ADVERTISEMENT

ಶ್ರೀರಾಮ ಸೇನೆಯಿಂದ 28ಕ್ಕೆ ದತ್ತಮಾಲಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 17:09 IST
Last Updated 7 ಅಕ್ಟೋಬರ್ 2018, 17:09 IST
ಪ್ರಮೋದ ಮುತಾಲಿಕ
ಪ್ರಮೋದ ಮುತಾಲಿಕ   

ದಾವಣಗೆರೆ: ಚಿಕ್ಕಮಗಳೂರಿನ ದತ್ತಪೀಠದಲ್ಲಿ ಅಕ್ಟೋಬರ್‌ 28ರಂದು ದತ್ತಮಾಲಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸುಮಾರು 5,000 ದತ್ತಮಾಲಾಧಾರಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ತಿಳಿಸಿದರು.

‘ದತ್ತಪೀಠದ ಪೂಜೆಯ ಜವಾಬ್ದಾರಿಯನ್ನು ಹಿಂದೂ ಅರ್ಚಕರಿಗೆ ವಹಿಸಬೇಕು ಎಂದು ಆಗ್ರಹಿಸಿ ಅಕ್ಟೋಬರ್‌ 25ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಭಜನೆ ಮಾಡಿ ಮನವಿ ಸಲ್ಲಿಸಲಾಗುವುದು’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ದತ್ತಪೀಠದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸೌಹಾರ್ದತೆ ಇಲ್ಲದೇ ಇರುವುದರಿಂದಲೇ ನ್ಯಾಯಾಲಯದ ಮೆಟ್ಟಿಲು ಹತ್ತಲಾಗಿತ್ತು ಎಂಬುದನ್ನು ನ್ಯಾಯಾಧೀಶರು ತಿಳಿದುಕೊಳ್ಳಬೇಕಿತ್ತು. ಆದರೆ, ಡೋಂಗಿ ಜಾತ್ಯತೀತ– ಹಿಂದೂ ವಿರೋಧಿ ಸರ್ಕಾರ ಸೌಹಾರ್ದವಾಗಿ ಪರಿಹರಿಸಲು ಯತ್ನಿಸಿಲ್ಲ. ಬದಲಾಗಿ ಮುಸ್ಲಿಂ ಮೌಲ್ವಿಯಿಂದಲೇ ದತ್ತಪೀಠದ ಪೂಜೆ ಮಾಡಿಸಲು ಸರ್ಕಾರ ನಿರ್ಧರಿಸಿದೆ. ಮುಸ್ಲಿಮರು ಎಂದಿಗೂ ಮೂರ್ತಿ ಪೂಜೆಯನ್ನು ಒಪ್ಪುವುದಿಲ್ಲ. ಹೀಗಿರುವಾಗ ಇದು ಹೇಗೆ ಸೌಹಾರ್ದವಾಗುತ್ತದೆ? ಉರುಸ್‌ನಲ್ಲಿ ಮೌಲ್ವಿಗಳಿಂದ ಪೂಜೆ ಮಾಡಿಸಲಿ. ದತ್ತಾತ್ರೇಯ ಪೀಠವನ್ನು ಹಿಂದೂ ಅರ್ಚಕರಿಂದಲೇ ಪೂಜೆ ಮಾಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಪುನರ್‌ ಪರಿಶೀಲಿಸಬೇಕು. ಧಾರ್ಮಿಕ ಆಚರಣೆ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಿದ್ದು ಸರಿಯಲ್ಲ. ಕೆಲವು ಜಾತ್ಯತೀತ, ಕಮ್ಯುನಿಸ್ಟ್‌ ಹಾಗೂ ಡೋಂಗಿ ಬುದ್ಧಿಜೀವಿಗಳ ಕುತಂತ್ರದ ಪರಿಣಾಮ ಸುಪ್ರೀಂ ಕೋರ್ಟ್‌ ಈ ರೀತಿಯ ತೀರ್ಪು ನೀಡಿದೆ’ ಎಂದು ಮುತಾಲಿಕ ಅಭಿಪ್ರಾಯಪಟ್ಟರು.

ಧಾರ್ಮಿಕ ವಿಧಿ–ವಿಧಾನಗಳನ್ನು ಒಪ್ಪುವ ಬಗ್ಗೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಕಾಯ್ದೆಯನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

‘ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ತನಿಖೆಯ ದಿಕ್ಕು ತಪ್ಪಿಸಲಾಗಿದೆ. ನಿರ್ಲಜ್ಜ ಕಾಂಗ್ರೆಸ್‌ ಸರ್ಕಾರ ಎಸ್‌ಐಟಿ ಹಾಗೂ ಕರ್ನಾಟಕ ಪೊಲೀಸರನ್ನು ಈ ಪ್ರಕರಣದಲ್ಲಿ ಬಲಿಪಶುವನ್ನಾಗಿ ಮಾಡುತ್ತಿದೆ. ಇವರಿಗೆ ನಿಜವಾದ ಹಂತಕರು ಬೇಕಾಗಿಲ್ಲ. ಹಿಂದೂ ಸಂಘಟನೆಗಳನ್ನು ಗುರಿ ಮಾಡುವುದಷ್ಟೇ ಉದ್ದೇಶವಾಗಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.