
ದಾವಣಗೆರೆ: ಮಧ್ಯ ಕರ್ನಾಟಕದ ಹೃದಯಭಾಗ ಎನಿಸಿರುವ ದಾವಣಗೆರೆಯಲ್ಲಿ ಸುಸಜ್ಜಿತವಾದ ಜಿಲ್ಲಾ ರಂಗಮಂದಿರ ಇಲ್ಲದಿರುವುದು ವಿವಿಧ ಕಲೆ, ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟು ಮಾಡಿದೆ.
ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾ ರಂಗಮಂದಿರ ನಿರ್ಮಿಸದಿರುವ ಕಾರಣ ಅನಿವಾರ್ಯವಾಗಿ ಕಲಾವಿದರು ಹಾಗೂ ಕಲಾ ಸಂಘಗಳು ನಾಟಕ, ಸಂಗೀತ, ನೃತ್ಯ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಗರದಲ್ಲಿನ ಖಾಸಗಿ ಆಡಿಟೋರಿಯಂಗಳಲ್ಲಿ ನಡೆಸಬೇಕಿದೆ. ಇದಕ್ಕಾಗಿ ಕನಿಷ್ಠ ₹ 10,000ದಿಂದ ಗರಿಷ್ಠ ₹ 1 ಲಕ್ಷದವರೆಗೂ ಬಾಡಿಗೆ ನೀಡಬೇಕಾಗಿದೆ.
ಖಾಸಗಿ ಒಡೆತನದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ (ಬಿಐಇಟಿ) ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರ, ಜೆಜೆಎಂ ಮೆಡಿಕಲ್ ಕಾಲೇಜಿನ ಬಾಪೂಜಿ ಆಡಿಟೋರಿಯಂ, ಶಿವಯೋಗಿ ಮಂದಿರ, ಕುವೆಂಪು ಕನ್ನಡ ಭವನ, ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣ, ಚಿಂದೋಡಿ ಲೀಲಾ ರಂಗಮಂದಿರ ಹಾಗೂ ಇನ್ನಿತರ ಕಲ್ಯಾಣ ಮಂಟಪಗಳಲ್ಲಿ ನಾಟಕ ಪ್ರದರ್ಶನ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಖಾಸಗಿ ಆಡಿಟೋರಿಯಂಗಳಿಗೆ ಅಧಿಕ ಬಾಡಿಗೆ ನೀಡಿ ಕಾರ್ಯಕ್ರಮ ಆಯೋಜಿಸುವ ಅನಿವಾರ್ಯತೆ ಇದೆ. ಇದರಿಂದ ರಂಗಕರ್ಮಿಗಳು, ಕಲಾವಿದರು ಸಮಸ್ಯೆ ಎದುರಿಸುವಂತಾಗಿದೆ.
ಕೆಲವು ಸಭಾಂಗಣದಲ್ಲಿ ಕಲಾವಿದರಿಗಾಗಲೀ, ಪ್ರೇಕ್ಷಕರಿಗಾಗಲೀ ಮೂಲ ಸೌಲಭ್ಯಗಳೇ ಇಲ್ಲ. ಇದ್ದರೂ ನಿರ್ವಹಣೆಯ ಕೊರತೆಯನ್ನು ಎದುರಿಸುತ್ತಿವೆ. 2-3 ಗಂಟೆ ನಡೆಯುವ ಕಾರ್ಯಕ್ರಮಗಳ ವೀಕ್ಷಣೆಗೆ ತೆರಳುವವರು ಶೌಚಾಲಯದ ಸಮಸ್ಯೆ ಎದುರಿಸುವುದು ಅನಿವಾರ್ಯವಾಗಿದೆ.
ದೃಶ್ಯಕಲಾ ಮಹಾವಿದ್ಯಾಲಯದ ಥೀಮ್ ಪಾರ್ಕ್‌ನಲ್ಲಿ ಸ್ಮಾರ್ಟ್ ಸಿಟಿಯಿಂದ ನಿರ್ಮಿಸಿರುವ ಬಯಲು ರಂಗಮಂದಿರದಲ್ಲಿ ಹಗಲಿನಲ್ಲಿ ಮಾತ್ರ ಕಾರ್ಯಕ್ರಮ ನಡೆಸಲು ಸಾಧ್ಯ. ಧ್ವನಿ ಹಾಗೂ ಬೆಳಕಿನ ವ್ಯವಸ್ಥೆ ಕೊರತೆಯ ಕಾರಣಕ್ಕೆ ರಾತ್ರಿ ವೇಳೆ ಇಲ್ಲಿ ರಂಗಚಟುವಟಿಕೆಗಳನ್ನು ನಡೆಸುವುದು ತ್ರಾಸದಾಯಕ ಎಂಬುದು ರಂಗಕರ್ಮಿಗಳ ಅಳಲು.
