ADVERTISEMENT

ದಾವಣಗೆರೆ: ಕಣ್ಮನ ಸೆಳೆಯುತ್ತಿವೆ ಕುಂಬಾರರು ಮಾಡಿದ ಹಣತೆ

ಮಂಡಿಪೇಟೆ, ಶಾಮನೂರು ರಸ್ತೆ ಬದಿಯಲ್ಲಿ ಮಾರಾಟ

ಅನಿತಾ ಎಚ್.
Published 22 ಅಕ್ಟೋಬರ್ 2022, 3:58 IST
Last Updated 22 ಅಕ್ಟೋಬರ್ 2022, 3:58 IST
ದಾವಣಗೆರೆಯ ಶಾಮನೂರು ಮುಖ್ಯರಸ್ತೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಮಹಿಳೆಯರು ಮಣ್ಣಿನ ದೀಪಗಳನ್ನು ಖರೀದಿಸುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಶಾಮನೂರು ಮುಖ್ಯರಸ್ತೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಮಹಿಳೆಯರು ಮಣ್ಣಿನ ದೀಪಗಳನ್ನು ಖರೀದಿಸುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿಯ ಮೆರುಗು ಹೆಚ್ಚಿಸಲು ಸ್ಥಳೀಯ ಕುಂಬಾರರು ತಯಾರಿಸಿರುವ ದೀಪಗಳು, ತರಹೇವಾರಿ ಗಾತ್ರದ ಹಣತೆಗಳು ಮಾರುಕಟ್ಟೆಯಲ್ಲಿ ನಳನಳಿಸುತ್ತಿವೆ.

ಕುಂಬಾರರ ಕೈಯಲ್ಲಿ ಅರಳಿದ ಹಂಸ ದೀಪ, ಆಮೆ ದೀಪ, ಲಕ್ಷ್ಮೀ ದೀಪ, ಗಣಪ ದೀಪ, ನವಿಲು ದೀಪ, ಮ್ಯಾಜಿಕ್‌ ದೀಪ, ಟಾಪ್‌ ಅಂಡ್‌ ಬೇಸ್‌... ವಿಭಿನ್ನ ದೀಪಗಳು ನಗರದ ಮಂಡಿಪೇಟೆ ಹಾಗೂ ಶಾಮನೂರು ರಸ್ತೆಯಲ್ಲಿ ಮಾರಾಟಕ್ಕೆ ಇದ್ದು, ದಾರಿಹೋಕರನ್ನು ಆಕರ್ಷಿಸುತ್ತಿವೆ.

‘ಕಾಲಕ್ಕೆ ತಕ್ಕಂತೆ ಜನರ ಅಭಿರುಚಿಯಲ್ಲಿ ಬದಲಾವಣೆಯಾಗುತ್ತಿದ್ದು, ನಮ್ಮ ಕೆಲಸದಲ್ಲೂ ಕೊಂಚ ಬದಲಾವಣೆ ಮಾಡಿಕೊಂಡಿದ್ದೇವೆ. ಸಾದಾ ದೀಪಗಳ ಜತೆಗೆ ಗೋಲ್ಡ್‌ ಮತ್ತು ಕಾಪರ್‌ ಬಣ್ಣಗಳಿಂದ ಕಂಗೊಳಿಸುವ ದೀಪಗಳನ್ನೂ ತಯಾರಿಸಿದ್ದೇವೆ. ಕೆಲವರು ಮನೆಯ ಬಳಿಯೇ ಬಂದು ಖರೀದಿ ಮಾಡಿಕೊಂಡು ಹೋಗುತ್ತಾರೆ. ನಗರದ ಕೆಲವೆಡೆ ಸ್ಟಾಲ್‌ ಹಾಕಿಯೂ ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ನಗರದ ಭಾರತ್‌ ಕಾಲೊನಿ ನಿವಾಸಿ ಎಂ. ಶಿವಕುಮಾರ ಕುಂಬಾರ.

ADVERTISEMENT

‘ಪ್ರತಿವರ್ಷ ರಾಜನಹಳ್ಳಿ, ತುಂಬಿಗೆರೆ, ಕೊಗ್ಗನೂರು ಕೆರೆಗಳಿಂದ ಮಣ್ಣು ತಂದು ಮಿಕ್ಸ್‌ ಮಾಡಿ ದೀಪಗಳನ್ನು ತಯಾರಿಸುತ್ತಿದ್ದೆವು. ಆದರೆ, ಈ ಬಾರಿ ಕೆರೆಗಳು ತುಂಬಿರುವುದರಿಂದ ಮಣ್ಣು ಸಿಗಲಿಲ್ಲ. ಬೆಳಗಾವಿಯಿಂದ ₹ 25,000 ಕೊಟ್ಟು 1 ಲೋಡ್‌ ಮಣ್ಣು ತರಿಸಬೇಕಾಯಿತು. ದೀಪಗಳನ್ನು ತಯಾರಿಸಿದರೂ ಮಳೆ ಹಚ್ಚಾದ್ದರಿಂದ ನಿಗದಿತ ಸಮಯದೊಳಗೆ ಅವುಗಳಿಗೆ ಬಣ್ಣ ಮಾಡಲು ಸಾಧ್ಯವಾಗಲಿಲ್ಲ. ಒಣಗಿಸುವುದೇ ದೊಡ್ಡ ಸವಾಲಾಗಿತ್ತು. ಆದಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೀಪಗಳ ತಯಾರಿಕೆ ಕಡಿಮೆ’ ಎನ್ನುತ್ತಾರೆ ಅವರು.

