ADVERTISEMENT

ಮಾಯಕೊಂಡ | ಹಿಂಗಾರು ರಾಗಿಯತ್ತ ಒಲವು: ಉತ್ತಮ ಫಸಲು ನಿರೀಕ್ಷೆ

ಎಂ.ಎಸ್.ಮಂಜುನಾಥ್
Published 4 ಜನವರಿ 2025, 7:24 IST
Last Updated 4 ಜನವರಿ 2025, 7:24 IST
ಮಾಯಕೊಂಡ ಸಮೀಪದ ಜಮೀನೊಂದರಲ್ಲಿ ಸೊಂಪಾಗಿ‌ ಬೆಳೆಯುತ್ತಿರುವ ರಾಗಿ ಬೆಳೆ
ಮಾಯಕೊಂಡ ಸಮೀಪದ ಜಮೀನೊಂದರಲ್ಲಿ ಸೊಂಪಾಗಿ‌ ಬೆಳೆಯುತ್ತಿರುವ ರಾಗಿ ಬೆಳೆ   

ಮಾಯಕೊಂಡ: ಉತ್ತಮ ಮಳೆಗಾಲ, ಅಂತರ್ಜಲ ವೃದ್ಧಿಯಾದ ಕಾರಣ, ಈ ಭಾಗದ ರೈತರ ಚಿತ್ತ ರಾಗಿ ಬೆಳೆಯತ್ತ ಹೊರಳಿದೆ. ಕೊಳವೆ ಬಾವಿಗಳ ಮೂಲಕ ನೀರುಣಿಸಿ ರಾಗಿ ಬೆಳೆದಿದ್ದು, ಪೈರು ನಳನಳಿಸುತ್ತಿವೆ.

ಮಾಯಕೊಂಡ, ಆನಗೋಡು, ಅಣಜಿ ಹೋಬಳಿಗಳು ಸೇರಿದಂತೆ ದಾವಣಗೆರೆ ತಾಲ್ಲೂಕಿನ ರೈತರು‌ ಸಾಮಾನ್ಯವಾಗಿ ತರಕಾರಿ ಬೆಳೆ ಬೆಳೆಯುತ್ತಿದ್ದರು. ಆದರೆ ಈ ಬಾರಿ ‘ಗ್ಯಾರಂಟಿ’ ಬೆಳೆಯಾದ ರಾಗಿ ಬೆಳೆಯಲು ಆಸಕ್ತಿ ತೋರಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ ಹಿಂಗಾರಿನಲ್ಲಿ ಪ್ರತೀ ವರ್ಷ 500 ಹೆಕ್ಟೇರ್‌ನಲ್ಲಿ ಬಿತ್ತನೆಯಾಗುತ್ತಿದ್ದ ರಾಗಿ, ಈ ವರ್ಷ ದಾಖಲೆಯ 2,702 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆಯಾಗಿದೆ. ಮಾಯಕೊಂಡ ಹೋಬಳಿಯೊಂದರಲ್ಲೇ 350 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ.

ಪ್ರತಿ ಎಕರೆಗೆ ಹತ್ತರಿಂದ ಹನ್ನೆರಡು ಕ್ವಿಂಟಲ್ ಇಳುವರಿ ನಿರೀಕ್ಷೆ, ಇದ್ದು ದಾವಣಗೆರೆ ತಾಲ್ಲೂಕಿನಲ್ಲಿ‌ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆರೆಯಬೇಕು ಎಂಬುದು ರೈತರ ಆಗ್ರಹವಾಗಿದೆ. 

ADVERTISEMENT

‘ಯಂತ್ರಗಳಿಂದ ಸುಲಭವಾದ ರಾಗಿ ಬೇಸಾಯ: ರಾಗಿ ಬೆಳೆಯ ಬೇಸಾಯಕ್ಕೆ ಈ ಹಿಂದೆ ತೀವ್ರ ಖರ್ಚು ಹಾಗೂ ಕೂಲಿ ಕಾರ್ಮಿಕರ ಸಮಸ್ಯೆ ಇತ್ತು. ಒಕ್ಕಲು ಮಾಡಲು ಕಣಗಳನ್ನ ಸಜ್ಜುಗೊಳಿಸಿ, ಹಲವು ದಿನಗಳ ಕಾಲ ಹತ್ತಾರು ಜನ ಶ್ರಮಪಡುವ ಸ್ಥಿತಿ ಇತ್ತು. ಆದರೆ ಈಗ ಬಿತ್ತನೆಯಿಂದ ಕಟಾವಿನವರೆಗೂ ಆಧುನಿಕ ಯಂತ್ರಗಳು ಬಂದಿದ್ದು, ರೈತರ ಭಾರ ತಗ್ಗಿಸಿವೆ.