ರಂಗಚಟುವಟಿಕೆಗೆ ಉತ್ತಮ ಸೌಂಡ್ ಸಿಸ್ಟಂ, ಬೆಳಕು ಹಾಗೂ ಹಲವು ಸ್ತರಗಳ ಪರದೆ ವ್ಯವಸ್ಥೆಯೂ ಸೇರಿದಂತೆ ಇನ್ನಿತರ ಸೌಲಭ್ಯಗಳು ಅಗತ್ಯವಾಗಿವೆ. ಅತ್ಯಾಧುನಿಕ ಸೌಲಭ್ಯಗಳಿದ್ದಷ್ಟು ರಂಗಪ್ರಯೋಗ ಯಶಸ್ವಿಯಾಗುತ್ತದೆ. ಪ್ರೇಕ್ಷಕರಿಗೂ ಆರಾಮದಾಯಕ ಎನಿಸುವ ಆಸನಗಳ ವ್ಯವಸ್ಥೆ, ಫ್ಯಾನ್ ಹಾಗೂ ಯಾವುದೇ ಅಡ್ಡಿಯಿಲ್ಲದಂತಹ ವೀಕ್ಷಣಾ ವ್ಯವಸ್ಥೆ ಇರಬೇಕು. ಆದರೆ, ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವುದು ಕೆಲವೇ ಕೆಲವು ಖಾಸಗಿ ಆಡಿಟೋರಿಯಂಗಳಲ್ಲಿ ಮಾತ್ರ.
‘ತೀರಾ ಹೊಸದಾಗಿ ರಚನೆಯಾದ ಜಿಲ್ಲೆಗಳನ್ನು ಹೊರತುಪಡಿಸಿದರೆ ಶಿವಮೊಗ್ಗ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ಕಲಬುರಗಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವ ರಂಗಮಂದಿರಗಳಿವೆ. ಆದರೆ, ನಮ್ಮಲ್ಲಿ ವ್ಯವಸ್ಥಿತವಾದ ರಂಗಮಂದಿರ ಇಲ್ಲದಿರುವುದು ಬೇಸರದ ಸಂಗತಿ ಎನ್ನುತ್ತಾರೆ’ ರಂಗಕರ್ಮಿ ಎಸ್.ಎಸ್. ಸಿದ್ಧರಾಜು.
‘ಜಿಲ್ಲಾ ರಂಗಮಂದಿರ ಇದ್ದರೆ ಆನ್‌ಲೈನ್ ಮೂಲಕವೇ ಕಾಯ್ದಿರಿಸಿಕೊಂಡು ನಮಗೆ ಅನುಕೂಲವಾಗುವ ದಿನದಂದು ರಂಗಚಟುವಟಿಕೆ ನಡೆಸಬಹುದು. ಇಲ್ಲಿ ಅದು ಸಾಧ್ಯವಾಗುತ್ತಿಲ್ಲ. ಖಾಸಗಿ ಆಡಿಟೋರಿಯಂಗಳ ಆಡಳಿತ ಮಂಡಳಿಯವರಿಗೆ ಕಾರ್ಯಕ್ರಮದ ಬಗ್ಗೆ ವಿವರಿಸಿ, ನಿಗದಿಪಡಿಸಿದ ಹಣ ಪಾವತಿಸಿ, ಅವರು ಸೂಚಿಸುವ ದಿನ, ಸಮಯಕ್ಕೆ ಕಾರ್ಯಕ್ರಮ ಆಯೋಜಿಸುವ ಅನಿವಾರ್ಯತೆ ಇದೆ’ ಎಂದು ಅವರು ಬೇಸರಿಸಿದರು.
‘ಇದುವರೆಗೂ 16 ವಿವಿಧ ರಂಗಚಟುವಟಿಕೆಗಳನ್ನು ಬೇರೆ ಬೇರೆ ಸಭಾಂಗಣ/ ವೇದಿಕೆಗಳಲ್ಲಿಯೇ ನಡೆಸಿದ್ದೇವೆ. ಎಲ್ಲಿಯೇ ಕಾರ್ಯಕ್ರಮ ನಡೆಸಿದರೂ ಹಣ ಪಾವತಿಸಬೇಕು. ಇದರಿಂದ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ’ ಎಂದು ವೃತ್ತಿರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳುತ್ತಾರೆ.
