ಮೊಳಕೆಯೊಡೆದ ಅಲಸಂದೆ ಸಸಿಗಳು ಮಳೆ ಇಲ್ಲದೆ ಸೊರಗುತ್ತಿವೆ. ಕೂಡಲೇ ಮಳೆ ಬರದಿದ್ದರೆ ಈ ಬೆಳೆಯೂ ಕೈಗೆಟುಕುವುದಿಲ್ಲ’ ಎಂದು ಕುಳೇನೂರು ರೈತ ಸುರೇಶ್ ಬೇಸರ ವ್ಯಕ್ತಪಡಿಸಿದರು.

ADVERTISEMENT

ಮೆಕ್ಕೆಜೋಳದಲ್ಲಿ ಶೇ 10ರಷ್ಟೂ ತೆನೆಗಳಿಲ್ಲ. ಹಿಂಗಾರು ಬೆಳೆ ಬಿತ್ತನೆಗೆ ರೈತರು ಹಿನ್ನಡೆ ತೋರಿದ್ದಾರೆ ಎಂದು ಚೆನ್ನಾಪುರದ ರೈತ ಕರಿಯಪ್ಪ ತಿಳಿಸಿದರು.

ಅಲಸಂದೆ, ಕಡಲೆ ಬೆಳೆಗಳಿಗೆ ಮಳೆ ಹೆಚ್ಚು ಬೇಕಿಲ್ಲ. ಎರಡು ಮೂರು ಬಾರಿ ಉತ್ತಮ ಮಳೆ ಬಿದ್ದರೆ ಇಳುವರಿ ಬರಲಿದೆ. ಇಬ್ಬನಿಯಲ್ಲೇ ಬೆಳೆಗಳು ಇಳುವರಿ ನೀಡುತ್ತವೆ. ಆದರೆ, ಬಿತ್ತನೆಗೆ ಅವಕಾಶವೇ ಇಲ್ಲದೆ ರೈತರು ಕೈ ಚೆಲ್ಲಿದ್ದಾರೆ ಎಂದು ರೈತ ಪ್ರಸಾದ್ ಹೇಳಿದರು.

ಸಂತೇಬೆನ್ನೂರು, ದೊಡ್ಡಬ್ಬಿಗೆರೆ, ಚಿಕ್ಕಬ್ಬಿಗೆರೆ, ಕಾಕನೂರು, ಕುಳೇನೂರು, ಚೆನ್ನಾಪುರ, ಚಿಕ್ಕುಡ, ಚಿಕ್ಕಬೆನ್ನೂರು, ಗೊಲ್ಲರಹಳ್ಳಿ, ಅರಳಿಕಟ್ಟೆ, ಕೆ.ಬಿ.ಗ್ರಾಮ, ಸಿದ್ದನಮಠ ಸೇರಿ ಹಲವು ಗ್ರಾಮಗಳಲ್ಲಿ ಸತತವಾಗಿ ಮಳೆ ಕೈಕೊಟ್ಟಿದೆ. ‘ಉತ್ತರೆ ಮಳೆ ಹುಸಿದರೆ, ಹೆತ್ತಾಯಿ ಮುನಿದರೆ, ಸತ್ಯವಂತರು ಸುಳ್ಳಿದರೆ ಲೋಕವು ಉಳಿದೀತೇ’ ಎಂಬ ಗಾದೆ ಮಾತಿನಂತೆ ಉತ್ತರೆ ಮಳೆ ಬರಲಿಲ್ಲ. ಈಗ ಚಿತ್ತ ಮಳೆಯೂ ಇಲ್ಲ. ರೈತರಿಗೆ ಇದೇ ಗತಿ ಎದುರಾಗಿದೆ ಎಂದು ಹಿರೇಕೋಗಲೂರಿನ ಪ್ರಗತಿಪರ ರೈತ ಶರಣಪ್ಪ ನಿರಾಶೆ ವ್ಯಕ್ತಪಡಿಸಿದರು.

ಕಳೆದ ಬಾರಿ ಅತಿವೃಷ್ಟಿಯಿಂದ ಮುಂಗಾರು ಬೆಳೆ ಕೈ ಸೇರಲಿಲ್ಲ. 800 ಹೆಕ್ಟೇರ್‌ನಲ್ಲಿ ಅಲಸಂದೆ ಬೆಳೆಯಲಾಗಿತ್ತು. ಕಡಲೆ ಉತ್ತಮ ಇಳುವರಿ ನೀಡಿತ್ತು. 35 ಟನ್ ಅಲಸಂದೆ ಬೀಜವನ್ನು ಕೃಷಿ ಇಲಾಖೆಯಿಂದ ರೈತರಿಗೆ ನೀಡಲಾಗಿತ್ತು. ಈ ವರ್ಷ ಕೇವಲ 4ರಿಂದ 5 ಟನ್ ಅಲಸಂದೆ ಬೀಜ ಮಾರಾಟವಾಗಿದೆ. ಮಳೆ ಕೊರತೆಯಿಂದ ರೈತರು ಹಿಂಗಾರು ಬಿತ್ತನೆ ಬೀಜ ಖರೀದಿಸುತ್ತಿಲ್ಲ ಎಂದು ಕೃಷಿ ಅಧಿಕಾರಿ ಕೇಶವ್ ತಿಳಿಸಿದರು.

ಮಳೆ ಇಲ್ಲದೆ ಫಲವೂ ಇಲ್ಲದೆ ಒಣಗಿ ನಿಂತ ಮೆಕ್ಕೆಜೋಳ ಬೆಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.