ದಾವಣಗೆರೆಯ ಚಾಮರಾಜಪೇಟೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ತರಕಾರಿಗಳನ್ನು ವ್ಯಕ್ತಿಯೊಬ್ಬರು ತಳ್ಳುಗಾಡಿಯಲ್ಲಿ ಸಾಗಿಸುತ್ತಿರುವುದು ಕಂಡುಬಂತು
ಪ್ರಜಾವಾಣಿ ಚಿತ್ರಗಳು: ಸತೀಶ ಬಡಿಗೇರ್
ದಾವಣಗೆರೆ: ‘ಮಳೆ ಬಂದರೆ ಕೇಡಲ್ಲ, ಮಗ ಉಂಡರೆ ಕೇಡಲ್ಲ’ ಎಂಬ ಗಾದೆ ಪ್ರಚಲಿತದಲ್ಲಿದೆ. ಆದರೆ, ಸತತ ನಾಲ್ಕು ತಿಂಗಳಿಂದ (ಏಪ್ರಿಲ್ ಕೊನೆಯ ವಾರ) ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹಲವರ ಉಪ ಜೀವನಕ್ಕೆ ಅಡ್ಡಿಯಾಗಿ, ಕೇಡಾಗಿ ಪರಿಣಮಿಸಿದೆ.
‘ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯ ಕಾರಣಕ್ಕೆ ವ್ಯಾಪಾರವೇ ನಡೆಯುತ್ತಿಲ್ಲ. ಬಂಡವಾಳ ಹಾಕಿ ತಂದ ತರಕಾರಿಯನ್ನು ಮಾರಾಟ ಮಾಡಲಾಗುತ್ತಿಲ್ಲ. ನಿತ್ಯವೂ ಉಳಿಯುತ್ತಿರುವ ತರಕಾರಿಯಲ್ಲಿ ಅರ್ಧದಷ್ಟು ಕೊಳೆಯುತ್ತಿದೆ. ಮಳೆಯಿಂದಾಗಿ ಜನರು ಮನೆ ಬಿಟ್ಟು ಹೊರಬರುತ್ತಿಲ್ಲ. ಇದರಿಂದಾಗಿ ಸಾಲದ ಸುಳಿಗೆ ಸಿಲುಕಿದ್ದೇವೆ. ಮಳೆ ನಿಲ್ಲುವವರೆಗೂ ವ್ಯಾಪಾರ ಸ್ಥಗಿತಗೊಳಿಸಿದರೆ, ಗ್ರಾಹಕರು ಕೈತಪ್ಪುತ್ತಾರೆ. ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ’
ಇವು ಇಲ್ಲಿನ ಶಕ್ತಿನಗರದ ನಿವಾಸಿ, ತರಕಾರಿ ವ್ಯಾಪಾರಿ ಶೀಲಾ ಶ್ರೀನಿವಾಸ್ ಅಸಹಾಯಕ ನುಡಿಗಳು.
‘ನಿತ್ಯವೂ ಅಂದಾಜು ₹ 3,000 ವರೆಗೂ ವ್ಯಾಪಾರ ನಡೆಯುತ್ತಿತ್ತು. 8–10 ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಅದರ ಅರ್ಧದಷ್ಟು ವ್ಯಾಪಾರವೂ ಆಗುತ್ತಿಲ್ಲ. ವ್ಯಾಪಾರ ಇಲ್ಲವೆಂದು ಹೋಟೆಲ್‌ಗೆ ಬೀಗ ಹಾಕಲೂ ಸಾಧ್ಯವಾಗುತ್ತಿಲ್ಲ. ಮುಂದೆ ಗಣೇಶ, ದಸರಾ ಹಬ್ಬಗಳು ಬರುತ್ತಿದ್ದು, ಆಗ ರಜೆ ಮಾಡಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ವ್ಯಾಪಾರ ಇಲ್ಲದಿದ್ದರೂ, ಅನಿವಾರ್ಯವಾಗಿ ಹೋಟೆಲ್ ನಡೆಸುತ್ತಿದ್ದೇವೆ’ ಎಂದು ಜಿಎಂಐಟಿ ಮುಂಭಾಗದಲ್ಲಿನ ಎಗ್‌ರೈಸ್, ಗೋಬಿ ಅಂಗಡಿ ಮಾಲೀಕ ರವಿ ಬಾಣಾವರ ಬೇಸರಿಸಿದರು.
