ADVERTISEMENT

ಸೂರಗೊಂಡನಕೊಪ್ಪ | ಬಂಜಾರ ಸಮುದಾಯಕ್ಕೆ ನ್ಯಾಯ ನೀಡಿದ್ದು ಕಾಂಗ್ರೆಸ್‌: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 2:54 IST
Last Updated 15 ಫೆಬ್ರುವರಿ 2026, 2:54 IST
<div class="paragraphs"><p>ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್‌ದಲ್ಲಿ ನಡೆದ ಸಂತ ಸೇವಾಲಾಲ್‌ ಅವರ 287ನೇ ಜಯಂತಿ ಕಾರ್ಯಕ್ರಮವನ್ನು ಡಿ.ಕೆ.ಶಿವಕುಮಾರ್‌ ಹಾಗೂ ಇನ್ನಿತರ ಗಣ್ಯರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು </p></div>

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್‌ದಲ್ಲಿ ನಡೆದ ಸಂತ ಸೇವಾಲಾಲ್‌ ಅವರ 287ನೇ ಜಯಂತಿ ಕಾರ್ಯಕ್ರಮವನ್ನು ಡಿ.ಕೆ.ಶಿವಕುಮಾರ್‌ ಹಾಗೂ ಇನ್ನಿತರ ಗಣ್ಯರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು

   

ಪ್ರಜಾವಾಣಿ ಚಿತ್ರಗಳು

ಸೂರಗೊಂಡನಕೊಪ್ಪ (ದಾವಣಗೆರೆ): ‘ಬಂಜಾರ ಸಮುದಾಯವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸಿ ಅನುಕೂಲ ಮಾಡಿಕೊಟ್ಟಿದ್ದು ಕಾಂಗ್ರೆಸ್‌. ಬಂಜಾರರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದ್ದು ಕಾಂಗ್ರೆಸ್‌ ನಾಯಕರು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. 

ADVERTISEMENT

ಇಲ್ಲಿನ ಭಾಯಾಗಡ್‌ದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಹಾಗೂ ಸಂತ ಸೇವಾಲಾಲ್‌ ಮಹಾಮಠ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಂತ ಸೇವಾಲಾಲ್‌ ಅವರ 287ನೇ ಜಯಂತಿಯಲ್ಲಿ ಅವರು ಮಾತನಾಡಿದರು.  

‘ಮಾಜಿ ಸಚಿವ ಕೆ.ಟಿ. ರಾಥೋಡ್‌ ಅವರ ಕಾಲದಲ್ಲಿ ಬಂಜಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಯಿತು. ಆ ಬಳಿಕ ಪರಿಶಿಷ್ಟ ಜಾತಿ ಮೀಸಲಾತಿ ನೀಡಲಾಯಿತು. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬಂಜಾರರು ಸೇರಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನನ್ನ ಜೊತೆಗಿದೆ’ ಎಂದು ಹೇಳಿದರು.  

‘ಇದೊಂದು ಪವಿತ್ರ ಕಾರ್ಯಕ್ರಮ. ಸೇವಾಲಾಲ್‌ ಅವರು ಜೀವನ ಪರ್ಯಂತ ಸತ್ಯ, ನಿಷ್ಠೆ, ಸಾಮರಸ್ಯ, ಸೌಹಾರ್ದ ಸಂದೇಶ ಸಾರಿದ್ದಾರೆ. ಮನುಷ್ಯನಿಗೆ ಧರ್ಮ ಬೇಕು. ಧರ್ಮಕ್ಕೆ ದಯೆ ಇರಬೇಕು. ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ ನಾಮ ಹಲವು. ಇದರಲ್ಲಿ ನಂಬಿಕೆ ಇಟ್ಟುಕೊಂಡು ಬದುಕುತ್ತಿದ್ದೇನೆ. ಪ್ರತಿ ಸಮಾಜಕ್ಕೆ ಸಾಂಸ್ಕೃತಿಕ, ಧಾರ್ಮಿಕ ಅಸ್ಮಿತೆ ಇದೆ. ಇಂತಹ ಅಸ್ಮಿತೆಗಳು ಉಳಿಯಬೇಕು’ ಎಂದು ಪ್ರತಿಪಾದಿಸಿದರು. 

ಭಾಷೆಗೆ ಸಿಗಲಿ ಮಾನ್ಯತೆ: 

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ‘ಬಂಜಾರ ಸಮುದಾಯದ ಉಡುಪು ವಿಶೇಷ. ಇದಕ್ಕೆ ಅಂತರರಾಷ್ಟ್ರೀಯ ಆಕರ್ಷಣೆ, ಬೇಡಿಕೆಯೂ ಇದೆ. ಈ ಕೌಶಲ ವೃದ್ಧಿಗೆ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಇದರ ಪ್ರಯೋಜನ ಪಡೆಯಲು ಮಹಿಳೆಯರು ಮುಂದೆ ಬರಬೇಕು. ಕೌಶಲವನ್ನು ಮಾರುಕಟ್ಟೆ ಕೇಂದ್ರಿತವಾಗಿ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.  

