
ದಾವಣಗೆರೆ: ಜಿಲ್ಲೆಯಲ್ಲಿ ಮಾದಿಗ ಸಮುದಾಯದ ಗುರುಪೀಠ ಸ್ಥಾಪನೆಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದ್ದು, ಸಮುದಾಯದ ಮುಖಂಡರಲ್ಲೇ ಗೊಂದಲ ಏರ್ಪಟ್ಟಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ‘ಬಣ’ಗಳು ಸೃಷ್ಟಿಯಾಗುವ ಆತಂಕವೂ ಸಮುದಾಯದ ನಾಯಕರನ್ನು ಕಾಡುತ್ತಿದೆ.
ಗುರುಪೀಠದ ವಿಚಾರವಾಗಿ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯು ಸಮುದಾಯದವರಲ್ಲಿ ಅಸಮಾಧಾನ ಮೂಡಿಸಿದೆ. ಪತ್ರಿಕಾಗೋಷ್ಠಿಗಳು, ಪ್ರಕಟಣೆಗಳು, ಸಭೆಗಳು ನಿರಂತರವಾಗಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆ ನಡೆಯುವ ಸಾಧ್ಯತೆಯೂ ಇದೆ ಎಂದು ಸಮುದಾಯದ ಮುಖಂಡರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
‘ಸಮುದಾಯದ ಪ್ರಗತಿಗೆ ಗುರಿ ಹಾಗೂ ಗುರು ಅವಶ್ಯ. ಗುರುಪೀಠ ಸ್ಥಾಪಿಸುವುದರಿಂದ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯದವರ ಶ್ರೇಯೋಭಿವೃದ್ಧಿಗೆ ಬಲ ದೊರೆಯಲಿದೆ. ಜಿಲ್ಲೆಯಲ್ಲಿ ಮಠ ನಿರ್ಮಿಸುವುದರಿಂದ ಹಾವೇರಿ, ಹುಬ್ಬಳ್ಳಿ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಸಮುದಾಯದವರಿಗೂ ಅನುಕೂಲ ಆಗಲಿದೆ’ ಎಂಬುದು ಮಾದಿಗ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಅವರ ಮಾತು.
‘ರಾಜ್ಯದಲ್ಲಿ ಈಗಾಗಲೇ ಸಮುದಾಯಕ್ಕೆ ಸೇರಿದ ಮೂರು ಮಠಗಳಿವೆ. ಮಾದಾರ ಚನ್ನಯ್ಯ ಗುರುಪೀಠ, ಕೋಡಿಹಳ್ಳಿಯ ಆದಿಜಾಂಬವ ಮಠ, ಹಂಪಿಯ ಮಾತಂಗ ಗುರುಪೀಠಗಳು ಸಮುದಾಯದ ಪರ ಉತ್ತಮ ಕೆಲಸ ಮಾಡುತ್ತಿವೆ. ನೂತನ ಗುರುಪೀಠ ಸ್ಥಾಪಿಸುವ ಕಾರ್ಯಕ್ಕಿಂತ, ಈಗಾಗಲೇ ಅಸ್ಥಿತ್ವದಲ್ಲಿರುವ ಮಠಗಳನ್ನು ಧಾರ್ಮಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಸುವ ಅವಶ್ಯಕತೆ ಇದೆ’ ಎನ್ನುತ್ತಾರೆ ಸಮುದಾಯದ ಮುಖಂಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಆಲೂರು ನಿಂಗರಾಜ್.
ಕೋಡಿಹಳ್ಳಿಯ ಆದಿಜಾಂಬವ ಮಠದ ಶಾಖಾ ಮಠವನ್ನು ಸ್ಥಾಪಿಸುವುದಾಗಿ ಬಿ.ಎಚ್.ವೀರಭದ್ರಪ್ಪ, ಎಲ್.ಎಂ.ಹನುಮಂತಪ್ಪ, ಹೆಗ್ಗೆರೆ ರಂಗಪ್ಪ, ಎಲ್.ಡಿ.ಗೋಣೆಪ್ಪ ಸೇರಿದಂತೆ ಇನ್ನಿತರ ಮುಖಂಡರು ಆರಂಭದಲ್ಲಿ ಹೇಳಿದ್ದರು. ಆದಿಜಾಂಬವ ಮಠದಿಂದ ಇದಕ್ಕೆ ವಿರೋಧ ವ್ಯಕ್ತವಾದ ಬಳಿಕ ಪ್ರತ್ಯೇಕ ಗುರುಪೀಠ ಸ್ಥಾಪಿಸುವುದಾಗಿ ತಿಳಿಸಿದ್ದಾರೆ.
