ADVERTISEMENT

‘ಬಂಜಾರರನ್ನು ಕಾಡುತ್ತಿರುವ ವಲಸೆ ಎಂಬ ಶಾಪ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 15:19 IST
Last Updated 16 ಡಿಸೆಂಬರ್ 2018, 15:19 IST

ದಾವಣಗೆರೆ: ಬಂಜಾರ ಸಮುದಾಯವನ್ನು ವಲಸೆಯು ಶಾಪವಾಗಿ ಕಾಡುತ್ತಿದೆ. ಶಿಕ್ಷಣವೊಂದೇ ಈ ಶಾಪದಿಂದ ಮುಕ್ತವಾಗಲು ಇರುವ ಮಾರ್ಗ ಎಂದು ಹಿರಿಯ ಚಿಂತಕ ರಾಘವೇಂದ್ರ ನಾಯ್ಕ ಹೇಳಿದರು.

ಬಂಜಾರ ಸಂಘಟನೆಗಳ ಸಮೂಹ, ವಿಶ್ವ ಗೋರ್ ಕಟಮಾಳೊ ಸಂಸ್ಥೆಯಿಂದ ವಲಸೆ ತಡೆಗಟ್ಟುವ ಶಾಶ್ವತ ಪರಿಹಾರ ಕುರಿತು ನಗರದ ಚೇತನಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಮಾಲೋಚನಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊಟ್ಟೆ ತುಂಬಿಸಲು ವಲಸೆ ಅನಿವಾರ್ಯ ಎಂದು ಭಾವಿಸಲಾಗಿದೆ. ಕಾಫಿ ಸೀಮೆಗೆ, ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಿದ್ದಾರೆ. ಅಲ್ಲಿ ನೋವು, ದುಗುಡಗಳಿಗೆ ತುತ್ತಾಗುತ್ತಿದ್ದಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸುರಪುರ ತಾಂಡಾದ ಜನ ಮಹಾರಾಷ್ಟ್ರದಲ್ಲಿ ಗೃಹ ಬಂಧಿಗಳಾಗಿದ್ದರು. ಹಾಲಬಾವಿ ತಾಂಡಾದ 18 ಸದಸ್ಯರು ವಲಸೆ ಪ್ರಯಾಣದ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಅಪಘಾತದಿಂದ ಮೃತಪಟ್ಟಿದ್ದರು. ವಲಸೆ ಅನೇಕ ಸಮಸ್ಯೆ ಸವಾಲುಗಳನ್ನು ಒಡ್ಡುತ್ತದೆ. ಒಂದೆಡೆ ನೆಲೆ ನಿಲ್ಲುವ ಸಾಮರ್ಥ್ಯ ರೂಢಿಸಿಕೊಂಡರೆ ಪ್ರಗತಿ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಕೀಲ ಎನ್. ಅನಂತ ನಾಯಕ, ‘ಮಾನವ ವಿಕಾಸದ ಹಂತದಲ್ಲಿ ವಲಸೆ ಅನಿವಾರ್ಯವಾಗಿತ್ತು. ಅದು ಬಂಜಾರ ಸಮಾಜಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಆನಂತರ ಎಲ್ಲ ಸಮುದಾಯಗಳು ಒಂದೆಡೆ ನೆಲೆಯೂರಲು ಆರಂಭಿಸಿದರು’ ಎಂದು ಹೇಳಿದರು.

ಈ ದೇಶಕ್ಕೆ ವ್ಯಾಪಾರಕ್ಕಾಗಿ ವಲಸೆ ಬಂದ ಮುಸ್ಲಿಮರು, ಕ್ರೈಸ್ತರು ಇಲ್ಲೇ ನೆಲೆ ನಿಂತು ದೇಶವನ್ನೂ ಆಳಿದ್ದು ಇತಿಹಾಸ. ಬಂಜಾರ ಸಮಾಜ ಮೂಲತಃ ರಾಜಸ್ಥಾನದಿಂದ ವಲಸೆ ಬಂದವರು ಎಂಬುದು ಸಂಶೋಧನೆಗಳಿಂದ ಗೊತ್ತಾಗಿದೆ. ದೇಶದಲ್ಲಿ 8 ಕೋಟಿ ಜನಸಂಖ್ಯೆ ಹೊಂದಿರುವ ಈ ಸಮಾಜ, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಭೂಮಿ ಒಡೆತನವಿಲ್ಲದ ಕಾರಣ ಹೊಟ್ಟೆಪಾಡಿಗಾಗಿ ವಲಸೆ ಹೋಗುವ ದುಃಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೊಸಪೀಳಿಗೆ ವಿದ್ಯಾಭ್ಯಾಸದಿಂದ ವಂಚಿತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾಜದ ಮುಖಂಡರಾದ ಖಂಡೋ ಬಂಜಾರ, ನವೀನ್ ಕಿಶೋರ್, ಚಂದೂ ಚೌಹಾನ್, ಈಶ್ವರ್, ರಾಜ್ಯದ ವಿವಿಧ ಭಾಗಗಳಿಂದ ಬಂದ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.