ದಾವಣಗೆರೆ: ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟ ವ್ಯಕ್ತಿಯೊಬ್ಬರಿಗೆ ಕೋವಿಡ್ ಬಾಧಿಸಿತ್ತು ಎಂಬ ಸಂಗತಿ ಪ್ರಯೋಗಾಲಯದ ವರದಿಯ ಬಳಿಕ ಖಚಿತವಾಗಿದೆ.
ಹರಿಹರ ತಾಲ್ಲೂಕಿನ 65 ವರ್ಷದ ವ್ಯಕ್ತಿಯೊಬ್ಬರು ಮೇ 30ರಂದು ಮೃತಪಟ್ಟಿದ್ದರು. ಸಾವಿಗೂ ಮುನ್ನ ಕಫದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ಮಂಗಳವಾರ ಕೈಸೇರಿದ್ದು, ಮೃತ ವ್ಯಕ್ತಿಗೆ ಕೋವಿಡ್ ತಗುಲಿತ್ತು ಎಂಬುದು ಗೊತ್ತಾಗಿದೆ.
ಅನಿಯಂತ್ರಿತ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ, ರಕ್ತದೊತ್ತಡದಿಂದ ಬಳಲುತ್ತಿದ್ದ ವ್ಯಕ್ತಿಯ ಕಾಲಿಗೆ ಗ್ಯಾಂಗ್ರಿನ್ ಆಗಿತ್ತು. ಮೇ 24ರಂದು ಚಿಕಿತ್ಸೆಗಾಗಿ ಅವರು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಕೆಮ್ಮು ಕಾಣಿಸಿಕೊಂಡಿದ್ದರಿಂದ ಮೇ 30ರಂದು ಕಫದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಂದೇ ಅವರು ಮೃತಪಟ್ಟಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
‘ಮೃತ ವ್ಯಕ್ತಿಯ ಕುಟುಂಬದಲ್ಲಿರುವ ಮೂವರು ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಗ್ಯವಾಗಿದ್ದಾರೆ. ಕೊರೊನಾ ಸೋಂಕು ಈ ಹಿಂದಿನಷ್ಟು ಪರಿಣಾಮಕಾರಿಯಾಗಿಲ್ಲ. ಜನರು ಇದರಿಂದ ಭೀತಿಗೆ ಒಳಗಾಗುವ ಅಗತ್ಯವಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಷಣ್ಮುಖಪ್ಪ ತಿಳಿಸಿದ್ದಾರೆ.
ಇಬ್ಬರಿಗೆ ಕೋವಿಡ್ ದೃಢ
ಚಿಕಿತ್ಸೆಗಾಗಿ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಮಹಿಳೆಯರಲ್ಲಿ ಕೋವಿಡ್ ದೃಢಪಟ್ಟಿದೆ. ಸೌಮ್ಯ ಲಕ್ಷಣ ಕಂಡುಬಂದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ 70 ವರ್ಷ ಮಹಿಳೆ ಹಾಗೂ ದಾವಣಗೆರೆ ತಾಲ್ಲೂಕಿನ 21 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.