ADVERTISEMENT

ಚನ್ನಗಿರಿ | ರೈತರ ಬೆನ್ನೆಲುಬು ಮುರಿಯುವ ಕೆಲಸ: ಗುರುಬಸವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 3:01 IST
Last Updated 18 ಜನವರಿ 2026, 3:01 IST
ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಶನಿವಾರ ನಡೆದ ರೈತ ಸಂಗಮ ಕಾರ್ಯಕ್ರಮವನ್ನು ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು
ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಶನಿವಾರ ನಡೆದ ರೈತ ಸಂಗಮ ಕಾರ್ಯಕ್ರಮವನ್ನು ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು   

ಪಾಂಡೋಮಟ್ಟಿ(ಚನ್ನಗಿರಿ): ‘ರಸ್ತೆ, ರೈಲ್ವೆ, ವಿಮಾನ ನಿಲ್ದಾಣ ನಿರ್ಮಾಣ ಸೇರಿ ಅಭಿವೃದ್ಧಿಯ ಹೆಸರಿನಲ್ಲಿ ಕೃಷಿಗೆ ಯೋಗ್ಯವಾದ ರೈತರ ಕೃಷಿ ಭೂಮಿಯನ್ನು ಭೂ ಸ್ವಾಧೀನಪಡಿಸಿಕೊಂಡು, ಸರ್ಕಾರ ರೈತರನ್ನು ಕೃಷಿ ಕಾಯಕದಿಂದ ವಂಚಿತರಾಗುವಂತೆ ಮಾಡುತ್ತಿದೆ’ಎಂದು ವಿರಕ್ತ ಮಠದ ಗುರುಬಸವ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಸಂಗಮನಾಥ ಸ್ವಾಮೀಜಿ 64ನೇ ಹಾಗೂ ಚನ್ನಬಸವ ಸ್ವಾಮೀಜಿಗಳ 19ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವತತ್ವ ಸಮ್ಮೇಳನದ ಅಂಗವಾಗಿ ಶನಿವಾರ ನಡೆದ ರೈತ–ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ನಮ್ಮದು ಕೃಷಿ ಪ್ರಧಾನ ದೇಶ. ಕೃಷಿಕರು ದೇಶದ ಬೆನ್ನೆಲುಬು ಎನ್ನುವ ಸರ್ಕಾರವೇ ಕೃಷಿಕರ ಬೆನ್ನೆಲುಬನ್ನು ಮುರಿಯುವ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ವಿಷಾಧ. ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಕೊರತೆ ಎದುರಾಗುವ ಲಕ್ಷಣಗಳು ಕಂಡು ಬರುತ್ತಿದೆ. ಕೃಷಿಯನ್ನು ತಿರಸ್ಕಾರ ಮಾಡಿದರೆ ಯಾರೂ ಬದುಕಲು ಸಾಧ್ಯವಿಲ್ಲ. ಲಿಂಗಾಯತ ಧರ್ಮ ಕೃಷಿಕರ ಹಾಗೂ ಕಾಯಕದ ಧರ್ಮ ಎಂದರು.

ADVERTISEMENT

ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯಿಸುವುದನ್ನು ಕೈ ಬಿಟ್ಟು ಇರುವ ಕೊಳವೆ ಬಾವಿಗಳಿಗೆ ಮಳೆಯ ನೀರು ಇಂಗಿಸುವ ಪ್ರಕ್ರಿಯೆಯನ್ನು ಕೈ ಗೊಳ್ಳವುದು ಅಗತ್ಯವಾಗಿದೆ. ನೀರಿನ ಮಹತ್ವವನ್ನು ಅರಿತುಕೊಂಡು ಹಿತಮಿತವಾಗಿ ಬಳಸುವುದನ್ನು ಕಡ್ಡಾಯವಾಗಿ ರೂಡಿಸಿಕೊಳ್ಳಬೇಕು ಎಂದು ಚಿತ್ರದುರ್ಗದ ಜಲ ಸಂರಕ್ಷಣಾ ತಜ್ಞ ಎನ್.ಜೆ. ದೇವರಾಜರೆಡ್ಡಿ ತಿಳಿಸಿದರು.

ಚನ್ನಗಿರಿ ಹಾಲಸ್ವಾಮಿ ವಿರಕ್ತ ಮಠದ ಬಸವಜಯಚಂದ್ರ ಸ್ವಾಮೀಜಿ, ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಗದಗ ಜಿಲ್ಲೆಯ ರೋಣದ ಶೇಖರಯ್ಯ ಶಾಸ್ತ್ರಿ ಉಪನ್ಯಾಸ ನೀಡಿದರು.

ರೈತ ಮುಖಂಡ ಕೆ.ಟಿ. ಗಂಗಾಧರ್, ತುಮ್ಕೋಸ್ ಮಾಜಿ ಅಧ್ಯಕ್ಷ ಆರ್.ಎಂ. ರವಿ, ಬೆಂಗಳೂರು ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಎನ್. ಲಿಂಗಾಯತ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.