ADVERTISEMENT

ದಾವಣಗೆರೆ: ‘ಮ್ಯಾಂಚೆಸ್ಟರ್‌’ನಿಂದ ‘ಶಿಕ್ಷಣ ಕಾಶಿ’ಯಾದ ಊರು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 2:45 IST
Last Updated 15 ಡಿಸೆಂಬರ್ 2025, 2:45 IST
<div class="paragraphs"><p>ವಿಧಾನಸಭೆ ಚುನಾವಣೆಯಲ್ಲಿ ಜಯ ಗಳಿಸಿದ್ದ ಸಂದರ್ಭದಲ್ಲಿ ಪುತ್ರ, ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರಿಗೆ ಆಶೀರ್ವಾದ ಮಾಡಿದ್ದ ಕ್ಷಣ<br>&nbsp;&nbsp;&nbsp;</p></div>

ವಿಧಾನಸಭೆ ಚುನಾವಣೆಯಲ್ಲಿ ಜಯ ಗಳಿಸಿದ್ದ ಸಂದರ್ಭದಲ್ಲಿ ಪುತ್ರ, ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರಿಗೆ ಆಶೀರ್ವಾದ ಮಾಡಿದ್ದ ಕ್ಷಣ
   

   

–ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್‌

ದಾವಣಗೆರೆ: ಒಂದು ಕಾಲದಲ್ಲಿ ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದೇ ಕರೆಸಿಕೊಳ್ಳುತ್ತಿದ್ದ ದಾವಣಗೆರೆಯನ್ನು ವಿದ್ಯಾ ಕಾಶಿಯನ್ನಾಗಿ ರೂಪಿಸಿದ ಶ್ರೇಯಸ್ಸು ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ.

ADVERTISEMENT

ಜಾತ್ಯತೀತ, ಪಕ್ಷಾತೀತ, ಜನೋಪಕಾರಿ ನಾಯಕರಾಗಿದ್ದ ಶಿವಶಂಕರಪ್ಪ, ಕೇವಲ ದಾವಣಗೆರೆಗೆ ಮಾತ್ರ ಸೀಮಿತರಾದವರಲ್ಲ. ಶಿಕ್ಷಣ ಒಂದೇ ಅವರ ಕಾರ್ಯಕ್ಷೇತ್ರವಾಗಿರಲಿಲ್ಲ.

ಸಮಾಜ ಸೇವೆ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಆ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಜಾತ್ಯತೀತ, ಪಕ್ಷಾತೀತ, ಜನೋಪಕಾರಿ ನಿಲುವನ್ನೇ ಪ್ರತಿಪಾದಿಸಿಕೊಂಡು ಬಂದವರು. ಜಾತಿ–ಧರ್ಮಗಳ ಆಚೆಗಿನ ಸಾಮರಸ್ಯ ಅವರ ಬದುಕಿನ ಉಸಿರಾಗಿತ್ತು ಎಂದರೆ ಉತ್ಪ್ರೇ‌ಕ್ಷೆಯಲ್ಲ. ಸರ್ವಧರ್ಮ ಸಮನ್ವಯದ ಪ್ರತಿಪಾದಕ ಎಂಬ ಮಾತು ಅವರಿಗೆ ಒಪ್ಪುವಂಥದ್ದು.

ಶಿವಶಂಕರಪ್ಪ ಎಂದರೆ ಕೇವಲ ರಾಜಕಾರಣಿ ಆಗಿರಲಿಲ್ಲ. ಶಿಕ್ಷಣ ಕ್ಷೇತ್ರವನ್ನು ಕಟ್ಟಿ ಬೆಳೆಸಿದವರಷ್ಟೇ ಅಲ್ಲ. ಅವರಲ್ಲೊಬ್ಬ ಲೋಕಾನುಭವಿ ಇದ್ದರು. ಸರ್ವಧರ್ಮ ಸಮನ್ವಯದ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತುಕೊಂಡವರಾಗಿದ್ದರು. ರಾಜಕೀಯದಲ್ಲಿ ಧರ್ಮವನ್ನು ಪ್ರತಿಪಾದಿಸುತ್ತಿದ್ದರೇ ಹೊರತು ಧರ್ಮದಲ್ಲಿ ಎಂದಿಗೂ ರಾಜಕೀಯ ಪ್ರವೇಶಿಸದಂತೆ ನೋಡಿಕೊಂಡವರು. ಹೀಗಾಗಿಯೇ ನಾಡಿನ ಎಲ್ಲ ಮಠಗಳು, ಧರ್ಮ ಕ್ಷೇತ್ರಗಳು ಅವರ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದವು.

