ADVERTISEMENT

ಜಾತಿಗಳ ನಡುವೆ ವಿಷ ಬೀಜ ಬಿತ್ತದಿರಿ: ವೈ.ರಾಮಪ್ಪಗೆ ಯಶವಂತರಾವ್‌ ಜಾಧವ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 9:50 IST
Last Updated 29 ಏಪ್ರಿಲ್ 2019, 9:50 IST
ಯಶವಂತರಾವ್‌ ಜಾಧವ್
ಯಶವಂತರಾವ್‌ ಜಾಧವ್   

ದಾವಣಗೆರೆ: ‘ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ಅವರು ಹಿಂದುಳಿದ ವರ್ಗ ಹಾಗೂ ಮುಂದುವರಿದ ವರ್ಗದ ಹೆಸರಿನಲ್ಲಿ ಜಾತಿ–ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಿ, ಈ ಪ್ರಕರಣವನ್ನು ಅವರು ಇಲ್ಲಿಗೇ ಕೈಬಿಡಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಸಲಹೆ ನೀಡಿದ್ದಾರೆ.

‘ರಾಮಪ್ಪ ಅವರು ಬಿಜೆಪಿ ಕಾರ್ಯಕರ್ತರನ್ನು ಹಾಗೂ ಪಕ್ಷವನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದು, ಇದು ಅವರಿಗೆ ಶೋಭೆ ತರುವಂತದ್ದಲ್ಲ. ಅವರು ಪಕ್ಷಕ್ಕೆ ಸೀಮಿತವಾಗಿ ಮಾತನಾಡಬೇಕಾಗಿತ್ತೇ ಹೊರತು, ಜಾತಿಯ ವಿಷಯವನ್ನು ತರಬಾರದಿತ್ತು. ಡಬಲ್‌ ಡಿಗ್ರಿ ಮಾಡಿರುವ ಅವರು ಇತರರಿಗೆ ಮಾದರಿಯಾಗಿರಬೇಕಾಗಿತ್ತು. ಆದರೆ, ತಮ್ಮ ವರ್ತನೆ ವಿರುದ್ಧ ಮಾತನಾಡಿದವರ ವಿರುದ್ಧವೇ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದಾರೆ. ತಾವು ಕ್ಷಮೆ ಕೇಳುವುದಿಲ್ಲ ಎನ್ನುವ ಮೂಲಕ ಉದ್ದಟತನ ಪ್ರದರ್ಶಿಸುತ್ತಿದ್ದಾರೆ’ ಎಂದು ಜಾಧವ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಎಲ್ಲಾ ಜಾತಿ–ಜನಾಂಗದವರು ಅಣ್ಣ–ತಮ್ಮರಂತೆ ಒಟ್ಟಾಗಿ ಬದುಕುತ್ತಿದ್ದಾರೆ. ಆದರೆ, ಇದೀಗ ರಾಜಕೀಯ ಪಕ್ಷಗಳ ವಿಚಾರವನ್ನು ಜಾತಿ ವಿಚಾರವನ್ನಾಗಿ ಮಾಡುವ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿದ್ದಾರೆ. ತಪ್ಪನ್ನು ಒಪ್ಪಿಕೊಂಡವರು ದೊಡ್ಡವರಾಗುತ್ತಾರೆ. ಹೀಗಾಗಿ ಇದನ್ನು ಇಲ್ಲಿಗೇ ಬಿಟ್ಟು ಲಿಂಗಾಯತ ಸಮಾಜದ ಗುರುಗಳ ಸನ್ನಿಧಿಗೆ ಹೋಗಿ ತಪ್ಪನ್ನು ಒಪ್ಪಿಕೊಳ್ಳಬೇಕು. ಪ್ರಕರಣವನ್ನು ಮತ್ತಷ್ಟು ಬೆಳೆಸಬಾರದು. 12 ಜನರ ಮೇಲೆ ಹಾಕಿರುವ ಅಟ್ರಾಸಿಟಿ ಪ್ರಕರಣವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು’ ಎಂದು ಜಾಧವ್‌ ಅವರು ರಾಮಪ್ಪ ಅವರನ್ನು ಒತ್ತಾಯಿಸಿದರು.

ADVERTISEMENT

ವೀರಶೈವ–ಲಿಂಗಾಯತ ಪದಗಳನ್ನು ಎಲ್ಲಿಯೂ ಬಳಸಿಲ್ಲ ಎಂದು ರಾಮಪ್ಪ ಸಮರ್ಥಿಸಿಕೊಂಡಿರುವ ಬಗ್ಗೆ ಪ್ರಶ್ನಿಸಿದಾಗ, ‘ಅವರು ಲಿಂಗ ಕಟ್ಟಿಕೊಳ್ಳುವ ಬಗೆಗೂ ಮಾತನಾಡಿದ್ದಾರೆ. ಲಿಂಗವನ್ನು ಲಿಂಗಾಯತರೇ ಕಟ್ಟಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಪಕ್ಷಗಳ ನಡುವೆ ಸಣ್ಣ–ಪುಟ್ಟ ಘರ್ಷಣೆಗಳು ನಡೆದಿವೆ. ರಾಜಕೀಯ ವಿಚಾರಕ್ಕೆ ಜಾತಿ–ಜಾತಿಗಳ ನಡುವೆ ಘರ್ಷಣೆ ನಡೆಯುವಂತೆ ಮಾಡಬೇಡಿ. ಲಿಂಗಾಯತ ಸಮಾಜದವರು ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದರೆ ಅನಗತ್ಯವಾಗಿ ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗುತ್ತದೆ. ಇದು ಹೀಗೆಯೇ ಮುಂದುವರಿದರೆ ಹಳ್ಳಿಗಳಲ್ಲಿ ಜಾತಿ– ಜಾತಿಗಳ ನಡುವೆ ಸಂಘರ್ಷ ಉಂಟಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎಚ್‌.ಎನ್‌. ಶಿವಕುಮಾರ್‌, ಎನ್‌. ರಾಜಶೇಖರ್‌, ಖಜಾಂಚಿ ಹೇಮಂತಕುಮಾರ್‌, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜನಹಳ್ಳಿ ಶವಕುಮಾರ್‌, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌, ಟಿಂಕರ ಮಂಜಣ್ಣ, ಎಸ್‌.ಸಿ. ಮೋರ್ಚಾ ಅಧ್ಯಕ್ಷ ಕರಿಯಪ್ಪ, ಮುಖಂಡ ಧನಂಜಯ ಕಡ್ಲೆಬಾಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.