‘ಕಸೂತಿ, ಬಂಜಾರ ಆಭರಣ ತಯಾರಿಕೆ, ಸಾಂಸ್ಕೃತಿಕ ಅಸ್ಮಿತೆ ಕಾಪಾಡಿಕೊಳ್ಳುವ ಪ್ರಯತ್ನ ಕೂಡ ನಡೆಯುತ್ತಿದೆ. ಜನರು ಇತ್ತ ಒಲವು ಬೆಳೆಸಿಕೊಳ್ಳಬೇಕು. ಬಂಜಾರ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಬೇಡಿಕೆಗೆ ನನ್ನ ಬೆಂಬಲವೂ ಇದೆ. ನಿಮ್ಮ ಜೊತೆಗೆ ನಾನು ಇದ್ದೇನೆ’ ಎಂದು ಹೇಳಿದರು. 

ಹಕ್ಕುಪತ್ರ ನೀಡಿದ್ದು ಮೋದಿ: 

ಸಂಸದ ಬಿ.ವೈ.ರಾಘವೇಂದ್ರ, ‘ಪ್ರಕೃತಿ ಪ್ರೀತಿ ಬೆಳೆಸಿ, ಮೂಢನಂಬಿಕೆ ತೊಡೆದುಹಾಕುವ ಪ್ರಯತ್ನವನ್ನು ಸೇವಾಲಾಲ್‌ ಅವರು ಮಾಡಿದರು. ಇಡೀ ದೇಶಕ್ಕೆ ಆಹಾರ ಸಾಮಗ್ರಿ ಪೂರೈಸುವ ಕೆಲಸವನ್ನು ಬಂಜಾರ ಸಮುದಾಯ ಮಾಡುತ್ತಿದೆ. ಧೈರ್ಯ ಮತ್ತು ಪರಿಶ್ರಮಕ್ಕೆ ದೇಶದಲ್ಲಿಯೇ ಹೆಸರಾಗಿರುವ ಸಮುದಾಯ ಇದು’ ಎಂದು ಹೇಳಿದರು.  

‘ಪ್ರಧಾನಿ ನರೇಂದ್ರ ಮೋದಿ ಅವರು 2023 ರಂದು 51,000 ಬಂಜಾರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದರು. 3,000 ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿದರು. ಸಂತ ಸೇವಾಲಾಲ್‌ ಅವರು ಐಕ್ಯರಾದ ಮಹಾರಾಷ್ಟ್ರದ ಪೌರಾಗಡದಲ್ಲಿ ₹ 500 ಕೋಟಿ ವೆಚ್ಚದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಿದ್ದಾರೆ’ ಎಂದು ಹೇಳಿದರು. 

ಆದರ್ಶ ಮೈಗೂಡಿಸಿಕೊಳ್ಳಿ: 

ಹೈಕೋರ್ಟ್‌ ನ್ಯಾಯಮೂರ್ತಿ ಟಿ. ವೆಂಕಟೇಶ ನಾಯ್ಕ, ‘ಸಂತ ಸೇವಾಲಾಲ್‌ ಅವರು ಇಡೀ ಬದುಕನ್ನು ಸಮುದಾಯದ ಏಳಿಗೆಗೆ ಮೀಸಲಿಟ್ಟಿದ್ದರು. ಅನ್ಯಾಯ, ಅಸಮಾನತೆ, ಅನಿಷ್ಟ ಆಚರಣೆಗಳ ವಿರುದ್ಧ ಹೋರಾಟ ಮಾಡಿದರು. ಸ್ತ್ರೀಯರ ಹಕ್ಕುಗಳ ರಕ್ಷಣೆಗೆ ಪ್ರಯತ್ನಿಸಿದರು. ಅವರ ಆದರ್ಶಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು. ಸಂಸ್ಕೃತಿ ಮತ್ತು ಪರಂಪರೆ ಉಳಿಸುವತ್ತ, ಉತ್ತಮ ಶಿಕ್ಷಣ ನೀಡುವ ಸಂಕಲ್ಪ ಮಾಡಬೇಕು’ ಎಂದು ಹೇಳಿದರು. 

