ADVERTISEMENT

ದಾವಣಗೆರೆ: ಕೇಶ ಕಸಿ ಕ್ಲಿನಿಕ್‌ಗಳ ಬಾಗಿಲು ಬಂದ್‌

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 13:41 IST
Last Updated 4 ಸೆಪ್ಟೆಂಬರ್ 2025, 13:41 IST
ದಾವಣಗೆರೆಯ ಕೇಶ ಕಸಿ ಕ್ಲಿನಿಕ್‌ವೊಂದರ ಮೇಲೆ ಗುರುವಾರ ದಾಳಿ ನಡೆಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌. ಷಣ್ಮುಖಪ್ಪ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ  ಡಾ.ಜಿ.ಡಿ. ರಾಘವನ್‌ ದಾಖಲೆಗಳನ್ನು ಪರಿಶೀಲಿಸಿದರು
ದಾವಣಗೆರೆಯ ಕೇಶ ಕಸಿ ಕ್ಲಿನಿಕ್‌ವೊಂದರ ಮೇಲೆ ಗುರುವಾರ ದಾಳಿ ನಡೆಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌. ಷಣ್ಮುಖಪ್ಪ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ  ಡಾ.ಜಿ.ಡಿ. ರಾಘವನ್‌ ದಾಖಲೆಗಳನ್ನು ಪರಿಶೀಲಿಸಿದರು   

ದಾವಣಗೆರೆ: ನಗರದ 15 ಕೇಶ ಕಸಿ ಕ್ಲಿನಿಕ್‌ಗಳ ಮೇಲೆ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡ, ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಚಿಕಿತ್ಸಾಲಯಗಳ ಬಾಗಿಲು ಮುಚ್ಚಿಸಿದೆ. ಪರವಾನಗಿ ಪಡೆಯದೇ ಬಳಸುತ್ತಿದ್ದ ವೈದ್ಯಕೀಯ ಉಪಕರಣಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ.

ಭಾರತೀಯ ಚರ್ಮರೋಗ, ರತಿರೋಗ ಹಾಗೂ ಕುಷ್ಠರೋಗ ತಜ್ಞರ ಸಂಘ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಈಚೆಗೆ ನೀಡಿದ ದೂರು ಆಧರಿಸಿ ಈ ದಾಳಿ ನಡೆಸಲಾಗಿದೆ. 3 ಕ್ಲಿನಿಕ್‌ಗಳು ಕೆಲ ತಿಂಗಳ ಹಿಂದೆಯೇ ಬಾಗಿಲು ಮುಚ್ಚಿರುವುದು ಗೊತ್ತಾಗಿದೆ. ಉಳಿದ 12ರಲ್ಲಿ ಕೆಲವು ಪರವಾನಗಿ ಪಡೆದಿದ್ದರೂ ವೈದ್ಯಕೀಯ ಲೋಪ ಎಸಗಿರುವುದು ಪತ್ತೆಯಾಗಿವೆ.

‘ವೈದ್ಯಕೀಯ ಚಿಕಿತ್ಸೆ ನೀಡುವ ಸಂಸ್ಥೆಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ (ಕೆಪಿಎಂಇ) ಪರವಾನಗಿ ಪಡೆಯುವುದು ಕಡ್ಡಾಯ. ದಾಳಿಯ ವೇಳೆ ಅಗತ್ಯ ದಾಖಲೆಗಳನ್ನು ಒದಗಿಸಲು ವಿಫಲವಾದ ಕ್ಲಿನಿಕ್‌ಗಳ ಬಾಗಿಲು ಮುಚ್ಚಿಸಲಾಗಿದೆ. ಈ ಕುರಿತು ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌. ಷಣ್ಮುಖಪ್ಪ ತಿಳಿಸಿದರು.

ADVERTISEMENT

ಏಕಕಾಲಕ್ಕೆ ದಾಳಿ

ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಕೇಶ ಕಸಿ ಕ್ಲಿನಿಕ್‌ಗಳ ಪಟ್ಟಿಯನ್ನು ಹಿಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 15 ತಂಡಗಳನ್ನು ರಚಿಸಿತ್ತು. ವೈದ್ಯಾಧಿಕಾರಿಗಳು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಪ್ರತಿ ತಂಡದಲ್ಲಿದ್ದರು. ಶಾಮನೂರು ರಸ್ತೆ, ರಾಮ್‌ ಅಂಡ್‌ ಕೊ ವೃತ್ತ, ಎಂಸಿಸಿ ಬಡಾವಣೆ, ಜೀವನ್‌ ಭೀಮಾ ನಗರ, ಪಿ.ಜೆ. ಬಡಾವಣೆ, ಕುವೆಂಪು ನಗರ, ವಿದ್ಯಾನಗರ, ದೇವರಾಜ ಅರಸು ಬಡಾವಣೆ ಸೇರಿ ನಗರದ ವಿವಿಧೆಡೆ ಗುರುವಾರ ಮಧ್ಯಾಹ್ನ 12ಕ್ಕೆ ಏಕಕಾಲಕ್ಕೆ ದಾಳಿ ನಡೆಸಲಾಯಿತು.

