ದಾವಣಗೆರೆ: ನಗರದಲ್ಲಿ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಫಿಲ್ಲಿಂಗ್ ಸ್ಟೇಷನ್‌ಗಳನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ದಾವಣಗೆರೆ ಸ್ಮಾರ್ಟ್ ಸಿಟಿ ಆಟೊ ಚಾಲಕರ– ಮಾಲೀಕರ ಸಂಘ ಹಾಗೂ ಶಾಲಾ ಮಕ್ಕಳ ಆಟೊ, ವ್ಯಾನ್ ಚಾಲಕರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಸಂಸದರ ನಿವಾಸದ ಎದುರು ಪ್ರತಿಭಟನೆ ನಡೆಸಿದ ಚಾಲಕರು, ಸಿಎನ್‌ಜಿ ಫಿಲ್ಲಿಂಗ್ ಸ್ಟೇಷನ್‌ಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.
‘ನಗರದಲ್ಲಿ ಕೇವಲ ಮೂರು ಸಿಎನ್‌ಜಿ ಫಿಲ್ಲಿಂಗ್ ಸ್ಟೇಷನ್‌ಗಳಿವೆ. ಇವುಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದರೆ ಬೇರೆ ನಗರಗಳಿಗೆ ತೆರಳಿ ಸಿಎನ್‌ಜಿ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ’ ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಆಟೊ ಚಾಲಕರ– ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಹೇಳಿದರು.
‘ಆಟೊಗಳ ಸಂಖ್ಯೆ ಜಾಸ್ತಿ ಇದೆ. ಇತರೆ ವಾಹನಗಳಾದ ಕಾರು, ಟಾಟಾ ಏಸ್, ಲಾರಿ, ಬಸ್‌ಗಳಿಗೂ ಸಿಎನ್‌ಜಿ ಬಳಸಲಾಗುತ್ತಿದೆ. ನಗರದಲ್ಲಿರುವ 3 ಸಿಎನ್‌ಜಿ ಫಿಲ್ಲಿಂಗ್ ಸ್ಟೇಷನ್‌ಗಳಿಗೆ ಸರಿಯಾಗಿ ಸಿಎನ್‌ಜಿ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಆಟೊ ಚಾಲಕರು, ಮಾಲೀಕರಿಗೆ ತೊಂದರೆ ಉಂಟಾಗುತ್ತಿದೆ. ಸಿಎನ್‌ಜಿ ತುಂಬಿಸಿಕೊಳ್ಳಲು ಬಂಕ್‌ಗಳ ಮುಂದೆ ಗಂಟೆಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.
‘ನಗರದಲ್ಲಿ ಸಿಎನ್‌ಜಿ ದೊರೆಯದಿದ್ದಾಗ ಹರಿಹರ, ಚಿತ್ರದುರ್ಗ, ರಾಣೇಬೆನ್ನೂರು, ಹಾವೇರಿಗೆ ಹೋಗಬೇಕಾದ ಸ್ಥಿತಿ ಇದೆ. ಆಟೊ ಓಡಿಸುವುದನ್ನು ಬಿಟ್ಟು, ಗ್ಯಾಸ್ ತುಂಬಿಸುವುದೇ ಕಾಯಕವಾಗಿದೆ. ಸಿಎನ್‌ಜಿ ಸಮಸ್ಯೆಯಿಂದಾಗಿ ಶೇ 80ರಷ್ಟು ಆಟೊಗಳನ್ನು ಮನೆ ಮುಂದೆ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆಯನ್ನು ಏಜೆನ್ಸಿಯವರ ಬಳಿ ಹೇಳಿಕೊಂಡರೂ ಸ್ಪಂದನೆ ದೊರೆಯುತ್ತಿಲ್ಲ’ ಎಂದು ಶಾಲಾ ಮಕ್ಕಳ ಆಟೊ ಹಾಗೂ ವ್ಯಾನ್ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಮಂಜುನಾಥ್ ಅಳಲು ತೋಡಿಕೊಂಡರು.
‘ನಗರದಲ್ಲಿ ಇನ್ನೂ 6 ಕಡೆಗಳಲ್ಲಿ ಸಿಎನ್‌ಜಿ ಫಿಲ್ಲಿಂಗ್ ಸ್ಟೇಷನ್‌ಗಳನ್ನು ಆರಂಭಿಸಬೇಕು. ಶಾಮನೂರು ರಸ್ತೆಯಲ್ಲಿ 2, ಪಿ.ಬಿ. ರಸ್ತೆಯ ಡಿಸಿ ಸರ್ಕಲ್ ಬಳಿ 2, ಬೂದಾಳ್ ರಸ್ತೆಯಲ್ಲಿ 2 ಸಿಎನ್‌ಜಿ ಬಂಕ್‌ಗಳನ್ನು ತೆರೆಯಬೇಕಿದ್ದು, ಈ ಬಗ್ಗೆ ಸಂಬಂಧಪಟ್ಟ ಏಜೆನ್ಸಿಗಳಿಗೆ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.
ದಾವಣಗೆರೆ ಸ್ಮಾರ್ಟ್ ಸಿಟಿ ಆಟೊ ಚಾಲಕರ– ಮಾಲೀಕರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಕೊಟ್ರೇಶಪ್ಪ, ಖಜಾಂಚಿ ಎಚ್.ಆರ್.ರಾಘವೇಂದ್ರ, ಗೌರವಾಧ್ಯಕ್ಷ ಎಂ.ಜಿ.ಶ್ರೀಕಾಂತ್, ಉಪಾಧ್ಯಕ್ಷ ರೇವಣಸಿದ್ದಪ್ಪ, ಗಂಗಪ್ಪ ಕೆ.ಜಿ. ಸೇರಿದಂತೆ ಹಲವು ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.