‘ಸೇವಾಲಾಲ್‌ ಅವರು ಸಮಾಜ ಪರಿವರ್ತನೆಯ ದೀವಿಗೆಯಾಗಿದ್ದರು. ಸಮುದಾಯವನ್ನು ಜಾಗೃತಿಗೊಳಿಸಿ, ಸಂಘಟನೆಯ ಮಹತ್ವವನ್ನು ತಿಳಿಹೇಳಿದರು. ಸತ್ಯ, ಧರ್ಮದ ಮಾರ್ಗದಲ್ಲಿ ನಡೆಯುವ ಸಂದೇಶ ನೀಡಿದರು. ಸಾಮಾಜಿಕ ನ್ಯಾಯ, ಸಮಾನತೆಯ ಪರವಾಗಿದ್ದರು. ಮೌಲ್ಯಾಧಾರಿತ ಶಿಕ್ಷಣದ ಪ್ರಬಲ ವಕ್ತಾರರಾಗಿದ್ದರು. ಸಮಾಜಮುಖಿ ಚಿಂತನೆಗಳನ್ನು ಒತ್ತಿ ಹೇಳಿದರು. ಸಮುದಾಯದ ಸಬಲೀಕರಣಕ್ಕೆ ಪ್ರಯತ್ನಿಸಿದರು’ ಎಂದರು. 

ಸಣ್ಣ ನೀರಾವರಿ ಸಚಿವ ಬೋಸರಾಜ್‌, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ಶಾಸಕರಾದ ಡಿ.ಜಿ. ಶಾಂತನಗೌಡ, ಬಿ.ಪಿ.ಹರೀಶ್‌, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ವಿಧಾನಪರಿಷತ್‌ ಸದಸ್ಯೆ ಜಲಜಾ ನಾಯ್ಕ, ಮಾಜಿ ಶಾಸಕ ಬಸವರಾಜ ನಾಯ್ಕ, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾನಾಯ್ಕ, ಮರಿಯೋಜಿರಾವ್‌, ಭೋಜಾನಾಯ್ಕ, ಮೋತಿಲಾಲ್‌ ಚೌವ್ಹಾಣ್‌, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಟಿ.ಶೇಖರ್‌ ಹಾಜರಿದ್ದರು. 

ಮಾಜಿ ಸಚಿವರು ಮಾಜಿ ಶಾಸಕರ ಭಾಷಣಕ್ಕೆ ಅವಕಾಶ ನೀಡದೇ ಇರುವುದು ರಾಜಕಾರಣ. ರೊಟ್ಟಿ ತಿರುವಿ ಹಾಕಿದಂತೆ ನಿಮ್ಮನ್ನೂ ಜನ ತಿರುವಿ ಹಾಕುತ್ತಾರೆ. ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ
ಎಂ.ಪಿ.ರೇಣುಕಾಚಾರ್ಯ ಮಾಜಿ ಸಚಿವ
ಸೂರಗೊಂಡನಕೊಪ್ಪಕ್ಕೆ ರೈಲಿನ ವ್ಯವಸ್ಥೆ ಇಲ್ಲ. ಅನೇಕರು ಮಾತಿನಲ್ಲಿ ರೈಲು ಬಿಟ್ಟಿದ್ದರು. ನಾವು ರೈಲು ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸಿದೆ. ಇದಕ್ಕೆ ಭಾಯಾಗಡ್‌ ರೈಲು ನಿಲ್ದಾಣ ಎಂದೇ ಹೆಸರಿಡಲಾಗುವುದು
ಬಿ.ವೈ.ರಾಘವೇಂದ್ರ ಸಂಸದ ಶಿವಮೊಗ್ಗ

ವಲಸೆ ಮಕ್ಕಳ ವಸತಿ ಶಾಲೆ 

ವಲಸೆ ಮಕ್ಕಳ ವಸತಿ ಶಾಲೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶಂಕು ಸ್ಥಾಪನೆ ನೆರವೇರಿಸಿದರು. ಉದ್ಯೋಗ ಅರಸಿ ವಲಸೆ ತೆರಳುವ ಬಂಜಾರ ಸಮುದಾಯದ ಜನರ ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ. ‘₹ 50 ಕೋಟಿ ವೆಚ್ಚದಲ್ಲಿ ವಸತಿ ಶಾಲೆಯ ಅಡಿಗಲ್ಲು ಹಾಕಿದ್ದೇವೆ. 750 ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ವಲಸೆ ತೆರಳುವ ಸಮುದಾಯದ ಜನರ ಮಕ್ಕಳಿಗೆ ಇದು ಆಶ್ರಯ ಆಗಲಿದೆ. ರಾಜ್ಯ ಸರ್ಕಾರ ಸಮುದಾಯದ ಪರವಾಗಿದೆ. ಒಂದು ಕಾಲದಲ್ಲಿ ಸೂರಗೊಂಡನಕೊಪ್ಪದಲ್ಲಿ ಕುಡಿಯಲು ನೀರು ಕೂಡ ಇರಲಿಲ್ಲ. ರಾಜ್ಯ ಸರ್ಕಾರ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿಕೊಟ್ಟಿದೆ’ ಎಂದು ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ರಾಜೀವ್‌ಗೆ ಭಾಷಣ ನೀಡುವಂತೆ ಪಟ್ಟು 

