ADVERTISEMENT

ಮಹಾಗಣಪತಿ ಶೋಭಾಯಾತ್ರೆ | ಜಿಲ್ಲಾಡಳಿತದಿಂದ ಅಘೋಷಿತ ನಿರ್ಬಂಧ: ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 5:05 IST
Last Updated 25 ಸೆಪ್ಟೆಂಬರ್ 2025, 5:05 IST
ಚನ್ನಗಿರಿ ಪಟ್ಟಣದಲ್ಲಿ ಬುಧವಾರ ವಿರಾಟ್ ಹಿಂದೂ ಗಣಪತಿ ವಿಸರ್ಜನೆ ಅಂಗವಾಗಿ ನಡೆದ ಶೋಭಾಯಾತ್ರೆಗೆ ಮಾಜಿ ಸಂಸದ ಪ್ರತಾಪ ಸಿಂಹ ಚಾಲನೆ ನೀಡಿದರು 
ಚನ್ನಗಿರಿ ಪಟ್ಟಣದಲ್ಲಿ ಬುಧವಾರ ವಿರಾಟ್ ಹಿಂದೂ ಗಣಪತಿ ವಿಸರ್ಜನೆ ಅಂಗವಾಗಿ ನಡೆದ ಶೋಭಾಯಾತ್ರೆಗೆ ಮಾಜಿ ಸಂಸದ ಪ್ರತಾಪ ಸಿಂಹ ಚಾಲನೆ ನೀಡಿದರು    

ಚನ್ನಗಿರಿ: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಈ ಬಾರಿಯ ಗಣೇಶೋತ್ಸವಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಹಿಂದೂಗಳ ಮೇಲೆ ಕಡಿವಾಣ ಹಾಕಲು ಮುಂದಾಗಿದೆ. ಜಿಲ್ಲಾಡಳಿತ ಗಣೇಶೋತ್ಸವದಲ್ಲಿ ಡಿ.ಜೆ.ಗೆ ಅಘೋಷಿತ ನಿರ್ಬಂಧ ಹಾಕುವ ಮೂಲಕ ದಬ್ಬಾಳಿಕೆಯನ್ನು ನಡೆಸಿದೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ತಿಳಿಸಿದರು.

ಪಟ್ಟಣದ ಊರ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬುಧವಾರ ವಿರಾಟ್ ಹಿಂದೂ ಗಣಪತಿ ಶೋಭಾಯಾತ್ರೆ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಅವರ ತಂದೆ ಶಾಸಕ ಶಾಮನೂರು ಶಿವಶಂಕರಪ್ಪ ಅವರ ವಂಶ ಪಾರಂಪರ್ಯ ಆಡಳಿತದಿಂದಾಗಿ ಜಿಲ್ಲೆಯ ಜನರು ಬೇಸತ್ತು ಹೋಗಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಮರೆತು ಸಭ್ಯವಲ್ಲದ ಪದಗಳನ್ನು ಬಳಸುತ್ತಿದ್ದಾರೆ. ಮೊದಲು ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಕಾಪಾಡಬೇಕು’ ಎಂದು ಹೇಳಿದರು.

ADVERTISEMENT

ಕೇದಾರಲಿಂಗ ಹಿರೇಮಠದ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಬಿಜೆಪಿ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಎಚ್.ಎಸ್. ಶಿವಕುಮಾರ್, ವಿರಾಟ್ ಹಿಂದೂ ಗಣಪತಿ ಸಮಿತಿ ಅಧ್ಯಕ್ಷ ಮಂಜುನಾಥ್ ಕಾಳೆ, ವಿಎಚ್‌ಪಿ ಜಿಲ್ಲಾ ಘಟಕದ ಸಂಚಾಲಕ ಮಂಜುನಾಥ್, ತಾಲ್ಲೂಕು ಘಟಕದ ಸಂಚಾಲಕ ರಾಕೇಶ್, ರಾಜು ಕರಡೇರ್, ಚಿಕ್ಕಣ್ಣ ಉಪಸ್ಥಿತರಿದ್ದರು.

ಪಟ್ಟಣದ ಊರ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಹೊರಟ ಶೋಭಾಯಾತ್ರೆ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೀರಗಾಸೆ, ತಮಟೆ ಮೇಳ, ನಾಸಿಕ್ ಡೋಲು, ಜುಂಜುಂ ಮೇಳ ಮುಂತಾದ ಕಲಾ ತಂಡಗಳ ಮೇಳದೊಂದಿಗೆ ಸಾಗಿತು. ಇಡೀ ಪಟ್ಟಣವನ್ನು ಕೇಸರಿ ಧ್ವಜ ಹಾಗೂ ಬಾವುಟಗಳಿಂದ ಅಲಂಕರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.