ADVERTISEMENT

ರಸ್ತೆ ವಿಸ್ತರಣೆ ಸಾಧಕ, ಬಾಧಕ ಚರ್ಚೆ: ಶಾಂತನಗೌಡ

ಗದಗ–ಹೊನ್ನಾಳಿ ಮಾರ್ಗ; ಕೆ–ಶಿಪ್ ಅಧಿಕಾರಿಗಳೊಂದಿಗೆ ಶೀಘ್ರವೇ ಮಾತುಕತೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:53 IST
Last Updated 7 ಫೆಬ್ರುವರಿ 2026, 2:53 IST
ಹೊನ್ನಾಳಿ ಪಟ್ಟಣದ ಎ.ಕೆ.ಕಾಲೊನಿ ಸಮೀಪ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಶಾಸಕ ಡಿ.ಜಿ.ಶಾಂತನಗೌಡ ಪರಿಶೀಲಿಸಿದರು
ಹೊನ್ನಾಳಿ ಪಟ್ಟಣದ ಎ.ಕೆ.ಕಾಲೊನಿ ಸಮೀಪ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಶಾಸಕ ಡಿ.ಜಿ.ಶಾಂತನಗೌಡ ಪರಿಶೀಲಿಸಿದರು   

ಹೊನ್ನಾಳಿ: ಗದಗ–ಹೊನ್ನಾಳಿ ಮಾರ್ಗದ ರಸ್ತೆ ವಿಸ್ತರಣೆ ಕ್ರಿಯಾಯೋಜನೆ ತಯಾರಿಸಿರುವ ಯೋಜನಾ ನಿರ್ದೇಶಕರನ್ನು ಕರೆಸಿ, ಸ್ಥಳ ಪರಿಶೀಲನೆ ಮಾಡಿದ ನಂತರ ಸಾಧಕ ಬಾಧಕಗಳನ್ನು ಚರ್ಚಿಸಲಾಗುವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಉಪ ವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ಹಾಗೂ ಕೆ-ಶಿಪ್ (ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ಅಧಿಕಾರಿಗಳ ಜೊತೆ ಪಟ್ಟಣದ ಎ.ಕೆ. ಕಾಲೊನಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದರು. 

ಎ.ಕೆ. ಕಾಲೊನಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ರಸ್ತೆ ಮಧ್ಯದಿಂದ ಎರಡೂ ಬದಿಗೆ 11.5 ಮೀಟರ್ ವಿಸ್ತರಣೆ ಮಾಡಲಾಗುತ್ತಿದೆ. ಇದರಲ್ಲಿ ಒಂದಿಂಚೂ  ಕಡಿಮೆ ಮಾಡಿಲ್ಲ. ಇದರಲ್ಲಿ ಚರಂಡಿ, ಪಾದಚಾರಿ ಮಾರ್ಗವೂ ಸೇರಿದೆ. ಏಳು ಕಟ್ಟಡಗಳ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಕೆ-ಶಿಪ್ ಅಧಿಕಾರಿಗಳು ಹೈಕೋರ್ಟ್‍ನಲ್ಲಿ ಪ್ರಕರಣವನ್ನು ಮುನ್ನಡೆಸುತ್ತಿದ್ದಾರೆ. ಇತರೆ ಕಟ್ಟಡಗಳ ಮಾಲೀಕರು ತಾವೇ ತೆರವುಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಎ.ಕೆ. ಕಾಲೊನಿ ಬಳಿ ಇರುವ ರಸ್ತೆ ತಿರುವಿನಲ್ಲಿ ಸಾಗಲು ಭಾರಿ ಗಾತ್ರದ ವಾಹನಗಳು ಪರದಾಡಬೇಕಿದೆ. ಕೂಡಲೇ ರಸ್ತೆಯನ್ನು ಮತ್ತಷ್ಟು ವಿಸ್ತರಿಸಬೇಕಿದೆ. ಈ ಬಗ್ಗೆ ಸಿಪಿಐ ಸುನಿಲ್‍ ಕುಮಾರ್ ಕೆ-ಶಿಪ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೂ ಪತ್ರ ಬರೆಯಲಿದ್ದಾರೆ. ಈ ವೃತ್ತದಲ್ಲಿ ಎರಡು ಮನೆಗಳ ಸ್ವಲ್ಪ ಭಾಗವನ್ನು ತೆರವು ಮಾಡಿದರೆ ಮಾತ್ರ ವಿಸ್ತರಣೆ ಸಂಪೂರ್ಣಗೊಳ್ಳುತ್ತದೆ ಎಂದರು.

ಈ ಮನೆಗಳಿಗೆ ಇಂದಿನ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಪರಿಹಾರ ನೀಡಿ, ತೆರವುಗೊಳಿಸುವುದಕ್ಕೆ ಅಗತ್ಯ ಕ್ರಮ ಜರುಗಿಸಬೇಕು ಎಂದು ಕೆ-ಶಿಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗದಗ-ಹೊನ್ನಾಳಿ ಮಾರ್ಗದ 138.2 ಕಿ.ಮೀ. ಉದ್ದದ ರಸ್ತೆ ವಿಸ್ತರಣೆಗೆ ₹840 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಕಾಮಗಾರಿ ಶೇ 50ರಷ್ಟು ಮುಗಿದಿದೆ. 

ಉಪ ವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ಕೆ-ಶಿಪ್ ಅಧಿಕಾರಿಗಳಾದ ಪರಮೇಶ್ವರ ನಾಯ್ಕ, ಮಂಜುನಾಥ್, ಎಂಜಿನಿಯರ್ ಶಶಿಕಲಾ, ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ, ಪಿಎಸ್‍ಐ ಕುಮಾರ್, ಪುರಸಭೆ ಎಂಜಿನಿಯರ್ ದೇವರಾಜ್ ಹಾಜರಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.