ADVERTISEMENT

ದಾವಣಗೆರೆ | ಮಕ್ಕಳ ಪಾಲನೆ ಬಗ್ಗೆ ಜಗಳ: ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 11:41 IST
Last Updated 23 ಸೆಪ್ಟೆಂಬರ್ 2025, 11:41 IST
<div class="paragraphs"><p>ಚಾಕು</p></div>

ಚಾಕು

   

(ಸಾಂದರ್ಭಿಕ ಚಿತ್ರ)

ದಾವಣಗೆರೆ: ಮಕ್ಕಳ ಪಾಲನೆಗೆ ಸಂಬಂಧಿಸಿದ ವಿಚಾರವನ್ನು ಬಗೆಹರಿಸಿಕೊಳ್ಳಲು ಮುಂದಾದ ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಗರದ ಎಂಸಿಸಿ ಬಡಾವಣೆಯ ಬಾಲ ನ್ಯಾಯ ಮಂಡಳಿಯ ಆವರಣದಲ್ಲಿ ಮಂಗಳವಾರ ಈ ಕೃತ್ಯ ನಡೆದಿದೆ.

ADVERTISEMENT

ತಾಲ್ಲೂಕಿನ ಕಾಡಜ್ಜಿ ಗ್ರಾಮದ ಮುಷ್ಕಾನ್ ಬಾನು (26) ಕೊಲೆಯಾದ ಮಹಿಳೆ. ಕಲೀಂವುಲ್ಲಾ (35) ಕೊಲೆ ಮಾಡಿದ ಆರೋಪಿ. ಜಗಳ ಬಿಡಿಸಲು ಪ್ರಯತ್ನಿಸಿದ ಬಾನು ಅವರ ತಾಯಿ ಪರ್ಜಾನ್ (50) ಕೂಡ ಚಾಕು ಇರಿತಕ್ಕೆ ಒಳಗಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಷ್ಕಾನ್‌ ಬಾನು ಹಾಗೂ ಕಲೀಂವುಲ್ಲಾ ದಂಪತಿ ಕೌಟುಂಬಿಕ ಕಲಹದಿಂದ ಮನನೊಂದು ವಿಚ್ಛೇದನ ಪಡೆಯಲು ಮುಂದಾಗಿದ್ದರು. ಇಬ್ಬರು ಮಕ್ಕಳ ಪಾಲನೆಯ ವಿಚಾರದಲ್ಲಿ ಸೃಷ್ಟಿಯಾದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಬಾಲ ನ್ಯಾಯ ಮಂಡಳಿಯ ಮೆಟ್ಟಿಲೇರಿದ್ದರು ಎಂದು ಬಡಾವಣೆ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದ ವಿಚಾರಣೆಗೆ ದಂಪತಿ ಮಂಗಳವಾರ ಮಧ್ಯಾಹ್ನ ನ್ಯಾಯ ಮಂಡಳಿಗೆ ಹಾಜರಾಗಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಮಹಿಳೆಗೆ ಆರೋಪಿ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಷ್ಕಾನ್‌ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗ ಮಧ್ಯೆದಲ್ಲೇ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.