ADVERTISEMENT

ಮದುವೆ ನೋಂದಾಯಿಸಲು ನಕಲಿ ಶಾಲಾ ದೃಢೀಕರಣ ಪತ್ರ: ತನಿಖೆಗೆ ಡಿಡಿಪಿಐ ಆದೇಶ

​ಪ್ರಜಾವಾಣಿ ವಾರ್ತೆ
Published 1 ಮೇ 2022, 4:12 IST
Last Updated 1 ಮೇ 2022, 4:12 IST
ಹರಿಹರ ತಾಲ್ಲೂಕು ರಾಮತೀರ್ಥ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ನೀಡಿರುವ ಶಾಲಾ ದೃಢೀಕರಣ ಪತ್ರ.
ಹರಿಹರ ತಾಲ್ಲೂಕು ರಾಮತೀರ್ಥ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ನೀಡಿರುವ ಶಾಲಾ ದೃಢೀಕರಣ ಪತ್ರ.   

ಹರಿಹರ: ಶಾಲೆಯಲ್ಲಿ ಓದದೆ ಇರುವ ಯುವತಿಯೊಬ್ಬರಿಗೆ ಶಾಲಾ ದೃಢೀಕರಣ ಪತ್ರ ನೀಡಿದ ಆರೋಪ ಎದುರಿಸುತ್ತಿರುವ ತಾಲ್ಲೂಕಿನ ರಾಮತೀರ್ಥ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ರೈತ ಮುಖಂಡ ಬೇವಿನಹಳ್ಳಿ ಮಹೇಶ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ವಾಸಿ ಎನ್ನಲಾದ ಯುವತಿಯೊಬ್ಬರು ತಾವು ಪ್ರೇಮಿಸಿದ ಯುವಕನೊಂದಿಗೆ ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಣಿಗೆ ಈ ಶಾಲೆಯ ದೃಢೀಕರಣ ಪತ್ರ ಬಳಸಿಕೊಂಡಿರುವ ಶಂಕೆ ಇದೆ. ಯುವಕ ಮತ್ತು ಯುವತಿ ಇಬ್ಬರೂ ಹರಿಹರ ತಾಲ್ಲೂಕಿನ ವಾಸಿಗಳಲ್ಲ. ಮದುವೆ ನೋಂದಣಿ ಮಾಡಿಸಲು ದಂಪತಿ ಪೈಕಿ ಒಬ್ಬರು ಸ್ಥಳೀಯ ತಾಲ್ಲೂಕು ವಾಸಿಯಾಗಿರಬೇಕು ಎಂಬ ನಿಯಮವಿದೆ. ಆದ ಕಾರಣ ಯುವತಿ ತಾಲ್ಲೂಕಿನ ವಾಸಿ ಎಂದು ತೋರಿಸಲು ಈ ಶಾಲೆಯಿಂದ ದೃಢೀಕರಣ ಪತ್ರ ಪಡೆದಿದ್ದಾರೆ ಎಂದು ಮಹೇಶ್‌ ಅವರು ಆರೋಪಿಸಿದ್ದಾರೆ.

ದೂರಿನ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಆರ್‌ಪಿ ಪ್ರಾಥಮಿಕ ಪರಿಶೀಲನೆಗೆ ಶಾಲೆಗೆ ಭೇಟಿ ನೀಡಿ ದಾಖಲಾತಿಯ ಲೆಡ್ಜರ್ ಪರಿಶೀಲಿಸಿದರು. ಶಾಲಾ ದೃಢೀಕರಣದಲ್ಲಿರುವ ಅಂಕಿ–ಸಂಖ್ಯೆಗೂ ಲೆಡ್ಜರ್‌ನಲ್ಲಿರುವ ಅಂಕಿ–ಸಂಖ್ಯೆಗೂ ತಾಳೆಯಾಗುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.

ADVERTISEMENT

ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ ಅವರೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದು ಶಾಲಾ ದೃಢೀಕರಣ ನೀಡಿದ ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದಾರೆ.

ಈ ನಡುವೆ ಈ ಪ್ರೇಮಿಗಳ ಮದುವೆಗೆ ಅರ್ಜಿ ಸ್ವೀಕಾರ ಮಾಡಿರುವ ಇಲ್ಲಿನ ಹಿರಿಯ ಉಪನೋಂದಣಾಧಿಕಾರಿ ಅವರೂ ಸದರಿ ಶಾಲಾ ದೃಢೀಕರಣದ ನೈಜತೆ ತಿಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಪತ್ರ ಬರೆದಿದ್ದಾರೆ.

***

ಪ್ರಕರಣದ ಕುರಿತು ಪರಿಶೀಲಿಸಿ ಸಮಗ್ರ ವರದಿ ನೀಡಲು ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ತಪ್ಪು ಮಾಡಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.

- ಜಿ.ಆರ್. ತಿಪ್ಪೇಶಪ್ಪ, ಡಿಡಿಪಿಐ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.