ADVERTISEMENT

ಅಧಿಕ ಇಳುವರಿಯ ಆಸೆಯೇ ಮಣ್ಣಿಗೆ ಕಂಟಕ

ಪಾರಂಪರಿಕ, ನೈಸರ್ಗಿಕ ಕೃಷಿಯಿಂದ ಭೂಮಿಯ ಆರೋಗ್ಯ ರಕ್ಷಣೆ: ಎ.ಚನ್ನಪ್ಪ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 6:04 IST
Last Updated 1 ಮಾರ್ಚ್ 2023, 6:04 IST
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕೃಷಿ ಅರಣ್ಯ ಕಾರ್ಯಾಗಾರ’ವನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ ಉದ್ಘಾಟಿಸಿದರು.
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕೃಷಿ ಅರಣ್ಯ ಕಾರ್ಯಾಗಾರ’ವನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ ಉದ್ಘಾಟಿಸಿದರು.   

ದಾವಣಗೆರೆ: ಅಧಿಕ ಇಳುವರಿ ಪಡೆಯಬೇಕು ಎಂಬ ಹಂಬಲವೇ ಮಣ್ಣಿನ ಆರೋಗ್ಯ ಹಾಳುಗೆಡವಲು ಕಾರಣ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎ. ಚನ್ನಪ್ಪ ಆತಂಕ ವ್ಯಕ್ತಪಡಿಸಿದರು.

ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಕೃಷಿ ಅರಣ್ಯ ರೈತರ ಹಾಗೂ ತಂತ್ರಜ್ಞರ ಸಂಸ್ಥೆ (ಐಎಎಫ್‌ಟಿ), ಬೆಂಗಳೂರಿನ ವನವಿಕಾಸ ವತಿಯಿಂದ ಮಂಗಳವಾರ ಇಲ್ಲಿ ಏರ್ಪಡಿಸಿದ್ದ ‘ಕೃಷಿ ಅರಣ್ಯ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಜನಸಂಖ್ಯೆಗೆ ಅನುಗುಣವಾದ ಆಹಾರರೋತ್ಪಾದನೆ ಇರದ್ದರಿಂದ ವಿದೇಶಗಳಿಂದ ಧಾನ್ಯ ಆಮದು ಮಾಡಿಕೊಳ್ಳಬೇಕಿತ್ತು. ಇದನ್ನು ತಪ್ಪಿಸಲು 1970ರಲ್ಲಿ ನಡೆದ ಹಸಿರುಕ್ರಾಂತಿಯಿಂದ ಆಹಾರದ ಕೊರತೆ ನೀಗಿತು. ಅಲ್ಲಿಂದೀಚೆ ಅಗತ್ಯಕ್ಕಿಂತ ಅಧಿಕ ಆಹಾರ ಧಾನ್ಯದ ಉತ್ಪಾದನೆ ಮಾಡತೊಡಗಿದ್ದರ ಪರಿಣಾಮ ಅರಿಯದೇ, ಹೆಚ್ಚು ಉತ್ಪಾದನೆಯನ್ನೇ ಗುರಿಯಾಗಿಸಿಕೊಂಡಾಗ ಕೃಷಿ ಭೂಮಿಯು ಸತ್ವ ಕಳೆದುಕೊಳ್ಳ ತೊಡಗಿತು’ ಎಂದು ಅವರು ತಿಳಿಸಿದರು.

ADVERTISEMENT

ಈಗ ಪಾರಂಪರಿಕ, ನೈಸರ್ಗಿಕ ಕೃಷಿಗೆ ಒತ್ತು ನೀಡಲಾಗುತ್ತಿದೆ. ಇದು ಭೂಮಿಯ ಆರೋಗ್ಯವನ್ನು ಕಾಪಾಡಿಕೊಂಡು ಬೆಳೆ ಬೆಳೆಯುವ ಪದ್ಧತಿ. ಕೃಷಿಗೆ ಪೂರಕವಾಗಿ ಅರಣ್ಯ ಇರಬೇಕು ಎಂಬ ಕಾರಣಕ್ಕೆ ಕೃಷಿ ಅರಣ್ಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಅವರು ವಿವರಿಸಿದರು.

‘ನಿಮ್ಮ ಭೂಮಿಗೆ ಹೊಂದಿಕೊಳ್ಳುವ ಗಿಡ–ಮರಗಳನ್ನು ಬೆಳೆಸಿ 10 ವರ್ಷಗಳ ಬಳಿಕ ಅವುಗಳನ್ನು ಮಾರಾಟ ಮಾಡಿದಾಗ ಕೃಷಿಯಿಂದ ನೀವು ಪಡೆಯುತ್ತಿರುವುದಕ್ಕಿಂದ ಹೆಚ್ಚು ಆದಾಯ ಗಳಿಸಲು ಸಾಧ್ಯ. ಅರಣ್ಯವನ್ನು ಆದಾಯದ ಮೂಲವನ್ನಾಗಿ ಮಾಡಿಕೊಳ್ಳಬೇಕು. ಇದರಿಂದ ಆದಾಯವಷ್ಟೇ ಹೆಚ್ಚಾಗುವುದಲ್ಲ. ಮಣ್ಣಿನಲ್ಲಿ ನೀರನ್ನೂ ಇಂಗಿಸಿ, ಮಣ್ಣು ಕೊರೆತ ತಡೆದು ಪರಿಸರ ಉಳಿಸಬಹುದು ಎಂದರು.

‘ಭೂಮಿಯಲ್ಲಿ ಶೇ 33ರ ಬದಲಿಗೆ ಶೇ 21ರಷ್ಟು ಮಾತ್ರ ಹಸಿರು ಹೊದಿಕೆ ಇದೆ. ಜಿಲ್ಲೆಯಲ್ಲಿ 4 ವರ್ಷಗಳಲ್ಲಿ 4,000 ಹೆಕ್ಟೇರ್‌ ಹಸಿರು ಹೊದಿಕೆ ಹೆಚ್ಚಾಗಿದೆ. ಇಷ್ಟು ವೇಗವಾಗಿ ಹೇಗೆ ಹೆಚ್ಚಾಯಿತು ಎಂದು ನೋಡಿದಾಗ ಉಳುಮೆ ಬಿಟ್ಟು ಅಲ್ಲಿ ಅಡಿಕೆ ಬೆಳೆದಿರುವುದೇ ಕಾರಣ ಎಂಬುದು ಗೊತ್ತಾಯಿತು. ಅಡಿಕೆ ಜತೆಗೆ ಬೇರೆ ಗಿಡಗಳನ್ನು ಬೆಳೆಸಲು ಒತ್ತು ನೀಡಬೇಕು’ ಎಂದು ದಾವಣಗೆರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಚ್‌. ಜಗನ್ನಾಥ ಸಲಹೆ ನೀಡಿದರು.

ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್‌ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್. ಮೂರ್ತಿ, ನಿವೃತ್ತ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವಾನಂದ ಮೂರ್ತಿ, ಅಣ್ಣಯ್ಯ ಎ.ಎಂ., ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ಮುನೇಗೌಡ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಸ್‌. ರಾಘವೇಂದ್ರ ರಾವ್‌, ಸಂಪನ್ಮೂಲ ವ್ಯಕ್ತಿಗಳಾದ ಡಾ. ದಿವಾಕರ್‌, ಡಾ.ಎಂ.ವಿ. ದುರೈ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.