ಸಮುದಾಯದ ಕೆಲ ಮುಖಂಡರಿಗೆ ಯಾರ ಪರ ಗುರುತಿಸಿಕೊಳ್ಳಬೇಕು ಎಂಬ ಗೊಂದಲ ಕಾಡುತ್ತಿದೆ. ಹಲವು ನಾಯಕರು ಸಾರ್ವಜನಿಕವಾಗಿ ಯಾವುದೇ ನಿಲುವನ್ನು ವ್ಯಕ್ತಪಡಿಸದೇ ಮೌನ ವಹಿಸಿದ್ದಾರೆ.
ಸ್ವಾಮೀಜಿಗಳ ಹೆಸರು ಹಾಗೂ ಭಾವಚಿತ್ರಗಳನ್ನು ಬಳಸಿಕೊಳ್ಳುವ ವಿಚಾರದಲ್ಲೂ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಆದಷ್ಟು ಶೀಘ್ರವೇ ಗೊಂದಲಗಳಿಗೆ ತೆರೆ ಎಳೆಯಬೇಕು. ಸಮುದಾಯದ ಎಲ್ಲರೂ ಒಗ್ಗಟ್ಟಿನಲ್ಲಿ ಸಾಗಬೇಕು ಎನ್ನುತ್ತಾರೆ ಸಮುದಾಯದ ಪ್ರಜ್ಞಾವಂತರು.
ತಮ್ಮನೇ ಇಲ್ಲ: ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ
‘ಆದಿಜಾಂಬವ ಮಠಕ್ಕೆ ತನ್ನದೇ ಆದ ಪರಂಪರೆ ಭಕ್ತಗಣ ಇದೆ. ದಿಢೀರ್ ಎಂದು ಮಠ ಸ್ಥಾಪಿಸುತ್ತೇವೆ ಪೀಠಾಧ್ಯಕ್ಷರನ್ನು ನೀಡಿ ಎಂದರೆ ಹೇಗೆ ಸಾಧ್ಯ’ ಎಂದು ಕೋಡಿಹಳ್ಳಿಯ ಆದಿಜಾಂಬವ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಪ್ರಶ್ನಿಸಿದರು. ‘ಒಂದು ಪೀಠದಿಂದ ಅದರ ಶಾಖೆಗೆ ಮರಿ (ಪೀಠಾಧ್ಯಕ್ಷರು) ನೀಡಲು ಬದ್ಧತೆ ಇರುತ್ತದೆ. ಸುಮ್ಮನೆ ಕೊಡಲಾಗುವುದಿಲ್ಲ. ಪ್ರತ್ಯೇಕ ಮಠ ಮಾಡಲು ನಮ್ಮ ಅಭ್ಯಂತರವಿಲ್ಲ. ನಮ್ಮ ಮಠದಿಂದ ಸಮುದಾಯದ ಸಂಘಟನೆಯ ಕೆಲಸವನ್ನು ಮುಂದುವರಿಸುತ್ತೇವೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ನನಗೆ ತಮ್ಮನೇ ಇಲ್ಲ. ನಾಲ್ವರು ಸಹೋದರರಲ್ಲಿ ನಾನೇ ಕೊನೆಯವನು. ನನ್ನ ತಮ್ಮನನ್ನು ಮಠಾಧೀಶರನ್ನಾಗಿ ಮಾಡಿ ಎಂದು ಸೂಚಿಸಿದ್ದೇನೆ ಎಂಬುದೆಲ್ಲಾ ಕಪೋಲಕಲ್ಪಿತ. ನಾವು ಎಷ್ಟು ಹೋರಾಟ ಮಾಡಿದ್ದೇವೆ ಎಂಬುದು ಜನರಿಗೆ ಗೊತ್ತಿದೆ. ವೇದ ಉಪನಿಷತ್ ಸೇರಿ ಎಲ್ಲಾ ಅಧ್ಯಯನ ಮುಗಿದ ಬಳಿಕ ಪೀಠಾರೋಹಣ ನಡೆಯಬೇಕು. ಫಲಿತಾಂಶ ಪ್ರಕಟಿಸಿದ ಬಳಿಕ ಪರೀಕ್ಷೆ ನಡೆಸಲು ಸಾಧ್ಯವಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.