ಅಧಿಕಾರಿಗಳ ತಂಡವನ್ನು ಕಂಡ ಕ್ಲಿನಿಕ್‌ಗಳ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದರು. ವೈದ್ಯರು, ಶುಶ್ರೂಷಕರು, ಅರೆ ವೈದ್ಯಕೀಯ ಸಿಬ್ಬಂದಿಯ ಮಾಹಿತಿ ಪಡೆದ ತಂಡ, ಕ್ಲಿನಿಕ್‌ಗಳಲ್ಲಿನ ಉಪಕರಣಗಳನ್ನು ಪರಿಶೀಲಿಸಿತು. ಔಷಧ, ರೋಗಿಗಳ ಮಾಹಿತಿಯನ್ನು ಕಲೆಹಾಕಿತು. ವೈದ್ಯರು, ಚಿಕಿತ್ಸೆ ಹಾಗೂ ದರಪಟ್ಟಿಯನ್ನು ಪ್ರದರ್ಶನ ಮಾಡದೇ ಇರುವುದನ್ನು ಪ್ರಶ್ನಿಸಿತು.

ಚರ್ಮರೋಗ ತಜ್ಞರೇ ಇಲ್ಲ

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ಕೆಪಿಎಂಇ) ಪ್ರಕಾರ ಕೇಶ ಕಸಿ ಚಿಕಿತ್ಸೆಯನ್ನು ಚರ್ಮರೋಗ ತಜ್ಞರು ಮಾತ್ರ ನೀಡಲು ಅವಕಾಶವಿದೆ. ಆದರೆ, ಬಹುತೇಕ ಕೇಶ ಕಸಿ ಕ್ಲಿನಿಕ್‌ಗಳಲ್ಲಿ ಚರ್ಮರೋಗ ತಜ್ಞರೇ ಇಲ್ಲ. ಬಿಎಎಂಎಸ್‌ ವೈದ್ಯರು, ಶುಶ್ರೂಷಕರು, ಅರೆ ವೈದ್ಯಕೀಯ ಸಿಬ್ಬಂದಿಯೇ ಕೇಶ ಕಸಿ ಮಾಡುವುದು ದಾಳಿ ವೇಳೆ ಪತ್ತೆಯಾಗಿದೆ.

‘ಕೇಶ ಕಸಿ ಚಿಕಿತ್ಸೆಗೆ ಬರುವವರ ರಕ್ತವನ್ನು ಪಡೆಯುತ್ತಿದ್ದ ಕ್ಲಿನಿಕ್‌ ಸಿಬ್ಬಂದಿ, ಪ್ಲಾಸ್ಮಾವನ್ನು ವಿಂಗಡಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಎಂಬಿಬಿಎಸ್‌ ವೈದ್ಯರ ಅನುಪಸ್ಥಿತಿಯಲ್ಲಿ ಅರಿವಳಿಕೆ ನೀಡುತ್ತಿದ್ದಾರೆ. ತಲೆ, ಮುಖಕ್ಕೆ ನೀಡುವ ಈ ಚಿಕಿತ್ಸೆಯಿಂದ ಮಿದುಳಿಗೆ ತೊಂದರೆ ಉಂಟಾಗುವ ಅಪಾಯವಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್‌ ಕಳವಳ ವ್ಯಕ್ತಪಡಿಸಿದರು.

ಕೇಶ ಕಸಿ: ದಾಳಿ ಏಕೆ?

‘ವೈದ್ಯಕೀಯ ಅರ್ಹತೆ ಹೊಂದಿಲ್ಲದವರು ಚರ್ಮ ಹಾಗೂ ಕೇಶ ಕಸಿ ಚಿಕಿತ್ಸಾ ತಜ್ಞರ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸಲಾಗುತ್ತಿದೆ’ ಎಂದು ಭಾರತೀಯ ಚರ್ಮರೋಗ ರತಿರೋಗ ಹಾಗೂ ಕುಷ್ಠರೋಗ ತಜ್ಞರ ಸಂಘದ ನಿಯೋಗ ಇತ್ತೀಚೆಗೆ ಜಿಲ್ಲಾಧಿಕಾರಿಗೆ ದೂರು ನೀಡಿತ್ತು.