‘ಕೊರೊನಾ ಮುಂಚೆ ದೀಪಾವಳಿ ಸೀಸನ್‌ನಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು. ಆದರೆ ಈಗ ಅರ್ಧದಷ್ಟು ವ್ಯಾಪಾರ ಕುಸಿದಿದೆ. ನಗರದಲ್ಲಿ ಕೆಲ ದಲ್ಲಾಳಿಗಳು ಹೊರಗಿನಿಂದ ದೀಪಗಳನ್ನು ತಂದು ಮಾರಾಟ ಮಾಡುತ್ತಿದ್ದು, ಸ್ಥಳೀಯ ತಯಾರಕರ ವ್ಯಾಪಾರದ ಮೇಲೆ ಪೆಟ್ಟು ಬಿದ್ದಿದೆ. ಜನರೂ ನಷ್ಟದ ಕಾರಣ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ನಾವು ತಯಾರಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ಸೂಕ್ತ ಸ್ಥಳಾವಕಾಶ ಇಲ್ಲ. ಮಂಡಿಪೇಟೆ, ಹದಡಿ ರಸ್ತೆ, ಶಾಮನೂರು ರಸ್ತೆಗೆ ಅಂಟಿಕೊಂಡ ಫುಟ್‌ಪಾತ್‌ ಮೇಲೇ ವ್ಯಾಪಾರ ಮಾಡಬೇಕಾದ ಸ್ಥಿತಿ ಇದೆ. ಗಣೇಶೋತ್ಸವ ಮತ್ತು ದೀಪಾವಳಿ ಸಂದರ್ಭ ಸ್ಥಳೀಯ ಕುಂಬಾರರ ಉತ್ಪನ್ನಗಳ ಮಾರಾಟಕ್ಕೆ ಪಾಲಿಕೆ ವತಿಯಿಂದ ಸೂಕ್ತ ಸ್ಥಳಾವಕಾಶ ಕಲ್ಪಿಸಿದರೆ ನಮ್ಮ ಕೆಲಸಕ್ಕೆ ಉತ್ತೇಜನ ನೀಡಿದಂತಾಗುತ್ತದೆ’ ಎನ್ನುತ್ತಾರೆ ಶಿವಕುಮಾರ್‌.

ಹ್ಯಾಂಡ್‌ಮೇಡ್‌ ದೀಪಕ್ಕೆ ಹೆಚ್ಚು ಬೇಡಿಕೆ

ಯಂತ್ರಗಳಿಂದ ತಯಾರಿಸಿದ ದೀಪಗಳಿಗಿಂತಲೂ ಹ್ಯಾಂಡ್‌ಮೇಡ್‌ ದೀಪಗಳಿಗೆ ಹೆಚ್ಚು ಬೇಡಿಕೆ ಇದೆ. ಇವುಗಳ ಪೈಕಿ ಮ್ಯಾಜಿಕ್‌ ದೀಪ ವಿಶೇಷವಾದುದು. ಇದಕ್ಕೆ ಕೆಳಗಿನಿಂದ ಒಂದು ಸಣ್ಣ ಲೋಟದಷ್ಟು ಎಣ್ಣೆ ಹಾಕಿದರೆ ಸುಮಾರು ಎಂಟು ತಾಸುಗಳಿಗೂ ಹೆಚ್ಚು ಸಮಯ ಉರಿಯುತ್ತದೆ. ನೋಡುಗರ ಕಣ್ಮನವನ್ನೂ ಸೆಳೆಯುತ್ತದೆ. ಉರುಳಿ ದೀಪ ಹಚ್ಚಿಟ್ಟರೆ ನೋಡಲು ಬಲು ಸುಂದರ. ಮಧ್ಯದಲ್ಲಿ ಎಣ್ಣೆ, ಐದು ಬತ್ತಿಗಳನ್ನು ಹಾಕಿ ಉರಿಸಬಹುದಾಗಿದೆ. ಮನೆಯ ಅಂಗಳಕ್ಕೆ ಸಾಕಷ್ಟು ಬೆಳಕು ಚೆಲ್ಲುತ್ತದೆ. ಇನ್ನು ಟಾಪ್‌ ಅಂಡ್‌ ಬೇಸ್‌ ದೀಪ ಎಷ್ಟೇ ಗಾಳಿ ಬೀಸಿದರೂ ದೀಪ ಆರದಂತೆ ಉರಿಯಲು ಸಹಕಾರಿ ಎಂದು ದೀಪಗಳ ವೈಶಿಷ್ಟ್ಯದ ಕುರಿತು ವಿವರಿಸಿದರು ಶಾಮನೂರು ರಸ್ತೆಯಲ್ಲಿ ವ್ಯಾಪಾರನಿರತ ಧನುಷ್‌.

ಸಂಪರ್ಕ ಸಂಖ್ಯೆ: 9945721299, 9945721634

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.