
ಚನ್ನಗಿರಿ: ‘ಇಂದಿನ ದಿನಮಾನಗಳಲ್ಲಿ ಮಾದಕ ವಸ್ತುಗಳು ಸುಲಭವಾಗಿ ಸಿಗುವಂತಾಗಿದೆ. ಇದರಿಂದ ಯುವ ಸಮೂಹ ಅಮೂಲ್ಯವಾದ ಜೀವನವನ್ನು ನಾಶ ಮಾಡಿಕೊಳ್ಳುವುದರ ಜತೆಗೆ ಆರೋಗ್ಯವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಕೀಲರ ಸಂಘದ ಅಧ್ಯಕ್ಷ ಎಚ್. ಮೋಹನ್ ತಿಳಿಸಿದರು.
ಪಟ್ಟಣದ ಜ್ಞಾನದೀಪ ಪಿಯು ಕಾಲೇಜಿನಲ್ಲಿ ತಾಲ್ಲೂಕು ಘಟಕದ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಬೆಂಗಳೂರಿನ ಪರಿವರ್ತನಾ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ನಡೆದ ಮಾದಕ ವಸ್ತು ವ್ಯಸನ ದಂಧೆ ಹಾಗೂ ಕಳ್ಳಸಾಗಾಣೆ ವಿರೋಧ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಶಾರೀರಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಅಕ್ರಮ ಮಾರಾಟ ದಂಧೆ ಇಡೀ ದೇಶದಲ್ಲಿಯೇ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಜಿ.ಎಸ್. ಮೋಹನ್, ಎನ್.ಆರ್. ಪಾಟೀಲ್, ಪ್ರಸನ್ನಕುಮಾರ್, ಪ್ಯಾನೆಲ್ ವಕೀಲ ಆರ್. ಬಾಬುಜಾನ್ ಉಪಸ್ಥಿತರಿದ್ದರು. ಹೊದಿಗೆರೆ ಗ್ರಾಮ ಪಂಚಾಯಿತಿ ಪಿಡಿೊ ಯಶವಂತ್ ಕುಮಾರ್ ಉಪನ್ಯಾಸ ನೀಡಿದರು. ಜ್ಞಾನದೀಪ ಪಿಯು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.