ADVERTISEMENT

ದಾವಣಗೆರೆ:ಹಳ್ಳಿಗಳ ಸರ್ಕಾರಿ ಆಸ್ತಿಗಳ ಡಿಜಿಟಲೀಕರಣಕ್ಕೆ ಮುಂದಾದ ಜಿಲ್ಲಾ ಪಂಚಾಯಿತಿ

ಗ್ರಾಮೀಣ ಪ್ರದೇಶದ ಸರ್ಕಾರಿ ಕಟ್ಟಡಗಳ ಮಾಹಿತಿ ಬೆರಳತುದಿಯಲ್ಲಿ ಲಭ್ಯ, ಸಿದ್ಧವಾಗುತ್ತಿದೆ ವಿಶೇಷ ಜಾಲತಾಣ

ಜಿ.ಬಿ.ನಾಗರಾಜ್
Published 18 ಫೆಬ್ರುವರಿ 2026, 3:11 IST
Last Updated 18 ಫೆಬ್ರುವರಿ 2026, 3:11 IST
ಗಿತ್ತೆ ಮಾಧವ್ ವಿಠ್ಠಲ್‌ರಾವ್
ಗಿತ್ತೆ ಮಾಧವ್ ವಿಠ್ಠಲ್‌ರಾವ್   

ದಾವಣಗೆರೆ: ಗ್ರಾಮೀಣ ಪ್ರದೇಶದ ಸರ್ಕಾರಿ ಕಟ್ಟಡಗಳ ಮಾಹಿತಿ ಹಾಗೂ ನೈಜ ಸ್ಥಿತಿ ಇನ್ನು ಮುಂದೆ ಬೆರಳತುದಿಯಲ್ಲಿ ಲಭ್ಯವಾಗಲಿದೆ. ಹಳ್ಳಿಗಳಲ್ಲಿರುವ ಸರ್ಕಾರಿ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನಕ್ಕೆ ಜಿಲ್ಲಾ ಪಂಚಾಯಿತಿ ಮುಂದಾಗಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಸಹಕಾರದೊಂದಿಗೆ ‘ದಾವಣಗೆರೆ ಡಿಸ್ಟ್ರಿಕ್ಟ್‌ ಇನ್‌ಫರ್ಮೇಷನ್‌ ಸ್ಟಾಕ್‌’ ಎಂಬ ವಿಶೇಷ ಜಾಲತಾಣ ಸಿದ್ಧವಾಗುತ್ತಿದೆ. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿರುವ ಸರ್ಕಾರಿ ಶಾಲೆ, ವಿದ್ಯಾರ್ಥಿನಿಲಯ, ಪಶು ಚಿಕಿತ್ಸಾಲಯಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಗ್ರಾಮ ಪಂಚಾಯಿತಿ ಕಟ್ಟಡಗಳು ಸೇರಿದಂತೆ ಎಲ್ಲ ಆಸ್ತಿಗಳು ಈ ಜಾಲತಾಣದಲ್ಲಿ ಲಭ್ಯವಾಗಲಿವೆ.

ಸರ್ಕಾರಿ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಯೋಜನೆ ರೂಪಿಸುವಲ್ಲಿ ಎದುರಾದ ತೊಡಕುಗಳಿಗೆ ಪರಿಹಾರೋಪಾಯದ ಭಾಗವಾಗಿ ಈ ಜಾಲತಾಣ ರೂಪುಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಲಸೌಲಭ್ಯ ಕಲ್ಪಿಸಲು, ಅನುದಾನದ ಸದ್ಬಳಕೆ ಹಾಗೂ ಪರಿಪೂರ್ಣ ಯೋಜನೆ ಸಿದ್ಧಪಡಿಸಲು ಇದು ನೆರವಾಗಲಿದೆ. ಜಿಲ್ಲಾ ಪಂಚಾಯಿತಿಯ ಈ ಪ್ರಯತ್ನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಮ್ಮತಿ ಸೂಚಿಸಿದೆ.

