ADVERTISEMENT

ಕೆಲವರಲ್ಲೇ ಸಂಪತ್ತು; ಶೋಷಣೆಗೆ ದಾರಿ

ಮಾನವ ಬಂಧುತ್ವ ವೇದಿಕೆಯ ರಾಜ್ಯ ಘಟಕದ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 3:17 IST
Last Updated 9 ಜುಲೈ 2025, 3:17 IST
ಹರಿಹರದಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಕಲಾ ಬಂಧುತ್ವ ವೇದಿಕೆಯ ಸಹಯೋಗದಲ್ಲಿ ಮಂಗಳವಾರ ಜನ ಜಾಗೃತಿಯ ಬೀದಿ ನಾಟಕಗಳನ್ನು ಪ್ರದರ್ಶಿಸಲಾಯಿತು
ಹರಿಹರದಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಕಲಾ ಬಂಧುತ್ವ ವೇದಿಕೆಯ ಸಹಯೋಗದಲ್ಲಿ ಮಂಗಳವಾರ ಜನ ಜಾಗೃತಿಯ ಬೀದಿ ನಾಟಕಗಳನ್ನು ಪ್ರದರ್ಶಿಸಲಾಯಿತು   

ಹರಿಹರ: ದೇಶದ ಶೇ 60ರಷ್ಟು ಸಂಪತ್ತು ಕೇವಲ ಶೇ 1ರಷ್ಟು ಜನರ ಕೈಯಲ್ಲಿದ್ದು, ಇದು ಶೋಷಣೆಗೆ ದಾರಿಯಾಗಿದೆ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಘಟಕದ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ ಹೇಳಿದರು.  

ನಗರದ ಗಾಂಧಿ ಸರ್ಕಲ್‌ನಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ದಾವಣಗೆರೆಯ ಕಲಾ ಬಂಧುತ್ವ ವೇದಿಕೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಬೀದಿ ನಾಟಕ ಮತ್ತು ಜನಪದ ಗೀತೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ಪ್ರಜಾಪ್ರಭುತ್ವ ವ್ಯವಸ್ಥೆಯ ದುರುಪಯೋಗ ಪಡೆದುಕೊಂಡು ದೇಶದ ಸಂಪತ್ತು, ವ್ಯಾಪಾರ, ವಹಿವಾಟು ಕೆಲವರ ಹಿಡಿತಕ್ಕೆ ಹೋಗುವಂತೆ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ದೇಶದ ಸಂಪತ್ತನ್ನು ಕೆಲವೇ ಕೆಲವರು ಹೊಂದುವ ಮೂಲಕ ಶೋಷಿತರನ್ನು ಅಧಿಕಾರ, ಸಂಪತ್ತಿನಿಂದ ದೂರವಿಡಲಾಗುತ್ತಿದೆ’ ಎಂದರು. 

ADVERTISEMENT

‘ಶಿಕ್ಷಣ, ಆರೋಗ್ಯ, ರಾಜಕಾರಣದಂತಹ ಬಹುಮುಖ್ಯ ಕ್ಷೇತ್ರಗಳು ಬಲಾಢ್ಯರ ಪಾಲಾಗಿವೆ. ಹಣ ಇದ್ದವರಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ, ರಾಜಕಾರಣದಲ್ಲಿ ಯಶಸ್ಸು ಎಂಬಂತಾಗಿದೆ. ಬಲಹೀನರಿಗೆ ಕಳಪೆ ಶಿಕ್ಷಣ, ಕಳಪೆ ಆರೋಗ್ಯ ಸೇವೆಯೇ ಗತಿಯಾಗಿದ್ದು, ರಾಜಕಾರಣದಲ್ಲಿ ಬೆಳೆಯಲು ಸಾಧ್ಯವಿಲ್ಲದಂತಾಗಿರುವುದು ವಿಪರ್ಯಾಸ’ ಎಂದರು. 

ವೇದಿಕೆಯ ಆಶ್ರಯದಲ್ಲಿ ಪ್ರತಿ ಜಿಲ್ಲೆಯಲ್ಲೂ ಕಲಾತಂಡ ರಚನೆಯಾಗಿವೆ. ತರಬೇತಿ ಶಿಬಿರಗಳ ಮೂಲಕ ಈ ತಂಡಗಳಿಗೆ ಬೀದಿ ನಾಟಕ ಮತ್ತು ಜನಪದ ಗೀತೆಗಳ ಕಲಾ ಪ್ರದರ್ಶನಕ್ಕೆ ಸಜ್ಜು ಮಾಡಲಾಗಿದೆ. ಇವು ರಾಜ್ಯದ ವಿವಿಧ ಜಿಲ್ಲೆಗಳ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿವೆ ಎಂದರು. 

‘ನಾಟಕಗಳು, ಜನಪದ ಗೀತೆಗಳು ಜನರಲ್ಲಿ ಜಾಗೃತಿ ಮೂಡಿಸುವ ಬಹುಮುಖ್ಯ ಆಯಾಮವಾಗಿವೆ. ಮಾನವ ಬಂಧುತ್ವ ವೇದಿಕೆ ನಡೆಸುತ್ತಿರುವ ಜಾತಿ, ಧರ್ಮ, ವರ್ಗ, ಪಕ್ಷ ರಹಿತವಾದ ಸಮಾನತೆಯ ಹೋರಾಟಕ್ಕೆ ಜನರು ಬೆಂಬಲಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ನಂದಿಗಾವಿ ಹೇಳಿದರು. 

ಕಲಾತಂಡದ ನಾಯಕ ಜಿಗಳಿ ರಂಗನಾಥ್, ಲಿಂಗರಾಜು, ಮಲ್ಲೇಶ್, ಶರಣಪ್ಪ, ರುದ್ರೇಶ, ಸುಲೋಚನಾ, ವಾಣಿ, ನಾಗರತ್ನ, ವಿನೋದ್, ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾರಿಗಳಾದ ಸಂತೋಷ್ ನೋಟದವರ್, ಎಸ್.ಗೋವಿಂದ, ಡಿಎಸ್‌ಎಸ್ ಮಂಜುನಾಥ್ ಎಂ., ಪತ್ರಕರ್ತ ಜಿಗಳಿ ಪ್ರಕಾಶ್, ಕುಂಬಳೂರು ವಾಸು, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಎಚ್.ಎಸ್.ಮಂಜುನಾಥ್ ಹಾಗೂ ಇತರರಿದ್ದರು. 

ಜನಪದ ಗೀತೆಗಳು ಮತ್ತು ಬೀದಿ ನಾಟಕ ಜನರ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.