ADVERTISEMENT

ದಾವಣಗೆರೆ: ಚಿನ್ಮಯಿ ಕೃಷ್ಣದಾಸ್‌ ಬಿಡುಗಡೆಗೆ ಹಿಂದೂ ಹಿತರಕ್ಷಣಾ ಸಮಿತಿ ಆಗ್ರಹ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 10:20 IST
Last Updated 2 ಡಿಸೆಂಬರ್ 2024, 10:20 IST
<div class="paragraphs"><p>ದಾವಣಗೆರೆ ‘ಇಸ್ಕಾನ್‌’ ಮುಖ್ಯಸ್ಥ ಅವಧೂತ ಚಂದ್ರದಾಸ್‌</p></div>

ದಾವಣಗೆರೆ ‘ಇಸ್ಕಾನ್‌’ ಮುಖ್ಯಸ್ಥ ಅವಧೂತ ಚಂದ್ರದಾಸ್‌

   

ದಾವಣಗೆರೆ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕು ಹಾಗೂ ಬಂಧನದಲ್ಲಿರುವ ‘ಇಸ್ಕಾನ್‌’ ಸನ್ಯಾಸಿ ಚಿನ್ಮಯಿ ಕೃಷ್ಣದಾಸ್‌ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ವಿಶ್ವಸಮುದಾಯ ಒತ್ತಡ ಹೇರಬೇಕು ಎಂದು ಹಿಂದೂ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.

‘ಬಾಂಗ್ಲಾದೇಶದಲ್ಲಿ ಮುಸ್ಲಿಂ ಮೂಲಭೂತವಾದಿ ಶಕ್ತಿಗಳ ದೌರ್ಜನ್ಯ ಹೆಚ್ಚಾಗಿದೆ. ದೇಗುಲ ಹಾಗೂ ಹಿಂದೂಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ವರದಿಗಳು ಆಘಾತಕಾರಿಯಾಗಿವೆ. ಪ್ರಜಾತಾಂತ್ರಿಕ ಮಾರ್ಗದಲ್ಲಿ ಧ್ವನಿ ಎತ್ತುವವರ ವಿರುದ್ಧ ಬಲವಂತದ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಖಂಡನೀಯ’ ಎಂದು ದಾವಣಗೆರೆ ‘ಇಸ್ಕಾನ್‌’ ಮುಖ್ಯಸ್ಥ ಅವಧೂತ ಚಂದ್ರದಾಸ್‌ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ವಿಭಜನೆ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಶೇ 32ರಷ್ಟು ಹಿಂದೂ ಜನಸಂಖ್ಯೆ ಇತ್ತು. ಇತ್ತೀಚೆಗೆ ಇದು ಶೇ 8ಕ್ಕೆ ಕುಸಿದಿದೆ. ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯದ ಮೇಲೆ ನಿರಂತರವಾಗಿ ದಾಳಿಗಳನ್ನು ನಡೆಸಲಾಗುತ್ತಿದೆ. ಧಾರ್ಮಿಕ ಸಂಸ್ಥೆ, ವಾಣಿಜ್ಯ ಕೇಂದ್ರಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಮಾನವ ಹಕ್ಕು ದಮನ ಹಾಗೂ ಧಾರ್ಮಿಕ ಹಕ್ಕು ಚ್ಯುತಿಗೊಳಿಸಲಾಗುತ್ತಿದೆ. ಈ ಕಿರುಕುಳ ನಿಲ್ಲಿಸುವಂತೆ ಭಾರತ ಕೋರಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂದರ್ಭದಲ್ಲಿ ಭಾರತವು ಬಾಂಗ್ಲಾದೇಶಕ್ಕೆ ಹೆಚ್ಚು ನೆರವು ನೀಡಿದೆ. ಉಪಕಾರ ಮರೆತು ಜನರು ವರ್ತಿಸುತ್ತಿದ್ದಾರೆ. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಗೆ ಮತ್ತು ಮಾನವ ಹಕ್ಕು ರಕ್ಷಣೆಗೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು ವಿಶ್ವ ಸಮುದಾಯದ ಜವಾಬ್ದಾರಿ ಕೂಡ ಹೌದು. ಅಮೆರಿಕ ಸೇರಿ ಎಲ್ಲ ರಾಷ್ಟ್ರಗಳು ಮಧ್ಯ ಪ್ರವೇಶ ಮಾಡಬೇಕು’ ಎಂದು ಆಗ್ರಹಿಸಿದರು.

‘ಬಾಂಗ್ಲಾದೇಶದಲ್ಲಿರುವ ಹಿಂದೂ ದೇಗುಲಗಳ ಸಂರಕ್ಷಣೆಯಾಗಬೇಕು. ಮನೆ, ಮಂದಿರಗಳ ಮೇಲಿನ ದಾಳಿ ನಿಯಂತ್ರಿಸಬೇಕು. ದಾಳಿಯಿಂದ ನಾಶಗೊಂಡಿರುವ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಪುನರ್‌ ನಿರ್ಮಾಣ ಮಾಡಬೇಕು. ಹಿಂದೂ ವಿರೋಧಿ ನೀತಿಯನ್ನು ತಕ್ಷಣ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಹಿಂದೂ ಹಿತರಕ್ಷಣಾ ಸಮಿತಿಯ ಮುಖಂಡರಾದ ಸತೀಶ್‌ ಪೂಜಾರಿ, ಸಿದ್ಧಲಿಂಗಸ್ವಾಮಿ, ಟಿ.ಆರ್‌.ಕೃಷ್ಣಪ್ಪ, ವಿಶ್ವಾಸ್‌, ರಾಜು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಡಿ.4ರಂದು ಪ್ರತಿಭಟನೆ

ಬಾಂಗ್ಲಾದೇಶದಲ್ಲಿ ಬಂಧನದಲ್ಲಿರುವ ‘ಇಸ್ಕಾನ್‌’ ಸನ್ಯಾಸಿ ಚಿನ್ಮಯ ಕೃಷ್ಣದಾಸ್‌ ಬಿಡುಗಡೆಗೆ ಆಗ್ರಹಿಸಿ ಡಿ.4ರಂದು ಬೆಳಿಗ್ಗೆ 10.30ಕ್ಕೆ ಜಯದೇವ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಸದಸ್ಯ ಎಸ್‌.ಟಿ.ವೀರೇಶ್‌ ಮಾಹಿತಿ ನೀಡಿದರು.

‘ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೂಲಭೂತವಾದಿ ಶಕ್ತಿಗಳ ಅಟ್ಟಹಾಸ ಹೆಚ್ಚಾಗಿದೆ. ಹಿಂದೂಗಳ ಹತ್ಯೆಯನ್ನು ನಿಲ್ಲಿಸಲು ಸೇನಾ ಶಕ್ತಿಯನ್ನು ಬಳಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.