ADVERTISEMENT

ದಾವಣಗೆರೆಯ ಬಾಲಕ, ಮೂವರು ವೃದ್ಧೆಯರಿಗೆ ಕೋವಿಡ್

ವೃದ್ಧ ಸೇರಿ ಐವರು ಆಸ್ಪತ್ರೆಯಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಮೇ 2020, 15:08 IST
Last Updated 29 ಮೇ 2020, 15:08 IST
   

ದಾವಣಗೆರೆ: ನಗರದಲ್ಲಿ ಒಬ್ಬ ಬಾಲಕ ಹಾಗೂ ಮೂವರು ವೃದ್ಧೆಯರಿಗೆ ಕೋವಿಡ್-19 ರೋಗ ಇರುವುದು ಶುಕ್ರವಾರ ದೃಢಪಟ್ಟಿದೆ.

ತರಳಬಾಳು ಬಡಾವಣೆಯ 47 ವರ್ಷದ ಮಹಿಳೆ (ಪಿ-2208) ಸಂಪರ್ಕದಿಂದ ಆಕೆಯ 65 ವರ್ಷದ ತಾಯಿ (ಪಿ-2557) ಹಾಗೂ 68 ವರ್ಷದ ಅತ್ತೆಗೆ (ಪಿ-2558) ಕೊರೊನಾ ಸೋಂಕು ತಗುಲಿದೆ. ತೀವ್ರ ಉಸಿರಾಟದ ತೊಂದರೆಯ ಕಾರಣಕ್ಕೆ ಮಹಿಳೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರಲ್ಲಿ ಕೊರೊನಾ ಸೋಂಕು ಇರುವುದು ಮೇ 26ರಂದು ದೃಢಪಟ್ಟಿತ್ತು. ಹೊಸ ಮಾರ್ಗಸೂಚಿ ಪ್ರಕಾರ ತರಳಬಾಳು ಬಡಾವಣೆಯ ಮನೆಯಲ್ಲೇ ಮಹಿಳೆಯ ತಾಯಿ ಹಾಗೂ ಅತ್ತೆಯನ್ನು ಪ್ರತ್ಯೇಕವಾಗಿ ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. ಅವರ ಗಂಟಲಿನ ದ್ರವದ ವರದಿಯು ಗುರುವಾರ ಪಾಸಿಟಿವ್‌ ಎಂದು ಬಂದಿದ್ದು, ಇಬ್ಬರನ್ನೂ ಚಿಗಟೇರಿ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಲಿನಗರ ಕಂಟೈನ್‌ಮೆಂಟ್‌ ವಲಯದ 29 ವರ್ಷದ ಯುವಕ (ಪಿ–922) ಸಂಪರ್ಕದಿಂದ ಎಂಟು ವರ್ಷದ ಬಾಲಕನಿಗೂ (ಪಿ-2559) ಸೋಂಕು ಅಂಟಿಕೊಂಡಿದೆ.

ADVERTISEMENT

ಬಸವರಾಜಪೇಟೆಯ 68 ವರ್ಷದ ವೃದ್ಧೆಯಲ್ಲೂ (ಪಿ-2560) ಸೋಂಕು ಕಾಣಿಸಿಕೊಂಡಿದೆ. ಶೀತಜ್ವರದಿಂದ (ಐ.ಎಲ್‌.ಐ) ಬಳಲುತ್ತಿದ್ದ ಇವರು ಆಸ್ಪತ್ರೆಗೆ ಬಂದು ವೈದ್ಯರಿಗೆ ತೋರಿಸಿಕೊಂಡಿದ್ದರು. ಇವರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಿಗೂ ಸೋಂಕು ತಗುಲಿರುವುದು ಶುಕ್ರವಾರ ಬಂದ ವರದಿ ಖಚಿತಪಡಿಸಿದೆ. ಮಧುಮೇಹದಿಂದಲೂ ಬಳಲುತ್ತಿದ್ದ ಈ ವೃದ್ಧೆ ಚಿಕಿತ್ಸೆಗಾಗಿ ಮನೆಯಿಂದ ಹೊರಗಡೆ ಸುತ್ತಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸೋಂಕು ತಗುಲಿರಬಹುದು. ಬಸವರಾಜಪೇಟೆಯಲ್ಲಿ ಹೊಸ ಕಂಟೈನ್ಮೆಂಟ್‌ ವಲಯ ನಿರ್ಮಿಸಿ ಇವರ ಮನೆಯ ಬೀದಿಯನ್ನು ಸೀಲ್‌ಡೌನ್‌ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 146 ಕೋವಿಡ್ ಪ್ರಕರಣಗಳು ವರದಿಯಾಗಿವೆ. ನಾಲ್ವರು ಈ ರೋಗದಿಂದ ಮೃತಪಟ್ಟಿದ್ದಾರೆ. ಒಟ್ಟು 84 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 58 ಸಕ್ರಿಯ ಕೋವಿಡ್‌ ಪ್ರಕರಣಗಳಿವೆ.

ಗುಣಮುಖರಾದ ಐವರು ಮನೆಗೆ

ಕೋವಿಡ್‌–19 ರೋಗದಿಂದ ಗುಣಮುಖರಾದ ಐವರನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆ ಮಾಡಿ ಮನೆಗೆ ಕಳುಹಿಸಿಕೊಡಲಾಯಿತು.

ಒಬ್ಬ ವೃದ್ಧ, ಮೂವರು ಯುವತಿಯರು ಹಾಗೂ ಒಬ್ಬ ಯುವಕನನ್ನು ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕಿಯರು ಆತ್ಮೀಯವಾಗಿ ಬೀಳ್ಕೊಟ್ಟರು.

ಜಾಲಿನಗರದ 40 ವರ್ಷದ ಯುವಕ (ಪಿ–960), 22 ವರ್ಷದ ಯುವತಿ (ಪಿ–1250), ರೈತ ಬೀದಿಯ 23 ವರ್ಷದ ಯುವತಿ (ಪಿ–1292), ಎಸ್‌.ಜೆ.ಎಂ. ನಗರದ 35 ವರ್ಷದ ಯುವತಿ (ಪಿ–1247) ಹಾಗೂ ವಿನಾಯಕನಗರದ 68 ವರ್ಷದ ವೃದ್ಧ (ಪಿ–1378) ಗುಣಮುಖರಾಗಿದ್ದು, ಖುಷಿಯಿಂದ ಮನೆಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.