‘ಅನಧಿಕೃತ ಕ್ಲಿನಿಕ್‌ನಲ್ಲಿ ಮುಖಕ್ಕೆ ಚಿಕಿತ್ಸೆ ಪಡೆದ ವ್ಯಕ್ತಿಯೊಬ್ಬರ ಚರ್ಮ ಸಂಪೂರ್ಣ ಸುಟ್ಟುಹೋಗಿದೆ. ಅನೇಕರು ಸಾಕಷ್ಟು ತೊಂದರೆ ಅನುಭವಿಸಿದ್ದು ಗಮನಕ್ಕೆ ಬಂದಿತ್ತು. ಕೆಲವರು ಅಧಿಕೃತವಾಗಿ ದೂರು ನೀಡಿದರೆ ಇನ್ನೂ ಹಲವರು ದೂರು ನೀಡಲು ಹಿಂದೇಟು ಹಾಕಿದ್ದರು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌. ಷಣ್ಮುಖಪ್ಪ ತಿಳಿಸಿದರು.

ಚಿಕಿತ್ಸೆಗೆ ಕನಿಷ್ಠ 50,000!
ಶಾಮನೂರು ರಸ್ತೆಯ ಕೇಶ ಕಸಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದ ರೋಗಿಯೊಬ್ಬರಿಂದ ₹ 50,000 ವಸೂಲಿ ಮಾಡಿದ ರಸೀದಿಯೊಂದು ಪತ್ತೆಯಾಯಿತು. ಇಲ್ಲಿ ಕೇಶ ಕಸಿ ಚಿಕಿತ್ಸೆಗೆ ಕನಿಷ್ಠ ₹ 50,000ದಿಂದ ₹ 1 ಲಕ್ಷದವರೆಗೆ ದರ ನಿಗದಿಪಡಿಸಲಾಗಿದೆ. ಕೇರಳದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಚಿಕಿತ್ಸಾಲಯ ಕೆಪಿಎಂಇ ಕಾಯ್ದೆಯಡಿ ಪರವಾನಗಿ ಪಡೆದಿಲ್ಲ. ಮೈಸೂರು ಬೆಂಗಳೂರು ಹುಬ್ಬಳ್ಳಿ ಸೇರಿ ಹಲವೆಡೆ ಚಿಕಿತ್ಸಾಲಯಗಳನ್ನು ಹೊಂದಿದೆ. ಕೇಶ ಕಸಿಗೆ ಶಸ್ತ್ರಚಿಕಿತ್ಸಾ ಕೊಠಡಿ ಕೂಡ ಇದೆ. ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶುಶ್ರೂಷಕರೊಬ್ಬರು ಇಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಕೇಶ ಕಸಿ ಕ್ಲಿನಿಕ್‌ಗಳಲ್ಲಿ ಅರ್ಹ ವೈದ್ಯರುಗಳಿಲ್ಲ. ಪರವಾನಗಿ ಪಡೆಯದೇ ವೈದ್ಯಕೀಯ ಉಪಕರಣ ಔಷಧ ಬಳಸಿದ್ದು ಖಚಿತವಾಗಿದೆ. ವೈದ್ಯರ ವಿವರ ಚಿಕಿತ್ಸೆ ಹಾಗೂ ದರದ ಮಾಹಿತಿ ಪ್ರದರ್ಶಿಸಿಲ್ಲ.
– ಡಾ.ಜಿ.ಡಿ. ರಾಘವನ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಚರ್ಮರೋಗ ತಜ್ಞ ಅಥವಾ ಪ್ಲಾಸ್ಟಿಕ್ ಸರ್ಜನ್‌ ಅಲ್ಲದವರು ಕೇಶ ಕಸಿ ಚಿಕಿತ್ಸೆ ನೀಡಲು ಕೆಪಿಎಂಇ ಕಾಯ್ದೆಯಲ್ಲಿ ಅವಕಾಶವಿಲ್ಲ. ಅನಧಿಕೃತ ಕೇಂದ್ರಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ.
– ಡಾ.ಎಸ್‌.ಷಣ್ಮುಖಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.