
ದಾವಣಗೆರೆ: ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೈಬಿಟ್ಟ ಪರಿಣಾಮ ಶೀಘ್ರ ಸಂಪರ್ಕ (ತತ್ಕಾಲ್) ಯೋಜನೆಯಡಿ ವಿದ್ಯುತ್ ಪಡೆಯಲು ರೈತರು ಉತ್ಸುಕತೆ ತೋರುತ್ತಿದ್ದಾರೆ. ₹ 1.2 ಲಕ್ಷ ಮೌಲ್ಯದ ವಿದ್ಯುತ್ ಪರಿವರ್ತಕವನ್ನು ಉಚಿತವಾಗಿ ಪಡೆಯಲು ‘ಬೆಸ್ಕಾಂ’ಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
‘ತತ್ಕಾಲ್’ ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕೋರಿ ದಾವಣಗೆರೆ ಉಪವಿಭಾಗದಲ್ಲಿ 2025ರ ಏಪ್ರಿಲ್‌ನಿಂದ ಈವರೆಗೆ 751 ಹಾಗೂ ಹರಿಹರ ಉಪವಿಭಾಗದಲ್ಲಿ 200ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿಯನ್ನು ಪರಿಶೀಲಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವೂ ತ್ವರಿತಗತಿಯಲ್ಲಿ ಸಾಗಿದೆ.
ಕೃಷಿ ಉದ್ದೇಶಕ್ಕೆ ಕೊಳವೆಬಾವಿ ಕೊರೆಸಿರುವ ರೈತರು ವಿದ್ಯುತ್ ಸಂಪರ್ಕಕ್ಕೆ ‘ಅಕ್ರಮ–ಸಕ್ರಮ’ ಯೋಜನೆಯಡಿ ಅರ್ಜಿ ಸಲ್ಲಿಸುತ್ತಿದ್ದರು. ಪಂಪ್‌ಸೆಟ್ ಸಕ್ರಮಗೊಳಿಸಲು ಪ್ರತಿ ಕೊಳವೆಬಾವಿಗೆ ₹ 23,000 ಶುಲ್ಕ ಪಾವತಿಸಬೇಕಿತ್ತು. 2004ರಿಂದ ಅನುಷ್ಠಾನಕ್ಕೆ ಬಂದಿದ್ದ ಈ ಯೋಜನೆ 2023ರ ಸೆ.22ರಂದು ಸ್ಥಗಿತಗೊಂಡಿತ್ತು. ಅಲ್ಲಿಂದ ಈಚೆಗೆ ಕೊಳವೆಬಾವಿ ಕೊರೆಸಿದ ರೈತರು ‘ತತ್ಕಾಲ್’ ಹಾಗೂ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯುವುದು ಕಡ್ಡಾಯವಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೂಲಸೌಲಭ್ಯ ಪಡೆಯುವ ಸಂಪೂರ್ಣ ವೆಚ್ಚವನ್ನು ಭರಿಸುವುದು ಸಾಮಾನ್ಯ ರೈತರಿಗೆ ಕಷ್ಟವಾಗಿದ್ದರಿಂದ ‘ತತ್ಕಾಲ್’ಗೆ ಒಲವು ಹೆಚ್ಚಾಗಿದೆ.
‘ತತ್ಕಾಲ್’ ಅಡಿ ವಿದ್ಯುತ್ ಸಂಪರ್ಕ ಪಡೆಯಲು ಕನಿಷ್ಠ ಎರಡು ಕೊಳವೆಬಾವಿಗಳಾದರೂ ಇರಬೇಕು. ಪ್ರತಿಯೊಂದಕ್ಕೂ ತಲಾ ₹ 15,000ದಂತೆ ₹ 30,000 ಠೇವಣಿ ಪಾವತಿಸಬೇಕು. ಇದಕ್ಕೆ ತ್ವರಿತವಾಗಿ ಅನುಮತಿ ನೀಡುವ ‘ಬೆಸ್ಕಾಂ’ ₹ 1.20 ಲಕ್ಷ ಮೌಲ್ಯದ 25 ಕೆ.ವಿ. ಸಾಮರ್ಥ್ಯದ ವಿದ್ಯುತ್ ಪರಿವರ್ತಕವನ್ನು ಉಚಿತವಾಗಿ ನೀಡಲಿದೆ. ವಿದ್ಯುತ್ ಮಾರ್ಗದ ಸಂಪೂರ್ಣ ವೆಚ್ಚವನ್ನು ರೈತರೇ ಭರಿಸಬೇಕಾಗುತ್ತದೆ’ ಎಂದು ‘ಬೆಸ್ಕಾಂ’ ಅಧಿಕಾರಿಗಳು ವಿವರಿಸಿದ್ದಾರೆ.
ಶೀಘ್ರ ಸಂಪರ್ಕ ಯೋಜನೆಯಡಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಪರಿಶೀಲಿಸಿ ತ್ವರಿತಗತಿಯಲ್ಲಿ ಅನುಮತಿ ನೀಡುತ್ತಿದ್ದೇವೆ. ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ.ಎ.ಕೆ. ತಿಪ್ಪೇಸ್ವಾಮಿ, ಕಾರ್ಯಪಾಲಕ ಎಂಜಿನಿಯರ್, ‘ಬೆಸ್ಕಾಂ’, ದಾವಣಗೆರೆ ವಿಭಾಗ
ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ ಸಂಪರ್ಕ ಪಡೆದ ರೈತರಿಗೆ ದಂಡ ವಿಧಿಸುತ್ತಿಲ್ಲ. ಅನುಮತಿ ಪಡೆದು ವಿದ್ಯುತ್ ಸಂಪರ್ಕ ಪಡೆಯುವಂತೆ ತಿಳಿವಳಿಕೆ ನೀಡಲಾಗುತ್ತಿದೆಪಿ.ವಿನಯ್‌ಕುಮಾರ್, ಕಾರ್ಯಪಾಲಕ ಎಂಜಿನಿಯರ್, ‘ಬೆಸ್ಕಾಂ’, ಹರಿಹರ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.