ಕೆಲ ದಿನಗಳಿಂದ ಬಿಟ್ಟೂಬಿಟ್ಟು ಸುರಿಯುತ್ತಿರುವ ವರ್ಷಾಧಾರೆ ವ್ಯಾಪಾರಿಗಳನ್ನು ಇನ್ನಿಲ್ಲದಂತೆ ಕಂಗೆಡಿಸಿದೆ. ಅದರಲ್ಲೂ ಬೀದಿಬದಿ ವ್ಯಾಪಾರಿಗಳನ್ನು ಅಕ್ಷರಶಃ ನಲುಗುವಂತೆ ಮಾಡಿದೆ.
ಹಗಲು –ರಾತ್ರಿಯೆನ್ನದೇ ಜಿಟಿಜಿಟಿ ಸುರಿಯುತ್ತಿರುವ ಮಳೆಯು ಆಗಾಗ ರಭಸವಾಗಿಯೂ ಆರ್ಭಟಿಸುತ್ತಿದೆ. ದಿನವಿಡೀ ಮೋಡಕವಿದ ವಾತಾವರಣ ಸಹಜ ಎಂಬಂತಾಗಿದ್ದು, ಜನರು ಮನೆಬಿಟ್ಟು ಹೊರಬರಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.
‘ಬಂದ್ರೆ ಮಘೆ, ಹೋದ್ರೆ ಹೊಗೆ’ ಎಂಬ ನಾಣ್ಣುಡಿಯಂತೆ ಮಘೆ ಮಳೆಯು ಹಲವು ದಿನಗಳಿಂದ ಸುರಿಯುತ್ತಲೇ ಇದೆ. ಜಿಟಿ ಜಿಟಿ ಮಳೆಯಲ್ಲೇ ತರಕಾರಿ, ಹಣ್ಣು, ಹೂವಿನ ವ್ಯಾಪಾರಿಗಳು ಕೊಡೆ ಹಿಡಿದು ವ್ಯಾಪಾರ ನಡೆಸುತ್ತಿದ್ದಾರೆ.
ಸಂಜೆಯ ಕಾಯಂ ಅತಿಥಿಯಾಗಿ ರೂಪುಗೊಂಡಿರುವ ಮಳೆಯಿಂದಾಗಿ, ಎಗ್ ರೈಸ್, ಗೋಬಿ, ಪಾನಿಪೂರಿ, ಮಂಡಕ್ಕಿ, ಮೆಣಸಿನಕಾಯಿ ಹಾಗೂ ಇನ್ನಿತರ ಫಾಸ್ಟ್‌ಫುಡ್ ವ್ಯಾಪಾರಿಗಳು ತಳ್ಳುಗಾಡಿಗೆ ತಾಡ್‌ಪಾಲ್ ಹೊದಿಸಿಕೊಂಡು ಗ್ರಾಹಕರನ್ನು ಸೆಳೆಯುವ ವಿಫಲಯತ್ನ ನಡೆಸುತ್ತಿದ್ದಾರೆ.
