ದಾವಣಗೆರೆ: ಪ್ರಧಾನಮಂತ್ರಿ ಗ್ರಾಮೀಣ ವಸತಿ ಯೋಜನೆಯ ಪ್ರಗತಿಯ ಬಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ‘ವಸತಿ ರಹಿತರನ್ನು ವಿಶ್ವಾಸಕ್ಕೆ ಪಡೆದು ಪರಿಷ್ಕೃತ ಪಟ್ಟಿ ಸಿದ್ಧಪಡಿಸಿ. ಅನುದಾನ ಸರ್ಕಾರಕ್ಕೆ ಮರಳದಂತೆ ಎಚ್ಚರವಹಿಸಿ’ ಎಂದು ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ 6,748 ಮನೆ ನಿರ್ಮಾಣದ ಗುರಿ ಹೊಂದಲಾಗಿದೆ. ಇದರಲ್ಲಿ 3,374 ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಅರ್ಧದಷ್ಟು ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಇನ್ನೂ ಸಾಧ್ಯವಾಗಿಲ್ಲ ಏಕೆ’ ಎಂದು ಪ್ರಶ್ನಿಸಿದರು.
‘ವಸತಿ ಯೋಜನೆಯಡಿ ನೀಡುತ್ತಿರುವ ಸಹಾಯಧನ ಕಡಿಮೆ ಇರುವ ಕಾರಣಕ್ಕೆ ಫಲಾನುಭವಿಗಳು ಆಸಕ್ತಿ ತೋರುತ್ತಿಲ್ಲ ಎಂಬುದು ವಾಸ್ತವ. ಮನೆಗಳನ್ನು ನಿರ್ಮಿಸಿಕೊಳ್ಳಲು ಜನರಿಗೆ ಉತ್ತೇಜನ ನೀಡಲು ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕು. ಆಸಕ್ತಿ, ಅಗತ್ಯ ಇರುವವರ ಪಟ್ಟಿಯನ್ನು ಸಿದ್ಧಪಡಿಸಬೇಕು. ಎಲ್ಲ ಫಲಾನುಭವಿಗಳನ್ನು ವಿಶ್ವಾಸಕ್ಕೆ ಪಡೆದು ಮುಂದುವರಿಯಿರಿ’ ಎಂದು ಸೂಚಿಸಿದರು.
‘ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ 700 ಮನೆಗಳು ಮಂಜೂರಾಗಿದ್ದವು. ಫಲಾನುಭವಿಗಳ ಆಯ್ಕೆಯಲ್ಲಿ ಆಗಿರುವ ವಿಳಂಬದಿಂದ ಅನುದಾನ ಸರ್ಕಾರಕ್ಕೆ ಮರಳಿದೆ. ಇದರಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಇಂತಹ ಲೋಪಗಳನ್ನು ಸಹಿಸಿಕೊಳ್ಳುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
‘ವಸತಿ ಯೋಜನೆಗೆ ಸರ್ಕಾರ ₹ 1.20 ಲಕ್ಷ ಸಹಾಯಧನ ನೀಡುತ್ತಿದೆ. ಒಂದು ವರ್ಷದ ಅವಧಿಯಲ್ಲಿ ನಾಲ್ಕು ಕಂತುಗಳಲ್ಲಿ ಈ ಸಹಾಯಧನ ಪಡೆಯಬೇಕು. ಫಲಾನುಭವಿಗಳಿಗೆ ಸರಿಯಾದ ಮಾಹಿತಿ ನೀಡದೇ ತೊಂದರೆ ಆಗುತ್ತಿದೆ. 2 ಕಂತುಗಳ ನೆರವು ಪಡೆಯುವ ಹೊತ್ತಿಗೆ ಕಾಲಮಿತಿ ಪೂರ್ಣಗೊಂಡಿರುತ್ತದೆ. ಅಧಿಕಾರಿಗಳು ಜನರಿಗೆ ತಿಳಿವಳಿಕೆ ನೀಡುವಲ್ಲಿ ವಿಫಲರಾಗಿದ್ದಾರೆ’ ಎಂದು ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಲಂಚ: ಕ್ರಮಕ್ಕೆ ಸೂಚನೆ:
‘ವಸತಿ ಯೋಜನೆಯಡಿ ಸಹಾಯಧನ ಪಡೆಯಲು ಜಿಪಿಎಸ್ ಕಡ್ಡಾಯ. ಹೀಗೆ, ಜಿಪಿಎಸ್ ಮಾಡಲು ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಧಿಕಾರಿಗಳು ₹ 5,000 ನಿಗದಿಪಡಿಸಿರುವ ಕುರಿತು ಜಗಳೂರು ತಾಲ್ಲೂಕಿನಿಂದ ದೂರುಗಳು ಬಂದಿವೆ. ಇದು ಸರ್ಕಾರ ನಿಗದಿಪಡಿಸಿದ ಶುಲ್ಕವೇ’ ಎಂದು ಡಾ.ಪ‍್ರಭಾ ಪ್ರಶ್ನಿಸಿದರು.