ಜಿಲ್ಲಾ ಮಟ್ಟದ ಸಭೆ 22ರಂದು
ಗುರುಪೀಠ ಸ್ಥಾಪನೆಯ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಚರ್ಚಿಸಲು ಫೆಬ್ರುವರಿ 22ರಂದು ನಗರದಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸಲು ಸಮುದಾಯದ ಮುಖಂಡರು ಚರ್ಚೆ ನಡೆಸಿದ್ದಾರೆ. ಈಗಾಗಲೇ ಇರುವ ಸಮುದಾಯದ ಮಠಗಳನ್ನು ಸದೃಢಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಸಮುದಾಯದ ನಿವೃತ್ತ ಅಧಿಕಾರಿಗಳು ವಿವಿಧ ಪಕ್ಷಗಳಲ್ಲಿರುವ ಸಮುದಾಯದ ನಾಯಕರು ಬುದ್ಧಿಜೀವಿಗಳು ಸೇರಿದಂತೆ ಎಲ್ಲರನ್ನೂ ಸಭೆಗೆ ಆಹ್ವಾನಿಸಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.ಗುರುಪೀಠ ಸ್ಥಾಪನೆಯ ವಿಚಾರದಲ್ಲಿ ರಾಜಕೀಯ ಬೆರೆಸಬಾರದು. ಮಠದ ವಿಚಾರದಲ್ಲಿ ಗೊಂದಲ ಸಮಸ್ಯೆ ಇದ್ದರೆ ನೇರವಾಗಿ ಸ್ವಾಮೀಜಿಗಳಿಗೆ ತಿಳಿಸುವುದು ಸೂಕ್ತ ಆಲೂರು ನಿಂಗರಾಜ್ ಸಮುದಾಯದ ಮುಖಂಡ
ಗುರುಪೀಠ ಸ್ಥಾಪನೆ ವಿಚಾರವಾಗಿ ಸಮುದಾಯದವರಲ್ಲಿ ಯಾರೂ ಗೊಂದಲ ಸೃಷ್ಟಿಸುವುದು ಬೇಡ. ಗುರುಪೀಠ ಸ್ಥಾಪಿಸಿ ಉದ್ಘಾಟನೆಗೆ ಆಹ್ವಾನಿಸಿದರೆ ಖಂಡಿತಾ ಹೋಗುವೆ.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ
ಎಷ್ಟೇ ಟೀಕೆ ಟಿಪ್ಪಣೆ ಎದುರಾದರೂ ಹಿಂಜರಿಯುವುದಿಲ್ಲ. ಸಮುದಾಯದ ಮುಂದಿನ ಪೀಳಿಗೆಯ ಒಳಿತಿಗಾಗಿ ಸಭೆಯ ನಿರ್ಣಯದಂತೆ ಮಾದಿಗ ಗುರುಪೀಠ ಸ್ಥಾಪಿಸುತ್ತೇವೆ.ಬಿ.ಎಚ್. ವೀರಭದ್ರಪ್ಪ, ಮಾದಿಗ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ
ಸ್ವಾಮೀಜಿಗಳು ಪಕ್ಷಾತೀತವಾಗಿ ಸಮುದಾಯವನ್ನು ಮುನ್ನಡೆಸಿಕೊಂಡು ಹೋಗಬೇಕು. ಸಮುದಾಯದ ಎಲ್ಲರೂ ಕುಳಿತು ಚರ್ಚಿಸಲಿ. ಪ್ರತ್ಯೇಕ ಮಠ ಸ್ಥಾಪಿಸುವುದಕ್ಕಿಂತ ಶಾಖಾ ಮಠ ಸ್ಥಾಪಿಸುವುದು ಉತ್ತಮ.ಸಾಗರ್ ಎಲ್.ಎಂ.ಎಚ್., ಮಹಾನಗರ ಪಾಲಿಕೆ ಮಾಜಿ ಸದಸ್ಯ
ಗುರುಪೀಠ ಸ್ಥಾಪನೆಯ ವಿಚಾರದಲ್ಲಿ ರಾಜಕೀಯ ಬೆರೆಸಬಾರದು. ಮಠದ ವಿಚಾರದಲ್ಲಿ ಗೊಂದಲ ಸಮಸ್ಯೆ ಇದ್ದರೆ ನೇರವಾಗಿ ಸ್ವಾಮೀಜಿಗಳಿಗೆ ತಿಳಿಸುವುದು ಸೂಕ್ತ.ಆಲೂರು ನಿಂಗರಾಜ್, ಸಮುದಾಯದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.