ಹೆಚ್ಚಿನ ಗ್ರಾಹಕರು ಕುಟುಂಬ ಸದಸ್ಯರೊಂದಿಗೆ ತಿಂಡಿ ತಿನಿಸುಗಳನ್ನು ಸವಿಯಲು ಸಂಜೆ ಮನೆಯಿಂದ ಹೊರಬರುತ್ತಾರೆ. ಆದರೆ, ಇದೇ ವೇಳೆಯೇ ವರುಣ ಆರ್ಭಟಿಸುತ್ತಿದ್ದು, ಜನರು ಮನೆಯಲ್ಲೇ ಉಳಿಯುತ್ತಿದ್ದಾರೆ
ಬೆಳಿಗ್ಗೆ ಹೊತ್ತಲ್ಲೂ ಮಳೆ ತನ್ನ ಆಟಾಟೋಪ ಮುಂದುವರಿಸಿದ್ದರಿಂದ ಶಾಲೆ– ಕಾಲೇಜು ವಿದ್ಯಾರ್ಥಿಗಳು ಕೊಡೆ ಹಿಡಿದು ಬರುತ್ತಿದ್ದಾರೆ. ಮನೆಮನೆಗೆ ದಿನಪತ್ರಿಕೆ ವಿತರಿಸುವವರು ಮಳೆಯ ನಡುವೆಯೇ ಓದುಗರಿಗೆ ತಡವಾಗದಂತೆ ತಲುಪಿಸುತ್ತ ಕಾಯಕವನ್ನು ಮುಂದುವರಿಸಿದ್ದಾರೆ.
‘ಮಳೆಯಿಂದಾಗಿ ವ್ಯಾಪಾರ ಕುಸಿದಿದೆ. ಗ್ರಾಹಕರಿಗೆ ಖರೀದಿಸುವ ಮನಸ್ಸಿದ್ದರೂ, ಮಳೆಯಲ್ಲಿ ನೆನೆಯಬೇಕಾಗುತ್ತದೆ ಎಂಬ ಕಾರಣಕ್ಕೆ ಅಂಗಡಿಯತ್ತ ಸುಳಿಯುತ್ತಲೇ ಇಲ್ಲ’ ಎನ್ನುತ್ತಾರೆ ಬೀಡಾ ಅಂಗಡಿಯವರು.
ಮಾರುಕಟ್ಟೆಯಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ದುಬಾರಿ ದರಕ್ಕೆ ಖರೀದಿಸಿದ ತರಕಾರಿಯೂ ಮಾರಾಟ ಆಗುತ್ತಿಲ್ಲ. ಜನಜೀವನವೇ ಅಸ್ತವ್ಯಸ್ತವಾಗಿದೆಎಸ್.ಇಸ್ಮಾಯಿಲ್, ತರಕಾರಿ ವ್ಯಾಪಾರಿ, ಕೆ.ಆರ್.ಮಾರುಕಟ್ಟೆ
ಆನ್‌ಲೈನ್ ವಹಿವಾಟು ಹೆಚ್ಚಳ:
ನಿರಂತರ ಮಳೆಯಿಂದಾಗಿ ಸ್ವಿಗ್ಗಿ, ಜೊಮೊಟೊ ಹಾಗೂ ಇನ್ನಿತರ ಫುಡ್ ಡೆಲಿವರಿ ಆ್ಯಪ್‌ಗಳ ಮೂಲಕ ಆಹಾರ ಪದಾರ್ಥ ತರಿಸಿಕೊಳ್ಳುವವರ ಪ್ರಮಾಣ ಹೆಚ್ಚಾಗಿದೆ. ಮನೆಯಲ್ಲೇ ಕುಳಿತು ತಮಗಿಷ್ಟದ ಆಹಾರ ಖಾದ್ಯಗಳನ್ನು ಗ್ರಾಹಕರು ತರಿಸಿಕೊಳ್ಳುತ್ತಿದ್ದಾರೆ.
ಹಗಲು ಮಾತ್ರವಲ್ಲದೇ ತಡರಾತ್ರಿವರೆಗೂ ‘ಡೆಲಿವರಿ ಬಾಯ್’ಗಳು ಹೋಟೆಲ್‌ಗಳಿಂದ ಆಹಾರ ಪಡೆದು ಗ್ರಾಹಕರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಇದರಿಂದ ಅವರ ಆದಾಯವೂ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.