ADVERTISEMENT

ಚಿನ್ನ ಖರೀದಿಗೆ ನೂಕುನುಗ್ಗಲು

ಅಕ್ಷಯ ತೃತೀಯಾ; ಒಡವೆ ಖರೀದಿಸಿ ಖುಷಿಪಟ್ಟ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:00 IST
Last Updated 7 ಮೇ 2019, 20:00 IST
ಅಕ್ಷಯ ತೃತೀಯಾ ಅಂಗವಾಗಿ ದಾವಣಗೆರೆಯ ರಾಯ್ಕರ್‌ ಮಳಿಗೆಯಲ್ಲಿ ಗ್ರಾಹಕರು ಮಂಗಳವಾರ ಚಿನ್ನ ಖರೀದಿಸಿದರು
ಅಕ್ಷಯ ತೃತೀಯಾ ಅಂಗವಾಗಿ ದಾವಣಗೆರೆಯ ರಾಯ್ಕರ್‌ ಮಳಿಗೆಯಲ್ಲಿ ಗ್ರಾಹಕರು ಮಂಗಳವಾರ ಚಿನ್ನ ಖರೀದಿಸಿದರು   

ದಾವಣಗೆರೆ: ಅಕ್ಷಯ ತೃತೀಯಾ ಹಾಗೂ ಬಸವ ಜಯಂತಿ ದಿನವಾದ ಮಂಗಳವಾರ ಆಭರಣಗಳನ್ನು ಖರೀದಿಸಲು ನಗರದ ವಿವಿಧ ಆಭರಣ ಮಳಿಗೆಗಳಲ್ಲಿ ನೂಕುನುಗ್ಗಲು ಕಂಡು ಬಂತು.

ಅಕ್ಷಯ ತೃತೀಯಾ ದಿನದಂದು ಚಿನ್ನ, ಬೆಳ್ಳಿ, ವಜ್ರಾಭರಣಗಳನ್ನು ಖರೀದಿಸಿದರೆ ಅಥವಾ ಇತರೆ ಉತ್ತಮ ಕೆಲಸ–ಕಾರ್ಯಗಳನ್ನು ಮಾಡಿದರೆ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಕೈಗೊಳ್