ADVERTISEMENT

ಎಚ್‌ಕೆಆರ್‌ ನಗರದ ನೀರಿನ ಸಮಸ್ಯೆ ಸರಿಪಡಿಸಿ: ನಿವಾಸಿಗಳ ಪ್ರತಿಭಟನೆ

ಎಸ್‌ಯುಸಿಐ ನೇತೃತ್ವ

​ಪ್ರಜಾವಾಣಿ ವಾರ್ತೆ
Published 15 ಮೇ 2019, 12:02 IST
Last Updated 15 ಮೇ 2019, 12:02 IST
ಎಚ್‌ಕೆಆರ್ ನಗರದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಸರಿಪಡಿಸುವಂತೆ ಸೋಷಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ನೇತೃತ್ವದಲ್ಲಿ ಸ್ಥಳೀಯರು ಬುಧವಾರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು
ಎಚ್‌ಕೆಆರ್ ನಗರದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಸರಿಪಡಿಸುವಂತೆ ಸೋಷಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ನೇತೃತ್ವದಲ್ಲಿ ಸ್ಥಳೀಯರು ಬುಧವಾರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು   

ದಾವಣಗೆರೆ: ಎಚ್‌ಕೆಆರ್ ನಗರದ 1,2,3ನೇ ಕ್ರಾಸ್‌ ನಿವಾಸಿಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಕೂಡಲೇ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ ಸೋಷಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ನೇತೃತ್ವದಲ್ಲಿ ಸ್ಥಳೀಯರು ಬುಧವಾರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

ಎಚ್‌ಕೆಆರ್ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭ ಮಾಡುವುದಾಗಿ ಪಾಲಿಕೆ ಭರವಸೆ ನೀಡಿತ್ತು. ನೀರಿಲ್ಲದೇ ತಗಡಿನ ಚಾವಣಿಯೊಂದಿಗೆ ಘಟಕವು ಅನಾಥವಾಗಿ ಬಿದ್ದಿದೆ. ನಲ್ಲಿಯಲ್ಲಿ ಬರುವ ನೀರು ವಾಸನೆ ಹಾಗೂ ಮಣ್ಣಿನಿಂದ ಕೂಡಿದೆ. ಒಳಚರಂಡಿಯ ಪಕ್ಕದಲ್ಲೇ ಹಾದು ಹೋಗಿರುವ ನೀರಿನ ಪೈಪ್‌ಗೆ ಕುಡಿಯುವ ನೀರಿನ ಹೊಸ ಪೈಪ್ ಸಂಪರ್ಕ ಕೊಟ್ಟಿರುವುದು ಅದಕ್ಕೆ ಕಾರಣ ಎಂದು ಪ್ರತಿಭಟನಕಾರರು ಆರೋಪಿಸಿದರು.

ಇಲ್ಲಿನ ನಿವಾಸಿಗಳಲ್ಲಿ ಬಹುತೇಕರು ಕೂಲಿ ಕೆಲಸ, ತರಕಾರಿ ಮಾರಾಟ, ಅಂಗನವಾಡಿ ಕೆಲಸಕ್ಕೆ ಹೋಗುತ್ತಾರೆ. ಆದರೆ ನೀರು ಬೆಳಿಗ್ಗೆ ಬೇಗ ಬಿಡದೆ ಬೆಳಿಗ್ಗೆ 10 ರಿಂದ ಮಧ್ಯಾಹ್ನದ ವರೆಗೆ ಯಾವುದೋ ಸಮಯದಲ್ಲಿ ಬಿಡುತ್ತಾರೆ. ಇದರಿಂದ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.

ADVERTISEMENT

ಶುದ್ಧ ಕುಡಿಯುವ ನೀರಿನ ಘಟಕ ಶೀಘ್ರದಲ್ಲಿಯೇ ಆರಂಭಿಸಬೇಕು. ನಾಲ್ಕು ದಿನಕ್ಕೊಮ್ಮೆ ನೀರು ಬಿಡಬೇಕು. ಬೆಳಿಗ್ಗೆ 6 ಅಥವಾ 7 ಗಂಟೆಗೆ ನೀರು ಕೊಡಬೇಕು. ಕೊಳವೆಬಾವಿ ಕೊರೆದು ನೀರಿನ ಸಮಸ್ಯೆ ಪರಿಹರಿಸಬೇಕು. ಸಣ್ಣ ಚರಂಡಿಗಳನ್ನು ಸ್ವಚ್ಛ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಸ್‌ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ , ಸದಸ್ಯರಾದ ಪರಶುರಾಮ್, ನಾಗಜ್ಯೋತಿ, ಸಿದ್ದೇಶ್ ಹಾಗೂ ಎಚ್‌ಕೆಆರ್‌ ನಗರ ನಿವಾಸಿಗಳಾದ ಶಿವಮ್ಮ, ಶಾನಕ್ಕ, ಇಂದಿರಮ್ಮ, ಲಲಿತಮ್ಮ, ಗೌರಮ್ಮ, ಶಾಂತಮ್ಮ, ಮಂಜುಳಮ್ಮ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.