ಶಿವಶಂಕರಪ್ಪ ಕಾಂಗ್ರೆಸ್ ಪಕ್ಷದವರಾದರೂ ಎಲ್ಲ ಪಕ್ಷಗಳ ಮುಖಂಡರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಮಾಜಿ ಮುಖ್ಯಮಂತ್ರಿ ದೇವರಾಜ್‌ ಅರಸು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾಗಿದ್ದ ಕೆ.ಎಚ್. ರಂಗನಾಥ್, ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್‌, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಎಲ್ಲರ ಒಡನಾಡಿಯಾಗಿದ್ದರು. ಶತ್ರುಗಳಲ್ಲೂ ಮಿತ್ರತ್ವ ಕಾಣುತ್ತ ‘ಅಜಾತ ಶತ್ರು’ವೆಂದೇ ಹೆಸರಾಗಿದ್ದರು.

1994ರವರೆಗೆ ಅವರಿಗೆ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ದೊರೆತಿರಲಿಲ್ಲ. ಬಲಾಢ್ಯ ರಾಜಕಾರಣಿಗಳ ಒಡನಾಟವಿದ್ದರೂ ಹೈಕಮಾಂಡ್ ಜೊತೆಗೆ ಉತ್ತಮ ಬಾಂಧವ್ಯವಿದ್ದರೂ ಕಾಣದ ಕೈಗಳು ಅವರಿಗೆ ಟಿಕೆಟ್ ಸಿಗದಂತೆ ನೋಡಿಕೊಂಡಿದ್ದವು. ಕೊನೆಗೆ ಅವರಿಗೆ ಆ ಅವಕಾಶ ಸಿಕ್ಕಿದ್ದು ಕೇಂದ್ರ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರಿಂದ.

ಪ್ರಾಪಂಚಿಕ ಸುಖದ ಭೋಗ- ಭಾಗ್ಯಗಳನ್ನೆಲ್ಲ ಅನುಭವಿಸುತ್ತಲೇ ಅವೆಲ್ಲವನ್ನೂ ಮೀರಿದ ಸಂತನಂತೆ ಬದುಕಿದವರು ಅವರು. ಲೌಕಿಕದಲ್ಲಿದ್ದೇ ಅಲೌಕಿಕವನ್ನು ಮುಟ್ಟಲು ತವಕಿಸಿದವರು.

ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿ ಎಲ್ಲ ಸಮ್ಮೇಳನಗಳಿಗೂ ಕಾಯಂ ಮಹಾ ಪೋಷಕರಾಗಿರುತ್ತಿದ್ದರು. ಕೋವಿಡ್‌ ಸಂದರ್ಭದಲ್ಲಿ ಸ್ವತಃ ಹಣ ಖರ್ಚು ಮಾಡಿ ಲಸಿಕೆ ತರಿಸಿ ಪ್ರತಿ ವಾರ್ಡ್‌ನ ಜನರಿಗೂ ಹಂಚಿಸಿದ್ದರು. ಒಮ್ಮೆ ಮಾತ್ರ ಲೋಕಸಭಾ ಚುನಾವಣೆಯಲ್ಲಿ ಅವರು ಸೋತದ್ದು ಬಿಟ್ಟರೆ ಆರು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರು. ಒಮ್ಮೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ನೂರು ವರ್ಷ ಬಾಳಿ ಎಂದು ಹಾರೈಸುತ್ತಿದ್ದ ಸ್ವಾಮೀಜಿಗಳಿಗೆ ಆರೋಗ್ಯ ಕೊಡುವಂತೆ ಆಶೀರ್ವದಿಸಲು ಕೇಳಿಕೊಳ್ಳುತ್ತಿದ್ದರು.

ಒಟ್ಟಾರೆ ದಾವಣಗೆರೆಯ ಜೀವನಾಡಿಯೇ ಆಗಿದ್ದ ಶತಮಾನದ ಪುರುಷನ ಯುಗಾಂತ್ಯವಾದಂತಾಗಿದೆ.

-ಲೇಖಕರು ಹಿರಿಯ ಪತ್ರಕರ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.