ADVERTISEMENT

ಕೊರೊನಾ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿ

ಕೋವಿಡ್–19 ಜಾಗೃತಿ ಕುರಿತು ಸ್ವಯಂ ಸೇವಕರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 14:08 IST
Last Updated 8 ಏಪ್ರಿಲ್ 2020, 14:08 IST
ದಾವಣಗೆರೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್-19 ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಯಂ ಸೇವಕರು.
ದಾವಣಗೆರೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್-19 ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಯಂ ಸೇವಕರು.   

ದಾವಣಗೆರೆ: ಕೋವಿಡ್–19 ನಿಯಂತ್ರಣದಲ್ಲಿ ಎಲ್ಲರ ಸತತ ಪ್ರಯತ್ನದಿಂದ ಜಿಲ್ಲೆಯ 3 ಪಾಸಿಟಿವ್ ಪ್ರಕರಣಗಳು ನೆಗೆಟಿವ್ ಬಂದಿದ್ದು, ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಎದುರಿಸಲು ನಾವು ಹೇಗೆ ಸಜ್ಜಾಗಬೇಕು ಎಂದು ಚಿಂತಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್-19 ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳು 24X7 ನಂತೆ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ನಮ್ಮೊಂದಿಗೆ ಕೈಜೋಡಿಸಲು ಸ್ವಯಂ ಸೇವಕರು ಮುಂದೆ ಬಂದಿರುವುದು ಸ್ವಾಗತಾರ್ಹ. ಜಿಲ್ಲಾಡಳಿತ ನಿಮ್ಮ ಸೇವೆಯನ್ನು ಸಾರ್ಥಕವಾಗಿ ಬಳಸಿಕೊಳ್ಳುತ್ತದೆ’ ಎಂದರು.

‘ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆ ಸ್ಥಿತಿ ಉತ್ತಮವಾಗಿದ್ದು, ಈ ಸಮಯದಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಬಂದವರು 19 ಸಾವಿರ ಜನರ ನಿಗಾ ವಹಿಸುವ ಹೊಣೆ ನಮ್ಮ ಮೇಲಿದೆ. ಅವರಲ್ಲಿ ಕೆಲವರು ಹೋಂ ಕ್ವಾರಂಟೈನ್‍ನಲ್ಲಿದ್ದಾರೆ. ಜಿಲ್ಲೆಯಲ್ಲಿದ್ದ ಮೂರು ಪಾಸಿಟಿವ್ ಪ್ರಕರಣಗಳ ಸೋಂಕಿತರು ಗುಣಮುಖ ಹೊಂದಿದ್ದು ಅವರ ಪರೀಕ್ಷೆ ವರದಿ ನೆಗೆಟಿವ್ ಎಂದು ಬಂದಿದೆ. ಐಸೋಲೆಷನ್‍ನಲ್ಲಿ ವಾರ್ಡ್‍ನಲ್ಲಿದ್ದ ಇಬ್ಬರು ಬಿಡುಗಡೆಯಾಗಿದ್ದಾರೆ. ಇನ್ನೊಬ್ಬ ಸೋಂಕಿತರ ಬಿಡುಗಡೆ ಬಗ್ಗೆ ತೀರ್ಮಾನಿಸಲಾಗುವುದು’ ಎಂದರು.

ADVERTISEMENT

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮಾತನಾಡಿ, ‘ಸ್ವಯಂ ಸೇವಕರಿಗೆ ಈವರೆಗೂ ಜಿಲ್ಲಾಡಳಿತದಿಂದ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಸೂಚಿಸಿಲ್ಲ. ಅಲ್ಲಿಯವರೆಗೆ ನೀವು ನಿಮ್ಮ ಮನೆಯ ವ್ಯಾಪ್ತಿಯಲ್ಲಿಯೇ ತರಕಾರಿ, ಹಣ್ಣು, ಪಡಿತರ ವಿತರಿಸುವ ಸ್ಥಳಗಳಿಗೆ ತೆರಳಿ ಸಾರ್ವಜನಿಕರಿಂದ ಆಗುವ ನೂಕು ನುಗ್ಗಲನ್ನು ತಡೆದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸಬೇಕು’ ಎಂದರು.

‘ದಾನಿಗಳು ಆಹಾರ ಧಾನ್ಯ, ಬಟ್ಟೆ ಹಾಗೂ ದಿನಸಿಗಳನ್ನು ನಿರ್ಗತಿಕರಿಗೆ ಹಂಚಲು ಬಯಸಿದಲ್ಲಿ ಜಿಲ್ಲಾಡಳಿತದಲ್ಲಿ ಆರಂಭಿಸಿರುವ ಕೊರೋನಾ ವಾರ್ ರೂಂಗೆ ತಲುಪಿಸಬೇಕು. ಇದಕ್ಕಾಗಿ ಕಾರ್ಮಿಕ ಅಧಿಕಾರಿ ಹಾಗೂ ದೂಡಾ ಆಯುಕ್ತರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ’ ಎಂದರು.

ಡಿಎಚ್‍ಒ ಡಾ. ರಾಘವೇಂದ್ರಸ್ವಾಮಿ ಮಾತನಾಡಿ, ‘ಸಾರ್ವಜನಿಕರೆಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಜನರೊಂದಿಗೆ ವ್ಯವಹರಿಸುವಾಗ ಹಾಗೂ ಸೋಂಕಿತ ಮತ್ತು ಶಂಕಿತ ವ್ಯಕ್ತಿಗಳ ಹತ್ತಿರವಿರುವಾಗ ಮಾತ್ರ ಮಾಸ್ಕ್ ಬಳಸಬೇಕು. ಎನ್–95 ಮಾಸ್ಕ್‌ ಅನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಬಳಸಬೇಕು. ಸಾಮಾನ್ಯ ಜನರು ಸಾಮಾನ್ಯವಾಗಿರುವ ಮಾಸ್ಕ್ ಬಳಸಲು ಸಲಹೆ ನೀಡಿದರು. ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡು ರೋಗ ನಿಯಂತ್ರಿಸಿ’ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾತನಾಡಿ, ‘ಕೋವಿಡ್-19 ನಿಯಂತ್ರಿಸಲು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯು ಉತ್ತಮವಾಗಿ ಕಾರ್ಯನಿರ್ವಹಿತ್ತಿದ್ದು, ಜಿಲ್ಲಾಡಳಿತದ ಬೆಂಬಲ ಯಾವಾಗಲೂ ಇದೆ. ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣಬೇಡಿ. ಅವರು ನಮ್ಮಂತೆ ಮನುಷ್ಯರು’ ಎಂದರು.

ಸಭೆಯಲ್ಲಿ ಡಿ.ಎಲ್.ಒ. ಡಾ ಮುರಳಿಧರ, ಡಾ.ಗಂಗಾಧರ್, ಕೆಐಎಡಿಬಿ ಅಧಿಕಾರಿ ಸರೋಜ, ಕುಟುಂಬ ಕಲ್ಯಾಣಾಧಿಕಾರಿ ರೇಣುಕಾರಾದ್ಯ, ವಿಶೇಷ ಭೂಸ್ವಾಧಿನಾಧಿಕಾರಿ ರೇಷ್ಮಾ ಹಾನಗಲ್ ಮತ್ತು ಡಿಐಪಿಆರ್ ಸ್ವಯಂ ಸೇವಕರು, ರೆಡ್‍ಕ್ರಾಸ್, ಕಾನೂನು ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳ ಸ್ವಯಂ ಸೇವಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.