ADVERTISEMENT

‘ಗ್ರಾಮೀಣ ಪ್ರದೇಶದ ಸರ್ಕಾರಿ ಕಟ್ಟಡಗಳ ಸ್ಥಿತಿಗತಿಯ ನೈಜ ಚಿತ್ರಣ ಒಂದೆಡೆ ಲಭ್ಯವಿಲ್ಲ. ಇದರಿಂದ ಯೋಜನೆಗಳನ್ನು ರೂಪಿಸುವಾಗ ವಾಸ್ತವ ಅರಿಯಲು ಕಷ್ಟವಾಗುತ್ತಿದೆ. ತಪ್ಪು ಮಾಹಿತಿ ಆಧರಿಸಿ ಯೋಜನೆ ರೂಪಿಸಿದರೆ ಸರ್ಕಾರದ ಅನುದಾನ ಪೋಲಾಗುತ್ತದೆ. ಅಲ್ಲದೇ, ಸೌಲಭ್ಯಗಳು ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗುವ ಅಪಾಯವೂ ಇದೆ. ಹೀಗಾಗಿ, ಸರ್ಕಾರಿ ಆಸ್ತಿಗಳ ಡಿಜಿಟಲೀಕರಣ ಹಾಗೂ ಮ್ಯಾಪಿಂಗ್‌ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ಇಂತಹ ಆಸ್ತಿಗಳ ವಿವರವನ್ನು ಒದಗಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪಶುವೈದ್ಯಕೀಯ ಮತ್ತು ಪಶುಸಂಗೋಪಾನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ. ಪ್ರತಿ ಕಟ್ಟಡಗಳ ನೈಜ ಸ್ಥಿತಿಯನ್ನು ಬಿಂಬಿಸುವ ಜಿಪಿಎಸ್‌ ಆಧಾರಿತ ಚಿತ್ರಗಳನ್ನು ಕಳುಹಿಸುವಂತೆ ನಿರ್ದೇಶನ ನೀಡಲಾಗಿದೆ.

ಶಾಲೆಗಳಿಗೆ ಸಂಬಂಧಿಸಿದಂತೆ ಮಾತ್ರ ಹೆಚ್ಚುವರಿ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಕೊಠಡಿಗಳ ಸಂಖ್ಯೆ, ಆಟದ ಮೈದಾನ, ಕಂಪೌಂಡ್‌, ಶೌಚಾಲಯ ಹಾಗೂ ನೀರಿನ ಸೌಲಭ್ಯಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸುಸ್ಥಿತಿಯಲ್ಲಿರುವ ಶಾಲೆಯ ಕೊಠಡಿಗಳು, ಶೌಚಾಲಯದ ಅಗತ್ಯ, ನೀರು ಪೂರೈಕೆಯಲ್ಲಿನ ಸಮಸ್ಯೆಗಳನ್ನು ಅರಿಯಲು ಇದರಿಂದ ಸಾಧ್ಯವಾಗಲಿದೆ.

DVG_Digital-village
ನಾಗರಿಕ ಸೇವೆಗೆ ಸೇರುವ ಮುನ್ನ ಸಾಫ್ಟವೇರ್‌ ಎಂಜಿನಿಯರ್‌ ಆಗಿದ್ದೆ. ಆ ಅನುಭವದ ಆಧಾರದಲ್ಲಿ ಆಡಳಿತ ವ್ಯವಸ್ಥೆಯನ್ನು ಸರಳೀಕರಿಸಲು ಪ್ರಯತ್ನಿಸುತ್ತಿದ್ದೇನೆ
ಗಿತ್ತೆ ಮಾಧವ ವಿಠ್ಠಲರಾವ್‌ ಸಿಇಒ ಜಿಲ್ಲಾ ಪಂಚಾಯಿತಿ

ಹಣ ಪೋಲಾಗುವುದಕ್ಕೆ ಕಡಿವಾಣ

ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್‌ ಅವರು ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ)ಯ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ವಿಭಾಗದ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲಿ ಬಾಕಿ ಭೂ ವ್ಯಾಜ್ಯ ಪ್ರಕರಣಗಳನ್ನು ಡಿಜಿಟಲೀಕರಣ ಮಾಡಿದ್ದರು. ‘ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನಕ್ಕೆ ಸಂಬಂದಿಸಿದಂತೆ 29000 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದವು. ಸರಿಯಾದ ಮಾಹಿತಿ ಲಭ್ಯವಾಗದ ಪರಿಣಾಮ ನ್ಯಾಯಾಲಯದಲ್ಲಿ ಸೋಲು ಕಾಣುತ್ತಿದ್ದೆವು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿತ್ತು. ಪ್ರಕರಣಗಳನ್ನು ಡಿಜಿಟಲೀಕರಣಗೊಳಿಸಿದ ಬಳಿಕ ಇದಕ್ಕೆ ಕಡಿವಾಣ ಬಿದ್ದಿದೆ’ ಎಂದು ಅವರು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.