‘ರಂಗಮಂದಿರದ ಕೊರತೆಯಿಂದ ರಂಗಚಟುವಟಿಕೆಗಳಿಗೆ ಪೂರಕವಾಗಿ ಕಲಾವಿದರಿಗೆ ವರ್ಷವಿಡೀ ತರಬೇತಿ ನೀಡಲು ಸಾಧ್ಯವಾಗುತ್ತಿಲ್ಲ. ನಾಟಕ ಪ್ರದರ್ಶನ ಆಯೋಜಿಸಿದಾಗ ಮಾತ್ರ ತಿಂಗಳ ಅವಧಿಗೆ ಹಣ ಪಾವತಿಸಿ ಸಭಾಂಗಣ ಪಡೆದು ಕಲಾವಿದರಿಗೆ ತರಬೇತಿ ನೀಡಲಾಗುತ್ತಿದೆ. ರಂಗಾಯಣವು ಅನುದಾನ ಹಾಗೂ ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಹೀಗಿರುವಾಗ ಸರ್ಕಾರದ ಅನುದಾನವನ್ನು ಆಡಿಟೋರಿಯಮ್‌ಗಳಿಗೇ ವ್ಯಯಿಸಿದರೆ ವರ್ಷವಿಡೀ ರಂಗಚಟುವಟಿಕೆ ನಡೆಸುವುದು ಸವಾಲಿನ ಕೆಲಸವಾಗಲಿದೆ. ತೀರಾ ಕನಿಷ್ಠ ಸೌಲಭ್ಯಗಳಿರುವ ಆಡಿಟೋರಿಯಮ್ ಪಡೆದರೂ, ದಿನಕ್ಕೆ ₹ 15,000 ದಿಂದ ₹ 20,000 ಬಾಡಿಗೆ ಕಟ್ಟಬೇಕಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮೀನು ಮಾರುಕಟ್ಟೆ ಬಳಿ 2012ರಿಂದ ನಿರ್ಮಿಸಲಾಗುತ್ತಿರುವ ಜಿಲ್ಲಾ ರಂಗಮಂದಿರ ಕಟ್ಟಡ ಅವೈಜ್ಞಾನಿಕವಾಗಿದೆ. ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲಎಸ್.ಎಸ್. ಸಿದ್ಧರಾಜು ರಂಗಕರ್ಮಿ
ಜಿಲ್ಲಾ ರಂಗಮಂದಿರ ಲಭ್ಯವಿಲ್ಲದಿರುವ ಕಾರಣ ರಂಗಚಟುವಟಿಕೆಗೆ ಹಿನ್ನಡೆಯಾಗುತ್ತಿದೆ. ಥೀಮ್ ಪಾರ್ಕ್‌ನಲ್ಲಿರುವ ಬಯಲು ರಂಗಮಂದಿರವನ್ನು ತಾತ್ಕಾಲಿಕವಾಗಿ ರಂಗಾಯಣ ಚಟುವಟಿಕೆಗಳನ್ನು ನಡೆಸಲು ಉಚಿತವಾಗಿ ನೀಡಲಿಮಲ್ಲಿಕಾರ್ಜುನ ಕಡಕೋಳ ನಿರ್ದೇಶಕರು ವೃತ್ತಿರಂಗಭೂಮಿ ರಂಗಾಯಣ
ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಆರ್ಕೆಸ್ಟ್ರಾ ಕಲಾವಿದರಿದ್ದೇವೆ. ನಗರದಲ್ಲಿ ಸುಸಜ್ಜಿತ ರಂಗಮಂದಿರದ ಅವಶ್ಯಕತೆಯಿದೆ. ಇದಕ್ಕಾಗಿ ಹಲವು ಬಾರಿ ಒತ್ತಾಯಿಸಿದರೂ ಬೇಡಿಕೆ ಈಡೇರಿಲ್ಲಟಿ.ಪರಮೇಶ್ ಅಧ್ಯಕ್ಷ ದಾವಣಗೆರೆ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ
ತಾಲ್ಲೂಕು ಕೇಂದ್ರಗಳಲ್ಲಿನ ಸ್ಥಿತಿಗತಿ: ನ್ಯಾಮತಿಯಲ್ಲಿ ಯಾವುದೇ ರಂಗಮಂದಿರ ಇಲ್ಲದ ಕಾರಣ ರಂಗಚಟುವಟಿಕೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಆವರಣಗಳಲ್ಲೇ ನಡೆಸಲಾಗುತ್ತಿದೆ. ಹೊನ್ನಾಳಿಯ ಪುರಸಭೆ ಆವರಣದಲ್ಲಿರುವ ಕನಕ ರಂಗಮಂದಿರ ಹಾಗೂ ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಜಗಳೂರಿನ ಹಳೇ ಮಾಧ್ಯಮಿಕ ಶಾಲೆಯ ಆವರಣದಲ್ಲಿರುವ ಬಯಲು ರಂಗಮಂದಿರವು