
ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ಭಾನುವಾರ ವಿಧ್ಯುಕ್ತವಾಗಿ ಆರಂಭವಾಯಿತು. ದೇವಿಗೆ ಅಭಿಷೇಕ ನೆರವೇರಿಸಿ ಕಂಕಣ ಧಾರಣೆ ಮಾಡಲಾಯಿತು. ಪಟ್ಟದ ಕೋಣನ ಮೆರವಣಿಗೆಯೊಂದಿಗೆ ಸಾಗಿದ ಭಕ್ತರು ಜಾತ್ರೆಯ ಬಗ್ಗೆ ಬೀದಿಗಳಲ್ಲಿ ಸಾರು ಹಾಕಿದರು.
ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಶುರುವಾಯಿತು. ಗೌಡ್ರು, ಶಾನುಭೋಗರು, ರೈತರು, ಬಣಕಾರರು, ಬಾಬುದಾರರು, ಕುಂಬಾರರು, ಮಡಿವಾಳರು ಸೇರಿದಂತೆ ಎಲ್ಲರ ಉಪಸ್ಥಿತಿಯಲ್ಲಿ ಅರ್ಚಕರು ಮೊದಲ ದಿನ ಧಾರ್ಮಿಕ ಕೈಂಕರ್ಯ ನೆರವೇರಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಗೆ ನಸುಕಿನಲ್ಲಿ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಆ ಬಳಿಕ ಮುಖಕವಚ ಅಳವಡಿಸಲಾಯಿತು. ಚಿನ್ನದ ಕಿರೀಟ, ಕಂಠಿಹಾರ, ವಜ್ರ ಖಚಿತ ಹರಳಿನ ಸರ ಸೇರಿದಂತೆ ಆಭರಣಗಳು ದೇವಿಯ ಕೊರಳನ್ನು ಅಲಂಕರಿಸಿದವು. ಡಬ್ಬಿಗಡಿಗೆ (ದೇಣಿಗೆ ಸಂಗ್ರಹ) ಮೂಲಕ ಸಂಗ್ರಹಿಸಿದ್ದ ದೇಣಿಗೆಯಲ್ಲಿ ತಂದಿದ್ದ ಅರಿಶಿನ ಬಣ್ಣದ ಪಟ್ಟದ ಸೀರೆಯನ್ನು ದೇವಿಗೆ ಉಡಿಸಲಾಯಿತು.
ಈ ಕೈಂಕರ್ಯಗಳು ಮುಗಿಯುವ ಮುನ್ನವೇ ದೇಗುಲದ ಮುಂಭಾಗದಲ್ಲಿ ಭಕ್ತರು ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ವಿಶೇಷವಾಗಿ ನಿರ್ಮಿಸಿದ ಅರಮನೆ ಮಾದರಿಯ ಮಹಾಮಂಟಪ ಭರ್ತಿಯಾಗಿತ್ತು. ಅಕ್ಕಿ, ಬೇಳೆ, ಬೆಲ್ಲ, ಚಿನ್ನಾಭರಣ, ಬಟ್ಟೆ ಸೇರಿದಂತೆ ಇತರ ಕಾಣಿಕೆಗಳೊಂದಿಗೆ ದೇಗುಲ ಪ್ರವೇಶಿಸಿ ಗರ್ಭಗುಡಿಯಲ್ಲಿನ ದೇವಿಯ ದರ್ಶನ ಪಡೆದು ಪುನೀತರಾದರು.
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ದೇವಿಯ ದರ್ಶನ ಪಡೆದ ಭಕ್ತರು
ಕಳೆಗಟ್ಟಿದ ಜಾತ್ರೆ
ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ಮೊದಲ ದಿನವೇ ಕಳೆಗಟ್ಟಿದೆ. ದೇಗುಲವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ದೇಗುಲದ ಮುಂಭಾಗ ಹಣ್ಣು, ಕಾಯಿ ಸೇರಿದಂತೆ ಪೂಜಾ ಸಮಗ್ರಿಗಳ ಮಳಿಗೆಗಳಿವೆ. ಬರಿಗಾಲಲ್ಲಿ ಬರುವ ಭಕ್ತರು ದರ್ಶನಕ್ಕೂ ಮುನ್ನ ಪೂಜಾ ಸಾಮಗ್ರಿ ಖರೀದಿಸಿ ಮುಂದೆ ಸಾಗುತ್ತಿದ್ದಾರೆ. ಭಾನುವಾರ ರಜಾ ದಿನವಾಗಿದ್ದರಿಂದ ಭಕ್ತರ ಸಂಖ್ಯೆ ನಿರೀಕ್ಷೆಗೂ ಹೆಚ್ಚಿತ್ತು.
