
ದಾವಣಗೆರೆ: ಸಾಂಕ್ರಾಮಿಕ ರೋಗಕ್ಕೆ 6 ಚುಕ್ಕೆ ಜಿಂಕೆಗಳು ಬಲಿಯಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯ ವೀಕ್ಷಣೆಗೆ ಪ್ರವಾಸಿಗರಿಗೆ ಮಾಸಾಂತ್ಯದವರೆಗೆ ನಿರ್ಬಂಧ ವಿಧಿಸಲಾಗಿದೆ. ಚುಕ್ಕೆ ಜಿಂಕೆಗಳ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ನಗರದಿಂದ 18 ಕಿ.ಮೀ ದೂರದಲ್ಲಿರುವ ಕಿರು ಮೃಗಾಲಯದಲ್ಲಿ ಜ.16ರಿಂದ 18ರವರೆಗೆ ನಾಲ್ಕು ಚುಕ್ಕೆ ಜಿಂಕೆಗಳು ‘ಹೆಮರಾಜಿಕ್ ಸೆಪ್ಟಿಸೆಮಿಯಾ’ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿದ್ದವು. ರೋಗ ಹರಡದಂತೆ ಮುನ್ನೆಚ್ಚರಿಕೆ ಕೈಗೊಂಡ ಅರಣ್ಯ ಇಲಾಖೆ, ಜ.19ರಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು. ಸೂಕ್ಷ್ಮ ಜೀವಿಗಳಾಗಿರುವ ಜಿಂಕೆಗಳನ್ನು ಮಾನವ ಸಂಪರ್ಕದಿಂದ ದೂರವಿಡುವ ಉದ್ದೇಶದಿಂದ ಫೆಬ್ರುವರಿ ಅಂತ್ಯದವರೆಗೆ ಮೃಗಾಲಯದ ಪ್ರವೇಶ ದ್ವಾರವನ್ನು ಮುಚ್ಚಲಾಗಿದೆ.
‘ರೋಗಲಕ್ಷಣ ಹೊಂದಿದ ಜಿಂಕೆಗಳನ್ನು ಗುಂಪಿನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಅವುಗಳ ಮೇಲೆ ಮೃಗಾಲಯ ಸಿಬ್ಬಂದಿ ನಿಗಾ ಇಟ್ಟಿದ್ದಾರೆ. ತುಂಬ ಸೂಕ್ಷ್ಮವಾಗಿರುವ ಈ ಜೀವಿಗಳ ಬಳಿಗೆ ಕೆಲಸಗಾರರು ಹೋಗುತ್ತಿಲ್ಲ. ಔಷಧ ನಿಲ್ಲಿಸಲಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಆಹಾರವನ್ನು ಮಾತ್ರ ನೀಡಲಾಗುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎನ್. ಹರ್ಷವರ್ಧನ್ ಮಾಹಿತಿ ನೀಡಿದರು.
‘ಪಶುವೈದ್ಯಕೀಯ ಮತ್ತು ಪಶುಪಾಲನಾ ಇಲಾಖೆಯ ಪಶುವೈದ್ಯರು ನಿತ್ಯವೂ ಮೃಗಾಲಯಕ್ಕೆ ಭೇಟಿ ನೀಡಿ ಜಿಂಕೆಗಳನ್ನು ಪರಿಶೀಲಿಸುತ್ತಿದ್ದಾರೆ. ಜಿಂಕೆಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮತ್ತೆ ಪ್ರವಾಸಿಗರನ್ನು ಆಕರ್ಷಿಸಲಿವೆ’ ಎಂದು ಅವರು ವಿವರಿಸಿದರು.
ಪ್ರವಾಸಿಗರನ್ನು ನಿರ್ಬಂಧಿಸಿದ್ದರಿಂದ ಮೃಗಾಲಯದ ಆದಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವನ್ಯಜೀವಿಗಳಿಗೆ ಮಾರಣಾಂತಿಕವಾಗಿರುವ ‘ಹೆಮರಾಜಿಕ್ ಸೆಪ್ಟಿಸೆಮಿಯಾ’ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಈ ಕ್ರಮ ಅನಿವಾರ್ಯವಾಗಿದೆ. ಅಲ್ಲದೇ, ಈ ರೋಗವು ಜಿಂಕೆಗಳಿಂದ ಇತರ ಪ್ರಾಣಿಗಳಿಗೂ ಸುಲಭವಾಗಿ ಹರಡುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
1993ರಲ್ಲಿ ಅಭಿವೃದ್ಧಿಪಡಿಸಿದ ಈ ಮೃಗಾಲಯ 26 ಎಕರೆ ಪ್ರದೇಶದಲ್ಲಿದೆ. ಆನಗೋಡು ಮೀಸಲು ಅರಣ್ಯಕ್ಕೆ ಹೊಂದಿಕೊಂಡಿದ್ದು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿದೆ. 8 ಪ್ರಭೇದಕ್ಕೆ ಸೇರಿದ 200ಕ್ಕೂ ಅಧಿಕ ವನ್ಯಜೀವಿಗಳು ಇಲ್ಲಿವೆ. ಇದರಲ್ಲಿ 164 ಜಿಂಕೆ, 2 ಕರಡಿ, ನವಿಲು, ಲವ್ ಬರ್ಡ್ಸ್, ಕಾಡುಕೋಳಿ, ಗಿಳಿ ಸೇರಿದಂತೆ ಹಲವು ವನ್ಯಜೀವಿಗಳು ಪ್ರವಾಸಿಗರಿಗೆ ಆಕರ್ಷಕವಾಗಿವೆ.
ಸಾವಿನ ಸಂಖ್ಯೆ 6ಕ್ಕೆ ಏರಿಕೆ ‘ಹೆಮರಾಜಿಕ್ ಸೆಪ್ಟಿಸೆಮಿಯಾ’ ಸಾಂಕ್ರಾಮಿಕ ರೋಗಕ್ಕೆ ಮತ್ತೆರಡು ಚುಕ್ಕೆ ಜಿಂಕೆಗಳು ಮೃತಪಟ್ಟಿದ್ದು ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಮೃಗಾಲಯದಲ್ಲಿ ಜ.16ರಂದು ಚುಕ್ಕೆ ಜಿಂಕೆಯೊಂದು ಮೃತಪಟ್ಟಿತ್ತು. ಜ.17ರಂದು ಎರಡು ಹಾಗೂ ಜ.18ರಂದು ಮತ್ತೊಂದು ಜಿಂಕೆ ಮೃತಪಟ್ಟಿತ್ತು. ನಾಲ್ಕು ಜಿಂಕೆ ಮೃತಪಟ್ಟಿದ್ದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ವನ್ಯಜೀವಿಗಳಿಗೆ ಚಿಕಿತ್ಸೆ ಪ್ರಾರಂಭಿಸಿತ್ತು. ಇತ್ತೀಚಿಗೆ ಮತ್ತೆ ಎರಡು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆಯ ಮೂಲಗಳು ಖಚಿತಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.