ವ್ಯವಸ್ಥಿತವಾಗಿದ್ದು ಬಹುತೇಕ ರಂಗಚಟುವಟಿಕೆಗಳು ಅಲ್ಲಿಯೇ ನಡೆಯುತ್ತವೆ. ಕಾರ್ಯಕ್ರಮ ಆಯೋಜಿಸಿದಾಗ ಪ್ರೇಕ್ಷಕರಿಗೆ ಶಾಮಿಯಾನದ ಕೆಳಗೆ ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ. ಹರಿಹರದಲ್ಲಿ ಶಿಕ್ಷಣ ಇಲಾಖೆಗೆ ಸೇರಿದ ಗುರುಭವನ ರಚನಾ ಕ್ರೀಡಾ ಟ್ರಸ್ಟ್‌ನ ಸಭಾಂಗಣ ಹಾಗೂ ವಿದ್ಯಾಸಂಸ್ಥೆಗಳ ಸಭಾಂಗಣಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಇಲ್ಲಿ ಕನ್ನಡ ಭವನ ಹಾಗೂ ರಂಗಮಂದಿರ ನಿರ್ಮಿಸುವಂತೆ ಒತ್ತಾಯಿಸುತ್ತಿರುವ ಸಂಘ– ಸಂಸ್ಥೆಗಳ ಬೇಡಿಕೆಗೆ ಮನ್ನಣೆ ದೊರೆತಿಲ್ಲ. ಚನ್ನಗಿರಿಯಲ್ಲಿಯೂ ರಂಗಮಂದಿರವಿಲ್ಲ. ಮುಜರಾಯಿ ಇಲಾಖೆಗೆ ಸೇರಿದ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲೇ ಬಹುತೇಕ ಕಾರ್ಯಕ್ರಮಗಳು ನಡೆಯುತ್ತಿವೆ. ತಾಲ್ಲೂಕು ಕ್ರೀಡಾಂಗಣದಲ್ಲೂ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
‘ಜಿಲ್ಲಾ ರಂಗಮಂದಿರ’ ಕಾಮಗಾರಿ ನನೆಗುದಿಗೆ ನಗರದ ಮೀನು ಮಾರುಕಟ್ಟೆ ಬಳಿ ನಿರ್ಮಿಸಲಾಗುತ್ತಿರುವ ‘ಜಿಲ್ಲಾ ರಂಗಮಂದಿರ’ ಕಟ್ಟಡವು ನನೆಗುದಿಗೆ ಬಿದ್ದಿದೆ. 2012–13ರಲ್ಲಿ ಶುರುವಾದ ಕಾಮಗಾರಿಯು ಇದುವರೆಗೂ ಪೂರ್ಣಗೊಂಡಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಕೆಲಸವೂ ನಡೆಯುತ್ತಿಲ್ಲ. ರಂಗಾಸಕ್ತರು ಕಲಾವಿದರು ರಂಗಕರ್ಮಿಗಳ ಹೋರಾಟದ ಫಲವಾಗಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು. ಆದರೆ ಕಾಮಗಾರಿ ಆರಂಭಗೊಂಡು ದಶಕವೇ ಕಳೆದರೂ ಪೂರ್ಣಗೊಳ್ಳುತ್ತಿಲ್ಲ. ಪಕ್ಕದಲ್ಲೇ ರೈಲು ಹಳಿ ಇರುವುದರಿಂದ ರಂಗ ಚಟುವಟಿಕೆ ವೇಳೆ ಶಬ್ಧ ಹೆಚ್ಚಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡ ಜಾಗ ಹಾಗೂ ವಿನ್ಯಾಸವೇ ಕಂಟಕವಾಗಿದೆ. ಮಧ್ಯಭಾಗದಲ್ಲಿ ಫಿಲ್ಲರ್ ನಿರ್ಮಿಸಲಾಗಿದೆ. ಇದು ಸರಾಗ ವೀಕ್ಷಣೆಗೆ ಅಡ್ಡಿಯಾಗಲಿದೆ ಎಂಬುದು ರಂಗಾಸಕ್ತರ ಆರೋಪ. ‘₹ 4.34 ಕೋಟಿ ವೆಚ್ಚದಲ್ಲಿ ಈಗಾಗಲೇ ಭೌತಿಕ ಕಾಮಗಾರಿ ಪೂರ್ಣಗೊಂಡಿದೆ. ವೇದಿಕೆ ಆಸನಗಳ ಅಳವಡಿಕೆ ಗೋಡೆಗಳಿಗೆ ಶಬ್ಧ ನಿರೋಧಕ ಸಾಧನ ಸೌಂಡ್ ಸಿಸ್ಟಮ್ ಹಾಗೂ ಲೈಟಿಂಗ್ ವ್ಯವಸ್ಥೆಗಾಗಿ ಹೆಚ್ಚುವರಿಯಾಗಿ ₹ 3.5 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.