ನ್ಯಾಯಮೂರ್ತಿ ವೆಂಕಟೇಶ ನಾಯ್ಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದರಾದ ಪ್ರಭಾ ಮಲ್ಲಿಕಾರ್ಜುನ್‌ ಬಿ.ವೈ. ರಾಘವೇಂದ್ರ ಅವರ ಭಾಷಣ ಮುಗಿಯುತ್ತಿದ್ದಂತೆ ವಂದನಾರ್ಪಣೆ ನಡೆಯಿತು. ಇದರಿಂದ ಕುಪಿತಗೊಂಡ ಕೆಲ ಯುವಕರು ಮಾಜಿ ಶಾಸಕ ಪಿ.ರಾಜೀವ್‌ ಅವರ ಭಾಷಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟುಹಿಡಿದರು.   ಪೋಡಿಯಂ ಬಳಿಗೆ ಧಾವಿಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ‘ದಯಮಾಡಿ ರಾಜಕಾರಣ ಮಾಡಬೇಡಿ. ಇದು ರಾಜಕೀಯ ವೇದಿಕೆ ಅಲ್ಲ. ಇಂತಹ ರಾಜಕಾರಣ ಮಾಡುವುದು ನಮಗೂ ಗೊತ್ತಿದೆ. ಕ್ಷೇತ್ರವನ್ನು ಅಭಿವೃದ್ಧಿ ಮಾಡಿದವರಲ್ಲಿ ನಾನೂ ಒಬ್ಬ’ ಎಂದು ಅಧಿಕಾರಿಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ರಾಜೀವ್‌ ಅವರನ್ನು ಭಾಷಣಕ್ಕೆ ಆಹ್ವಾನಿಸಿದರು.   ಕುಪಿತಗೊಂಡ ಯುವಕರು ವೇದಿಕೆಗೆ ನುಗ್ಗಲು ಪ್ರಯತ್ನಿಸಿದರು. ಇದನ್ನು ತಡೆಯಲು ಪೊಲೀಸರು ಮುಂದಾದಾಗ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. 

‘ನಾವೇ ಮಾತನಾಡಿಕೊಂಡರೆ ಪ್ರಯೋಜನವೇನು?’ 

‘ಉಪಮುಖ್ಯಮಂತ್ರಿ ಇರುವಾಗಲೇ ಮಾತನಾಡಲು ಅವಕಾಶ ಕಲ್ಪಿಸಿದ್ದರೆ ಸರ್ಕಾರಕ್ಕೆ ಸಂದೇಶ ತಲುಪುತ್ತಿತ್ತು. ಅವರು ತೆರಳಿದ ಬಳಿಕ ನಾವೇ ಮಾತನಾಡಿಕೊಂಡರೆ ಏನು ಪ್ರಯೋಜನ’ ಎಂದು ಮಾಜಿ ಶಾಸಕ ಪಿ.ರಾಜೀವ್‌ ಪ್ರಶ್ನಿಸಿದರು.  ‘ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಸರ್ಕಾರ ಒಳಮೀಸಲಾತಿ ರೂಪಿಸಿದೆ. 1919ರಲ್ಲಿ ಮಿಲ್ಲರ್‌ ಆಯೋಗದಿಂದ ಹಿಡಿದು ನಾಗಮೋಹನ್‌ದಾಸ್‌ ಆಯೋಗದವರೆಗೆ ಹಲವು ಆಯೋಗಗಳು ಮೀಸಲಾತಿ ಸಂಬಂಧ ವರದಿ ನೀಡಿವೆ. ಆದರೂ ಸಮುದಾಯಕ್ಕೆ ಸಮರ್ಪಕ ನ್ಯಾಯ ಸಿಕ್ಕಿಲ್ಲ. ಕಾಂಗ್ರೆಸ್‌ ಬಿಜೆಪಿ ಅಧಿಕಾರಕ್ಕೆ ಬರಬಹುದು. ಸಮಾಜ ಮಾತ್ರ ಶಾಶ್ವತವಾಗಿ ಇರುತ್ತದೆ. ನ್ಯಾಯ ಸಿಗದೇ ಇದ್ದರೆ ಮುಂದಿನ ಪೀಳಿಗೆಗೆ ಅನ್ಯಾಯವಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.