ADVERTISEMENT

ಬಸವಾಪಟ್ಟಣ: ಕೆಂಗಾಪುರ– ಎಕ್ಕೇಗೊಂದಿ ರಸ್ತೆ ದುರಸ್ತಿಗೆ ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 3:56 IST
Last Updated 21 ಜುಲೈ 2025, 3:56 IST
ಬಸವಾಪಟ್ಟಣ ಸಮೀಪದ ಕೆಂಗಾಪುರ– ಎಕ್ಕೇಗೊಂದಿ (ಬೇಚರಾಕ್ ಗ್ರಾಮ) ರಸ್ತೆ ಸ್ಥಿತಿ ಇದು
ಬಸವಾಪಟ್ಟಣ ಸಮೀಪದ ಕೆಂಗಾಪುರ– ಎಕ್ಕೇಗೊಂದಿ (ಬೇಚರಾಕ್ ಗ್ರಾಮ) ರಸ್ತೆ ಸ್ಥಿತಿ ಇದು   

ಬಸವಾಪಟ್ಟಣ: ಸಮೀಪದ ಕೆಂಗಾಪುರ– ಎಕ್ಕೇಗೊಂದಿ (ಬೇಚರಾಕ್‌ ಗ್ರಾಮ) ರಸ್ತೆ ಸಂಪೂರ್ಣ ಹಾಳಾಗಿ 15  ವರ್ಷಳಾಗಿದ್ದರೂ ಯಾರೂ ಈ ರಸ್ತೆ ದುರಸ್ತಿಗೆ ಮುಂದಾಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಗ್ರಾಮೀಣ ರಸ್ತೆಯ ಎರಡೂ ಕಡೆಗಳಲ್ಲಿ ಸುಮಾರು 400 ಎಕರೆ ನೀರಾವರಿ ಭೂಮಿ ಇದ್ದು, ಇಲ್ಲಿ ಭತ್ತ, ಅಡಿಕೆ, ತೆಂಗು ಬೆಳೆಯಲಾಗುತ್ತಿದೆ. ಪ್ರತಿದಿನ ಕೆಸರು ತುಂಬಿದ ರಸ್ತೆಯಲ್ಲಿ ಕೃಷಿ ಕೆಲಸಕ್ಕೆ ಸಂಚರಿಸಲು ರೈತರು ಮತ್ತು ಕೂಲಿಕಾರರು ಹರಸಾಹಸ ಮಾಡಬೇಕಿದೆ. ಮಳೆಗಾಲದ ಭತ್ತದ ನಾಟಿ, ಅಡಿಕೆ ಕೊಯ್ಲು, ಕೃಷಿ ಉತ್ಪನ್ನಗಳ ಸಾಗಾಟ ನರಕ ಸದೃಶವಾಗಿದೆ. ಸಂಪೂರ್ಣ ಗುಂಡಿ ಬಿದ್ದಿರುವ ಈ ರಸ್ತೆಯಲ್ಲಿ ಟ್ರ್ಯಾಕ್ಟರ್‌ಗಳು, ದ್ವಿಚಕ್ರ, ತ್ರಿಚಕ್ರ ವಾಹನಗಳು, ಕೊಯ್ಲಿನ ಬೃಹತ್‌ ಯಂತ್ರಗಳು, ಲಾರಿಗಳ ಸಂಚಾರ ದುಸ್ತರವಾಗಿದೆ.

‘ಮಾಯಕೊಂಡ ಶಾಸಕರು ಈ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿ ಉತ್ತಮ ರಸ್ತೆ ನಿರ್ಮಿಸಿ ರೈತರಿಗೆ ಸಹಾಯ ಮಾಡಬೇಕು’ ಎಂದು ಕೆಂಗಾಪುರದ ರೈತ ಕೆ.ಪಿ.ಓಂಕಾರ ನಾಯ್ಕ ಒತ್ತಾಯಿಸಿದ್ದಾರೆ.

ADVERTISEMENT

‘ವಾಹನಗಳು ಈ ರಸ್ತೆಯ ಕೆಸರಿನಲ್ಲಿ ಸಿಲುಕಿಕೊಂಡು ಮುಂದಕ್ಕೆ ಚಲಿಸಲಾರದೇ ನಡೆದುಕೊಂಡು ಹೋಗುವ ಸ್ಥಿತಿ ಉಂಟಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಿರಿಯ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ವರದಿ ಸಲ್ಲಿಸಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಸ್‌.ಅಣ್ಣೋಜಿರಾವ್‌ ಮನವಿ ಮಾಡಿದ್ದಾರೆ.

‘ಮಳೆಗಾಲದಲ್ಲಿ ಗೊಬ್ಬರ, ಬೀಜ, ನಾಟಿ ಮಾಡುವ ಸಸಿಗಳು, ಕೂಲಿಕಾರರನ್ನು ವಾಹನಗಳಲ್ಲಿ ಸಾಗಿಸಲು ರೈತರು ಪಡುತ್ತಿರುವ ಶ್ರಮವನ್ನು ಅಧಿಕಾರಿಗಳು ಇತ್ತ ಗಮನಹರಿಸಿ ದುರಸ್ತಿಗೆ ಶೀಘ್ರವೇ ಮುಂದಾಗಬೇಕು’ ಎಂದು ಡಿ.ಎಸ್‌.ಎಸ್‌. ಮುಖಂಡ ಅಣ್ಣಪ್ಪ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.