ADVERTISEMENT

ಜಾನುವಾರುಗಳಲ್ಲಿ ಚರ್ಮಗಂಟು ರೋಗ ಲಕ್ಷಣ ಪತ್ತೆ

ರಕ್ತದ ಮಾದರಿ ಬೆಂಗಳೂರಿಗೆ ರವಾನೆ * ಲಸಿಕೆ ನೀಡುವ ಕಾರ್ಯ ಆರಂಭ

ಬಾಲಕೃಷ್ಣ ಪಿ.ಎಚ್‌
Published 22 ಸೆಪ್ಟೆಂಬರ್ 2022, 4:57 IST
Last Updated 22 ಸೆಪ್ಟೆಂಬರ್ 2022, 4:57 IST
ಚರ್ಮಗಂಟು ರೋಗ ಕಾಣಿಸಿಕೊಂಡ ಜಾನುವಾರು
ಚರ್ಮಗಂಟು ರೋಗ ಕಾಣಿಸಿಕೊಂಡ ಜಾನುವಾರು   

ದಾವಣಗೆರೆ: ಕೆಲವು ವರ್ಷಗಳಿಂದ ಇತ್ತೀಚೆಗೆ ದೇಶದ ವಿವಿಧೆಡೆ ಜಾನುವಾರುಗಳಲ್ಲಿ ಕಾಣಿಸಿಕೊಂಡಿದ್ದ ಚರ್ಮ ಗಂಟು ರೋಗದ (ಲಂಪಿ ಸ್ಕಿನ್‌ ಡಿಸೀಸ್‌) ಲಕ್ಷಣ ಜಿಲ್ಲೆಯಲ್ಲಿಯೂ ಕಂಡುಬಂದಿದೆ. ಜಗಳೂರು ಮತ್ತು ಹರಿಹರ ತಾಲ್ಲೂಕಿನ 6 ಗ್ರಾಮಗಳಲ್ಲಿ ಈ ಲಕ್ಷಣ ಕಾಣಿಸಿಕೊಂಡಿದ್ದು, ಜಾನುವಾರುಗಳಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದೆ.

‘ಕ್ಯಾಪ್ರಿಫಾಕ್ಸ್‌’ ಎಂಬ ಹೆಸರಿನ ವೈರಾಣುವಿನಿಂದ ಕಾಣಿಸಿಕೊಳ್ಳುವ ಈ ರೋಗವು ಮೊದಲು ಆಫ್ರಿಕಾದಲ್ಲಿ ಪತ್ತೆಯಾಗಿ ವಿವಿಧ ದೇಶಗಳಿಗೆ ಹರಡಿದೆ. ಎತ್ತು, ಆಕಳು, ಎಮ್ಮೆಗಳಲ್ಲಿ ಸಿಡುಬಿನ ಮಾದರಿಯಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆಯು ಹರಿಹರ ತಾಲ್ಲೂಕಿನ ಬನ್ನಿಕೋಡು, ಹರಿಹರ, ಉಕ್ಕಡಗಾತ್ರಿ, ಕೊಂಡಜ್ಜಿ, ಜಗಳೂರು ತಾಲ್ಲೂಕಿನ ಬಿಳಿಚೋಡು, ಹೆಮ್ಮನಬೇತೂರಿನಲ್ಲಿ ಕಂಡುಬಂದಿದೆ.

