ADVERTISEMENT

ಏಕನಿವೇಶನ: ಪಾರದರ್ಶಕ ಕ್ರಮ

‘ಧೂಡಾ’ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 5:20 IST
Last Updated 10 ಡಿಸೆಂಬರ್ 2025, 5:20 IST
ದಿನೇಶ್‌ ಕೆ.ಶೆಟ್ಟಿ
ದಿನೇಶ್‌ ಕೆ.ಶೆಟ್ಟಿ   

ದಾವಣಗೆರೆ: ‘ಶಾಮನೂರು ಗ್ರಾಮದ ಏಕನಿವೇಶನಕ್ಕೆ ‘ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ’ (ಧೂಡ) ಅನುಮೋದನೆ ನೀಡಿರುವ ತೀರ್ಮಾನದ ಹಿಂದೆ ನನ್ನ ಪಾತ್ರವಿಲ್ಲ. ದಾಖಲೆಗಳನ್ನು ಪರಿಶೀಲಿಸಿ ಅಧಿಕಾರಿಗಳು ಪಾರದರ್ಶಕ ಕ್ರಮ ಕೈಗೊಂಡಿದ್ದಾರೆ’ ಎಂದು ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ ತಿಳಿಸಿದರು.

‘ಉದ್ಯಾನಕ್ಕೆ ಮೀಸಲಿಟ್ಟ ಸ್ಥಳವನ್ನು ‘ಧೂಡಾ’ ಅಧ್ಯಕ್ಷರು ವ್ಯಕ್ತಿಯೊಬ್ಬರ ಸುಪರ್ದಿಗೆ ನೀಡಿದ್ದಾರೆ’ ಎಂಬ ಬಿಜೆಪಿ ಮುಖಂಡ ರಾಜನಹಳ್ಳಿ ಶಿವಕುಮಾರ್‌ ಆರೋಪಕ್ಕೆ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

‘ದಾಖಲೆಗಳನ್ನು ಪರಿಶೀಲಿಸಿ ಅಧಿಕಾರಿಗಳು ಏಕನಿವೇಶನಕ್ಕೆ ಅನುಮೋದನೆ ನೀಡಿದ್ದಾರೆ. ಆದರೆ, ಇದು ತನ್ನ ಆಸ್ತಿ ಎಂಬುದಾಗಿ ಮಹಾನಗರ ಪಾಲಿಕೆ ಹೇಳುತ್ತಿದೆ. ಈ ವಿಚಾರ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಕುರಿತು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ’ ಎಂದರು.

‘ನ್ಯಾಯಾಲಯ ನೀಡುವ ಆದೇಶಕ್ಕೆ ‘ಧೂಡಾ’ ಬದ್ಧವಾಗಿರುತ್ತದೆ. ಮಹಾನಗರ ಪಾಲಿಕೆಯ ಆಸ್ತಿಯಾಗಿದ್ದರೆ ಏಕನಿವೇಶನಕ್ಕೆ ನೀಡಿದ ಅನುಮೋದನೆ ಅನುರ್ಜಿತಗೊಳ್ಳುತ್ತದೆ. ಇದನ್ನೇ ರಾಜಕೀಯ ವಿಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಬಿಜೆಪಿ ನಾಯಕರು ಉಪವಾಸ ಸತ್ಯಾಗ್ರಹ ಮಾಡುವುದಾದರೆ ಸ್ವಾಗತಿಸುತ್ತೇನೆ’ ಎಂದು ವ್ಯಂಗ್ಯವಾಡಿದರು.

‘ಧೂಡಾ’ ಸದಸ್ಯೆ ವಾಣಿ ಬಕ್ಕೇಶ್, ಕಾಂಗ್ರೆಸ್‌ ಮುಖಂಡರಾದ ಎ. ನಾಗರಾಜ್‌, ಅಯೂಬ್ ಪೈಲ್ವಾನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.