ಇದು ಶುಲ್ಕವಲ್ಲ, ಲಂಚ ಎಂಬುದು ಖಚಿತವಾಗುತ್ತಿದ್ದಂತೆ ಸಿಡಿಮಿಡಿಗೊಂಡರು. ‘ಇಂತಹವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ?’ ಎಂದರು.
‘ಇಂತಹ ದೂರುಗಳು ನನಗೂ ಬಂದಿವೆ. ಈ ಕುರಿತು ನಾಲ್ಕೈದು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ನೋಟಿಸ್ ನೀಡಲಾಗಿದೆ. ಸಾಕ್ಷ್ಯಗಳು ಲಭ್ಯವಾಗದಿರುವುದರಿಂದ ಕ್ರಮ ಕೈಗೊಳ್ಳು ಸಾಧ್ಯವಾಗುತ್ತಿಲ್ಲ. ಇ–ಸ್ವತ್ತು ವಿತರಣೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಪಿಡಿಒ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಲಂಚ ಪಡೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಹೇಳಿದರು.
ಜೆಜೆಎಂ ಲೋಪ: ಅಧಿಕಾರಿಗೆ ತರಾಟೆ
‘ಮಾಯಕೊಂಡ ಸಮೀಪದ ನಲ್ಕುಂದ ಗ್ರಾಮದಲ್ಲಿ ಜಲ ಜೀವನ ಮಿಷನ್ (ಜೆಜೆಎಂ) ಅನುಷ್ಠಾನಗೊಳಿಸಿದರೂ ಜನರಿಗೆ ನೀರು ಸಿಗುತ್ತಿಲ್ಲ. ಖಾಲಿ ಬಿಂದಿಗೆ ಹಿಡಿದು ಜನರು ಪ್ರತಿಭಟನೆ ನಡೆಸಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಲೋಪಕ್ಕೆ ಕಾರಣವೇನು’ ಎಂದು ಡಾ.ಪ್ರಭಾ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
‘ಜೆಜೆಎಂ ಕಾರ್ಯಕ್ಷಮತೆಯ ಬಗ್ಗೆಯೇ ಅನುಮಾನಗಳಿವೆ. ಜಿಲ್ಲೆಯಲ್ಲಿ 50 ಗ್ರಾಮಗಳಿಗೆ ನಿರಂತರ ನೀರು ಪೂರೈಕೆ ಮಾಡಿರುವುದರಿಂದ ವಿಶ್ವಾಸ ಮೂಡಿತ್ತು. ಈ ಸೌಲಭ್ಯ ಎಲ್ಲ ಗ್ರಾಮಗಳಿಗೂ ಸಿಗಬೇಕಲ್ಲವೇ? ವಿಸ್ತೃತ ಯೋಜನಾ ವರದಿಯನ್ನು ಸರಿಯಾಗಿ ಸಿದ್ಧಪಡಿಸಿದ್ದರೆ ಇಂತಹ ಲೋಪಗಳು ಉಂಟಾಗುತ್ತಿರಲಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಶಿವಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.