ನಾಲ್ಕು ಹಸುಗಳ ರಕ್ತದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬೆಂಗಳೂರಿನಿಂದ ರೋಗ ನಿರೋಧಕ ಲಸಿಕೆ ತರಿಸಿ ರೋಗ ಕಂಡು ಬಂದ ಕಡೆಗಳಲ್ಲಿ ಎಲ್ಲ ಜಾನುವಾರುಗಳಿಗೆ ನೀಡಲಾಗಿದೆ. ಕಾಯಿಲೆ ನಿಯಂತ್ರಣದಲ್ಲಿದೆ. ರೈತರು ಆತಂಕಪಡಬೇಕಾಗಿಲ್ಲ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಚಂದ್ರಶೇಖರ್‌ ಸುಂಕದ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

25,000 ಡೋಸ್‌ ಲಸಿಕೆ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ 1 ಲಕ್ಷ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದ್ದು, ಕೆಲವೇ ದಿನಗಳಲ್ಲಿ ಬರಲಿದೆ. ಜಾನುವಾರುಗಳಿಗೆ ಅತಿಯಾದ ಜ್ವರ, ಕಣ್ಣುಗಳಿಂದ ನೀರು ಸೋರುವುದು, ನಿಶ್ಯಕ್ತಿ ಉಂಟಾಗುವುದು, ಕಾಲುಗಳಲ್ಲಿ ಬಾವು ಬಂದು ಕುಂಟುವುದು, ಚರ್ಮದ ಮೇಲೆ ಗುಳ್ಳೆ ಕಾಣಿಸಿಕೊಳ್ಳುವುದು, ಬಳಿಕ ಒಡೆದು ಗಾಯವಾಗುವುದು ಈ ರೋಗದ ಲಕ್ಷಣ ಎಂದು ಅವರು ಮಾಹಿತಿ ನೀಡಿದರು.

ಸೊಳ್ಳೆ, ಉಣ್ಣೆ, ನೊಣ, ಕುದುರೆ ನೊಣ ಹಾಗೂ ವಿವಿಧ ಕೀಟಗಳ ಮೂಲಕ ಈ ಕಾಯಿಲೆ ಹರಡುತ್ತದೆ. ಜಾನುವಾರುಗಳ ನೇರ ಸಂಪರ್ಕದಿಂದಲೂ ಹರಡುವ ಸಾಧ್ಯತೆ ಇರುತ್ತದೆ. ಕಾಯಿಲೆ ಕಂಡುಬಂದ ಬಂದ ಎತ್ತು, ಹಸು, ಎಮ್ಮೆಗಳಲ್ಲಿ ಶೇ 1ರಿಂದ ಶೇ 5ರಷ್ಟು ಜಾನುವಾರುಗಳು ಸಾವಿಗೀಡಾಗುವ ಸಾಧ್ಯತೆ ಇರುತ್ತದೆ ಎಂದೂ ಅವರು ವಿವರಿಸಿದರು.

ಔಷಧ: ರೋಗ ಹರಡದಂತೆ ತಡೆಯಲು ಲಸಿಕೆ ಹಾಕಿಸಬೇಕು. ರೋಗ ಬಂದಾಗ ತಲಾ 10 ಗ್ರಾಂ ವೀಳ್ಯದ ಎಲೆ, ಕಾಳುಮೆಣಸು, ಉಪ್ಪು, 50 ಗ್ರಾಂ ಬೆಲ್ಲವನ್ನು ಮಿಶ್ರಣ ಮಾಡಿ, ರುಬ್ಬಿ ದಿನಕ್ಕೆ ಎರಡು ಬಾರಿ ತಿನ್ನಿಸಬೇಕು. 20 ಗ್ರಾಂ ಅರಿಶಿಣ, 1 ಹಿಡಿ ಮೆಹಂದಿ ಸೊಪ್ಪು, 1 ಹಿಡಿ ಬೇವಿನ ಸೊಪ್ಪು, 10 ಎಸಳು ಬೆಳ್ಳುಳ್ಳಿಯನ್ನು ಅರ್ಧ ಲೀಟರ್‌ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೇಯಿಸಿ, ತಣ್ಣಗಾದ ಮೇಲೆ ಗಾಯಗಳ ಮೇಲೆ ದಿನಕ್ಕೆ 3 ಬಾರಿ ಸವರಬೇಕು ಎಂದು ಡಾ. ಸುಂಕದ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.