ADVERTISEMENT

ಎಸ್‌ಸಿ ಪ್ರಮಾಣಪತ್ರ ಕೊಡದಿದ್ದರೆ ಹೋರಾಟ

ಡಾ. ಅಂಬೇಡ್ಕರ್‌ ಬೇಡಜಂಗಮ್‌ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಅಧ್ಯಕ್ಷ ದಾರಕೇಶ್ವರಯ್ಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 15:51 IST
Last Updated 29 ಜೂನ್ 2018, 15:51 IST
ದಾವಣಗೆರೆಯ ಶುಕ್ರವಾರ ಏರ್ಪಡಿಸಿದ್ದ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿತರಣಾ ಪರಿಶೀಲನಾ ಸಭೆಯಲ್ಲಿ ಅಖಿಲ ಕರ್ನಾಟಕ ಡಾ. ಅಂಬೇಡ್ಕರ್‌ ಬೇಡಜಂಗಮ್‌ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಪಿ. ದಾರಕೇಶ್ವರಯ್ಯ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಜತೆ ಚರ್ಚಿಸಿದರು
ದಾವಣಗೆರೆಯ ಶುಕ್ರವಾರ ಏರ್ಪಡಿಸಿದ್ದ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿತರಣಾ ಪರಿಶೀಲನಾ ಸಭೆಯಲ್ಲಿ ಅಖಿಲ ಕರ್ನಾಟಕ ಡಾ. ಅಂಬೇಡ್ಕರ್‌ ಬೇಡಜಂಗಮ್‌ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಪಿ. ದಾರಕೇಶ್ವರಯ್ಯ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಜತೆ ಚರ್ಚಿಸಿದರು   

ದಾವಣಗೆರೆ: ಬೇಡ ಜಂಗಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡದ್ದರೆ ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ಅಖಿಲ ಕರ್ನಾಟಕ ಡಾ. ಅಂಬೇಡ್ಕರ್‌ ಬೇಡಜಂಗಮ್‌ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಪಿ. ದಾರಕೇಶ್ವರಯ್ಯ ಎಚ್ಚರಿಸಿದರು.

‘ಬೇಡ ಜಂಗಮ’, ‘ಬುಡ್ಗ ಜಂಗಮ’ ಇವು ವೀರಶೈವ–ಲಿಂಗಾಯತ ಪಂಥದಲ್ಲಿಯೇ ಬರುವ ಜಾತಿಗಳು ಎಂದು ನ್ಯಾಯಾಲಯವೇ ಹಲವು ಬಾರಿ ಆದೇಶ ನೀಡಿದೆ. ಅಲ್ಲದೇ ಹಲವು ಜಿಲ್ಲೆಗಳಲ್ಲಿ ಈ ಸಮುದಾಯಗಳಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲಾಗುತ್ತಿದೆ. ಆದರೆ, ದಾವಣಗೆರೆಯಲ್ಲಿ ಪ್ರಮಾಣಪತ್ರ ನೀಡದಿರುವುದು ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ 20 ಸಾವಿರ, ರಾಜ್ಯದಲ್ಲಿ 50 ಲಕ್ಷ ಬೇಡ ಜಂಗಮ ಸಮುದಾಯದ ಜನಸಂಖ್ಯೆಯಿದೆ. ಆದರೆ, ಸರ್ಕಾರದ ಮಾರ್ಗಸೂಚಿ ಹಾಗೂ ನ್ಯಾಯಾಲಯದ ಆದೇಶಗಳನ್ನು ಬಹುತೇಕ ತಹಶೀಲ್ದಾರರು ಉಲ್ಲಂಘಿಸಿದ್ದಾರೆ. ಕಾನೂನು ನಮ್ಮ ಪರವಾಗಿದ್ದರೂ, ಅಧಿಕಾರಿಗಳು ಸಮಾಜದ ಪರ ಕೆಲಸ ಮಾಡುತ್ತಿಲ್ಲ’ ಎಂದು ದೂರಿದರು.

ADVERTISEMENT

‘ಬೇಡ ಜಂಗಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯ ನಡಾವಳಿಯನ್ನು ನಮ್ಮ ಸಂಘಟನೆಗೆ ಎರಡು ದಿನಗಳಲ್ಲಿ ನೀಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗುವುದು’ ಎಂದು ಹೇಳಿದರು.

‘ಯಾವುದೇ ಅರ್ಜಿಗಳನ್ನು 21 ದಿನಗಳಲ್ಲಿ ವಿಲೇವಾರಿ ಮಾಡುವುದು ತಹಶೀಲ್ದಾರರ ಕರ್ತವ್ಯ. ಆದರೆ, ಪರಿಶಿಷ್ಟ ಜಾತಿ ‍ಪ್ರಮಾಣಪತ್ರಕ್ಕಾಗಿ ಬೇಡ ಜಂಗಮ ಸಮುದಾಯದವರು ಸಲ್ಲಿಸಿದ ಅರ್ಜಿಗಳನ್ನು ಹಲವು ತಿಂಗಳುಗಳು ಕಳೆದರೂ ಇತ್ಯರ್ಥಪಡಿಸಿಲ್ಲ. ಇದರಿಂದ ಜಂಗಮ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದರು.

ತಹಶೀಲ್ದಾರ್‌ ವಿರುದ್ಧ ಕ್ರಮಕ್ಕೆ ಆಗ್ರಹ:

‘ಬೇಡ ಜಂಗಮರಿಗೆ ಜಾತಿ ಪ್ರಮಾಣಪತ್ರ ನೀಡುವ ಸಂಬಂಧ ಏರ್ಪಡಿಸಿದ್ದ ಸಭೆಯಲ್ಲಿ ನಮ್ಮ ಸಮುದಾಯದವರಿಗೆ ಮಾತ್ರ ಅವಕಾಶ ನೀಡಬೇಕಿತ್ತು. ಆದರೆ, ದಾವಣಗೆರೆ ತಹಶೀಲ್ದಾರ್‌ ಸಂತೋಷ್‌ಕುಮಾರ್‌ ಮತ್ತು ಜಗಳೂರು ತಹಶೀಲ್ದಾರ್‌ ದಿವಾಕರ್‌ ಶೆಟ್ಟಿ ಅವರ ಕುಮ್ಮಕ್ಕಿನಿಂದ ದಲಿತ ಮುಖಂಡರೂ ಸಭೆಗೆ ಬಂದಿದ್ದರು. ಇದರಿಂದ ಸಭೆಯಲ್ಲಿ ಗೊಂದಲ ಉಂಟಾಯಿತು. ಜಾತಿಗಳ ನಡುವೆ ಸಂಘರ್ಷ ಉಂಟಾಗಲು ಕಾರಣರಾದ ಸಂತೋಷ್‌ಕುಮಾರ್‌ ಮತ್ತು ದಿವಾಕರ್‌ ಶೆಟ್ಟಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವಕುಮಾರಸ್ವಾಮಿ, ಎಚ್‌.ಎಂ. ಜಗದೀಶ್, ಎಂ.ಇ. ಸುಜಾತಾ, ರವಿಕುಮಾರ್, ಎಂ.ಎಸ್. ಪ್ರಶಾಂತ್‌ಕುಮಾರ್, ಎಂ. ಪಂಕಜಾಕ್ಷಿ, ಬಿ. ಸಂತೋಷ್, ಎಸ್‌.ಎಚ್‌. ಹಾಲಯ್ಯ, ಎಂ. ಶೈಲಜಾ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.