ದೇಗುಲದ ಸುತ್ತ 50ಕ್ಕೂ ಅಧಿಕ ಮಳಿಗೆಗಳು ತೆರೆದಿವೆ. ಮಹಾಮಂಟಪ ಪ್ರಮುಖ ಆಕರ್ಷಣೆಯಾಗಿದೆ. ದೇವಿಯ ಉತ್ಸವ ಮೂರ್ತಿಯನ್ನು ಹೋಲುವ ವಿಗ್ರಹ ಮಂಟಪದಲ್ಲಿದ್ದು, ಭಕ್ತರು ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು. ದೇವಿ ದರ್ಶನಕ್ಕೆ ಸಾಮಾನ್ಯ, ತುರ್ತು ಹಾಗೂ ಗಣ್ಯರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ.
ಸ್ನಾನ, ಶೌಚಾಲಯ ವ್ಯವಸ್ಥೆ
ಹರಕೆ ಹೊತ್ತು ಬರುವ ಭಕ್ತರು ದೇವಿಗೆ ಉರುಳು ಸೇವೆ, ದೀಡ್ ನಮಸ್ಕಾರ ಹಾಕುತ್ತಾರೆ. ಬೇವಿನ ಉಡುಗೆ ತೊಟ್ಟು ಹರಕೆ ತೀರಿಸುತ್ತಾರೆ. ಉರುಳು ಸೇವೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೇಗುಲದ ಸುತ್ತ ಭಾನುವಾರ ರಾತ್ರಿ ಮರಳು ಹಾಕಲಾಯಿತು.
ದೇಗುಲದ ಎರಡು ಬದಿಯಲ್ಲಿ ಸ್ನಾನಕ್ಕೆ ನಲ್ಲಿ (ನಳ) ಅಳವಡಿಸಲಾಗಿದೆ. ಬಟ್ಟೆ ಬದಲಿಸಲು ತಾತ್ಕಾಲಿಕ ಶೆಡ್‌ಗಳನ್ನು ಅಳವಡಿಸಲಾಗಿದೆ. ನಾಲ್ಕು ಸ್ಥಳಗಳಲ್ಲಿ ಶೌಚಾಲಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಉರುಳು ಸೇವೆ ಆರಂಭವಾಗಲಿದ್ದು, ಭಕ್ತರ ಸಂಖ್ಯೆ ಹೆಚ್ಚಾಗಲಿದೆ.
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಜಾತ್ರೆ ಅಂಗವಾಗಿ ಸಾರು ಹಾಕುವ ಕಾರ್ಯ ಭಾನುವಾರ ರಾತ್ರಿ ನಡೆಯಿತು
₹ 11.8 ಲಕ್ಷ ದೇಣಿಗೆ ಸಂಗ್ರಹ
ದೇಗುಲದ ಮುಂಭಾಗ ಹಂದರಗಂಬ ಹಾಕುವ ಮೂಲಕ ಜಾತ್ರೆಯ ಧಾರ್ಮಿಕ ಕೈಂಕರ್ಯಕ್ಕೆ ಜ.20ರಂದು ಚಾಲನೆ ನೀಡಲಾಗಿತ್ತು. ಜ.23ರಿಂದ ಡಬ್ಬಿಗಡಿಗೆ (ದೇಣಿಗೆ ಸಂಗ್ರಹ) ಶುರುವಾಗಿತ್ತು. ದೇವಸ್ಥಾನ ಟ್ರಸ್ಟ್‌ನ ಸದಸ್ಯರು ವಾಲಗ ಭಜಂತ್ರಿಯ ಜೊತೆಗೆ ದೇಣಿಗೆ ಸಂಗ್ರಹಕ್ಕೆ ಮಾಡಿದರು. 20 ದಿನ ನಗರದ ವಿವಿಧ ಬೀದಿಗಳಲ್ಲಿ ಈ ಪ್ರಕ್ರಿಯೆ ನಡೆದಿತ್ತು. ಈ ಬಾರಿ ₹ 11.8 ಲಕ್ಷ ದೇಣಿಗೆ ಸಂಗ್ರಹವಾಗಿದ್ದು ಜಾತ್ರೆಯಲ್ಲಿ ದೇವಿಗೆ ಅಗತ್ಯವಿರುವ ಎಲ್ಲ ಪರಿಕರಗಳನ್ನು ಇದೇ ಹಣದಲ್ಲಿ ಖರೀದಿಸಲಾಗುತ್ತಿದೆ.
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಜಾತ್ರೆ ಅಂಗವಾಗಿ ಕೋಣವನ್ನು ವಾಹನದಲ್ಲಿ ಮೆರವಣಿಗೆ ಮಾಡಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.