
ದಾವಣಗೆರೆ: ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು (ಮನರೇಗಾ) ಹಳ್ಳಿ ಜನರ ಕೈಗೆ ಕೆಲಸ ಕೊಟ್ಟಿತ್ತು. ಈ ಯೋಜನೆಯನ್ನು ‘ವಿ.ಬಿ. ಜಿ ರಾಮ್ ಜಿ’ ಎಂದು ಪರಿವರ್ತಿಸುವ ಮೂಲಕ ಕೇಂದ್ರ ಸರ್ಕಾರವು ಜನರ ಉದ್ಯೋಗದ ಹಕ್ಕು ಕಸಿದಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಳೆ ಕಡ್ಲೆಬಾಳು ಗ್ರಾಮದಿಂದ ಭಾನುವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
‘ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ‘ಮನರೇಗಾ’ ಯೋಜನೆ ಜಾರಿಗೆ ತರಲಾಗಿತ್ತು. ಗ್ರಾಮೀಣ ಭಾಗದ ಕೋಟ್ಯಂತರ ಕುಟುಂಬಗಳಿಗೆ ಇದು ಆರ್ಥಿಕ ಬಲ ನೀಡಿತ್ತು. ಇದೀಗ ಮಹಾತ್ಮ ಗಾಂಧಿಯವರ ಹೆಸರು ತೆಗೆದು ಗೊಂದಲ ಸೃಷ್ಟಿಸುವ ಹುನ್ನಾರವನ್ನು ಬಿಜೆಪಿ ನಡೆಸಿದೆ. ಈ ಮೂಲಕ ಗಾಂಧೀಜಿ ಅವರ ಆಶಯವನ್ನು ಮಣ್ಣುಪಾಲು ಮಾಡಲಾಗಿದೆ’ ಎಂದು ಆರೋಪಿಸಿದರು.
‘ಯೋಜನೆ ಬದಲಾವಣೆ ಮಾಡಿದ್ದರಿಂದ ದೇಶದ 28 ಕೋಟಿ ಬಡಜನರಿಗೆ ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧ ಕಾಂಗ್ರೆಸ್ ತೀವ್ರ ಹೋರಾಟ ಕೈಗೆತ್ತಿಕೊಂಡಿದೆ. ಇದಕ್ಕೆ ಜನರ ಬೆಂಬಲ ಬೇಕಾಗಿದೆ. ಬಡವರ ಉದ್ಯೋಗದ ಹಕ್ಕು ಕಸಿದುಕೊಂಡವರಿಗೆ ಪಾಠ ಕಲಿಸಬೇಕು. ಬಡವರು ಆರ್ಥಿಕವಾಗಿ ಸಬಲರಾಗುವುದನ್ನು ಬಿಜೆಪಿ ಸಹಿಸದೇ ಇಂತಹ ಷಡ್ಯಂತ್ರ ರೂಪಿಸಿದೆ’ ಎಂದು ದೂರಿದರು.
ಹಳೆ ಕಡ್ಲೆಬಾಳುವಿನಿಂದ ಹೊರಟ ಪಾದಯಾತ್ರೆ ವಾಲ್ಮೀಕಿ ನಗರ, ಕಡ್ಲೆಬಾಳು, ಅರಸಾಪುರ, ಚಿಕ್ಕ ಓಬಜ್ಜಿಹಳ್ಳಿ ಹಾಗೂ ದೊಡ್ಡ ಓಬಜ್ಜಿಹಳ್ಳಿ ಗ್ರಾಮಗಳ ಮೂಲಕ ಸಾಗಿತು. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಪರಶುರಾಮ್ ಮಾಗಾನಹಳ್ಳಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮುದೇಗೌಡ್ರು ಗಿರೀಶ್, ಮೇಕಾ ಮುರುಳಿಕೃಷ್ಣ, ರಾಘವೇಂದ್ರ ನಾಯ್ಕ, ಅಯೂಬ್ ಪೈಲ್ವಾನ್ ಇದ್ದರು.