ಜಮೀನು ಉಳುಮೆ, ಬಿತ್ತನೆ, ಕಟಾವು ಸೇರಿದಂತೆ ಹುಲ್ಲು ಪೆಂಡಿ ಕಟ್ಟಲು ಯಂತ್ರಗಳು ಬಂದಿವೆ. ಕೃಷಿ ಇಲಾಖೆಯಿಂದ ರಾಗಿ ಹುಲ್ಲು ಪೆಂಡಿ ಕಟ್ಟುವ ಯಂತ್ರಕ್ಕೆ ₹1 ಲಕ್ಷದವರೆಗೂ ಸಹಾಯಧನದ ಮೂಲಕ ವರ್ಷದಲ್ಲಿ 15 ಯಂತ್ರಗಳನ್ನ ರೈತರಿಗೆ ನೀಡಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಲಾಖೆಯ ಸಹಾಯಧನದಲ್ಲಿ‌ ‘ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ವಿತರಿಸಲಾಗುತ್ತಿದ್ದು ರಾಗಿಯಂತಹ ಬೆಳೆ ಬೆಳೆಯಲು ರೈತರಿಗೆ ಅನುಕೂಲ ಆಗಿದೆ. ರೈತರು ಇಲಾಖೆಯಿಂದ ನೆರವು ಪಡೆದು ಉತ್ತಮ‌ ಬೆಳೆ‌ ಬೆಳೆದು ಹೆಚ್ಚು ಲಾಭ ಪಡೆಯಬೇಕು  
ಶ್ರೀಧರ ಮೂರ್ತಿ ಸಹಾಯಕ ಕೃಷಿ ನಿರ್ದೇಶಕ
ಈ ಬಾರಿ ಅಂತರ್ಜಲ ಉತ್ತಮವಾಗಿದ್ದು ರಾಗಿ ಬೆಳೆಯಲು ರೈತರು ಆಸಕ್ತಿ ತೋರಿ ಬಿತ್ತನೆ ಮಾಡಿದ್ದಾರೆ. ಉತ್ತಮ ಇಳುವರಿ ಜೊತೆ ಜಾನುವಾರುಗಳಿಗೂ ಉತ್ತಮ ಮೇವು ದೊರೆಯಲಿದೆ
ಬೀರಪ್ಪ ಕೆ. ಮಾಯಕೊಂಡ ಕೃಷಿ ಅಧಿಕಾರಿ
‘ಪ್ರತಿ ವರ್ಷ ತರಕಾರಿ ಬೆಳೆಯುತ್ತಿದ್ದೆವು. ಈ ಬಾರಿ ರಾಗಿ ಬಿತ್ತನೆ ಮಾಡಿದ್ದೇವೆ. ಬೆಳೆ ಉತ್ತಮವಾಗಿದೆ. ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ
ಸಂದೀಪ್ ಪಾಟೀಲ್ ಬಾವಿಹಾಳು ಗ್ರಾಮ
ಕನಿಷ್ಟ ಬೆಂಬಲ ಬೆಲೆ ಅಡಿ ಹೋಬಳಿ ಮಟ್ಟದಲ್ಲಿ ರಾಗಿ ಖರೀದಿ ಕೇಂದ್ರ ತೆರೆಯುವ ಮೂಲಕ ಬೆಳೆಗಾರರಿಗೆ ಉತ್ತೇಜನ ಕೊಡಬೇಕು
ಎಂ.ಜಿ. ಗುರುನಾಥ್ ರಾಮಜೋಗಿ ಪ್ರತಾಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.