ADVERTISEMENT

ಆನೆ ದಾಳಿ: ದಂಪತಿಗೆ ಗಾಯ

ಭೀಮನೆರೆ ಜಮೀನಿನಲ್ಲಿ ದಿನವಿಡಿ ಬೀಡುಬಿಟ್ಟಿದ್ದ ಕಾಡಾನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 19:45 IST
Last Updated 13 ಫೆಬ್ರುವರಿ 2020, 19:45 IST
ಹತ್ತಿ ಹೊಲದಲ್ಲಿ ಕಾಡಾನೆೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಹತ್ತಿ ಹೊಲದಲ್ಲಿ ಕಾಡಾನೆೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ಸಂತೇಬೆನ್ನೂರು (ಚನ್ನಗಿರಿ): ಹಿರೇಕೋಗಲೂರು ಗ್ರಾಮದಲ್ಲಿ ಗುರುವಾರ ವಾಯುವಿಹಾರಕ್ಕೆ ತೆರಳಿದ್ದ ದಂಪತಿ ಕಾಡಾನೆ ದಾಳಿಯಿಂದ ಗಾಯಗೊಂಡಿದ್ದಾರೆ.

ಗ್ರಾಮದ ಶೈಲೇಂದ್ರ ಹಾಗೂ ಅವರ ಪತ್ನಿ ಆಶಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗುಂಪಿನಿಂದ ತಪ್ಪಿಸಿಕೊಂಡು ಬಂದಿರುವ ಕಾಡಾನೆ ಪುಂಡಾಟ ನಡೆಸುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

‘ಮುಂಜಾನೆ 5.30ರ ವೇಳೆಗೆ ಆಲೂರು ರಸ್ತೆಯಲ್ಲಿ ವಾಯುವಿಹಾರ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಪಕ್ಕದ ತೋಟದಲ್ಲಿ ಶಬ್ದವಾಯಿತು. ತಕ್ಷಣವೇ ಎದುರಿಗೆ ಆನೆ ಬಂತು. ನಾವು ಹೆದರಿ ಆಲೂರು ರಸ್ತೆಯಲ್ಲಿ ಓಡಿದೆವು. ಆಶಾ ಆಯತಪ್ಪಿ ಬಿದ್ದರು. ಎದ್ದು ತೋಟದ ಕಡೆಗೆ ಓಡಿದೆವು. ಬೆನ್ನಟ್ಟಿ ಬಂದ ಆನೆ ನನ್ನನ್ನು ಗುದ್ದಿ ಹೊರಳಾಡಿಸಿತು. ಪತ್ನಿಯನ್ನೂ ಗಾಯಗೊಳಿಸಿತು. ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ’ ಎಂದು ಶೈಲೇಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಭೀಮನೆರೆಯಲ್ಲಿ ಬೀಡುಬಿಟ್ಟ ಆನೆ: ಗುಂಪಿನಿಂದ ತಪ್ಪಿಸಿಕೊಂಡಿರುವ ಸುಮಾರು 10ರಿಂದ 12 ವರ್ಷದ ಗಂಡು ಆನೆ, ಬುಧವಾರ ಹೊನ್ನಾಳಿ ತಾಲ್ಲೂಕಿನ ಹೊಸಹಳ್ಳಿ ಬಳಿ ತುಂಗಭದ್ರಾ ನದಿ ತೀರದಲ್ಲಿ ಕಾಣಿಸಿಕೊಂಡಿತ್ತು. ಶಿಕಾರಿಪುರ ಮಾರ್ಗವಾಗಿ ಬಂದಿರುವ ಇದು ಜೀನಹಳ್ಳಿ, ಕೆಂಚಿಕೊಪ್ಪ ಸುತ್ತಲಿನ ಭಾಗಗಳ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿತ್ತು.

ಆನೆಯನ್ನು ಬಂದ ದಾರಿಯಲ್ಲೇ ವಾಪಸ್‌ ಕಳುಹಿಸಲು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸಂಜೆ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ತಿಪ್ಪೇಸ್ವಾಮಿ ಎಂಬುವವರಿಗೆ ಆನೆ ತಿವಿದು ಗಾಯಗೊಳಿಸಿತ್ತು. ಬಳಿಕ ಆನೆಯು ಹೊಸಹಳ್ಳಿಯಿಂದ ಹನುಮನ
ಹಳ್ಳಿ ಕಡೆಗೆ ತೆರಳಿತ್ತು.

‘ಆನಂತರ ಗಿರಿಯಾಪುರದಲ್ಲಿ ಕಾಣಿಸಿಕೊಂಡ ಅದು, ಮತ್ತೆ ಭೀಮನೆರೆ ಸಮೀಪ ಗೋಚರಿಸಿದೆ. ಕಾಡಾನೆ ನೋಡಲು ನೂರಾರು ಜನ ಇಲ್ಲಿಯೇ ಬೀಡುಬಿಟ್ಟಿದ್ದರು. ಆಯಾಸಗೊಂಡ ಆನೆ ಮರದಡಿ ಆಶ್ರಯ ಪಡೆದಿತ್ತು. ಜನರು ಇದ್ದಾಗ ಸರಿಯಾದ ದಿಕ್ಕಿನಲ್ಲಿ ಆನೆಯನ್ನು ಚಲಿಸುವಂತೆ ಮಾಡುವುದು ಕಷ್ಟ. ಹೀಗಾಗಿ ಪೊಲೀಸರ ನೆರವಿನಿಂದ ಜನರನ್ನು ಚದುರಿಸಿ, ಆನೆಯನ್ನು ಕಾಡಿನತ್ತ ಕಳುಹಿಸಲು ಯತ್ನಿಸಲಾಗುತ್ತಿದೆ’ ಎಂದು ವಲಯ ಅರಣ್ಯಾಧಿಕಾರಿ ಮಾವಿನಹೊಳಿಯಪ್ಪ ತಿಳಿಸಿದರು.

ಸುತ್ತಮುತ್ತ ತೋಟಗಳಿವೆ. ರಾತ್ರಿಯಿಡೀ ನೀರು ಹರಿಸಲು ರೈತರು ಓಡಾಡಬೇಕಾಗಿದೆ. ಕಾಡಾನೆಯನ್ನು ಕಾಡಿನತ್ತ ಓಡಿಸದೇ ಇದ್ದರೆ ತೋಟಗಳಿಗೆ ಹಾನಿಯಾಗಲಿದೆ ಎಂದು ತಣಿಗೆರೆ, ಭೀಮನೆರೆ ರೈತರಾದ ಜಗದೀಶ್, ವಿಶ್ವನಾಥ್, ವೆಂಕಟೇಶ್, ಮಹೇಂದ್ರ ಗೌಡ ಆತಂಕ ವ್ಯಕ್ತಪಡಿಸಿದರು.

ತನಿಗೆರೆ ಬಳಿ ಮಹಿಳೆಗೆ ಗಾಯ

ದಿನವಿಡೀ ಭೀಮನೆರೆಯಲ್ಲಿ ಬೀಡುಬಿಟ್ಟಿದ್ದ ಕಾಡಾನೆ, ಸಂಜೆಯಾಗುತ್ತಿದ್ದಂತೆ ಅಲ್ಲಿಂದ ಸಂಚಾರ ಆರಂಭಿಸಿದೆ. ತನಿಗೆರೆ ಗ್ರಾಮದ ಆಂಜನೇಯ ಪ್ರೌಢಶಾಲೆ ಬಳಿಯ ಮನೆಯ ಎದುರು ಕಸ ಹೊಡೆಯುತ್ತಿದ್ದ ಮಹಿಳೆ ಸಾಕಮ್ಮ (38) ಅವರ ಮೇಲೆ ಆನೆ ದಾಳಿ ನಡೆಸಿದೆ. ಗಾಯಗೊಂಡ ಸಾಕಮ್ಮ ಅವರನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.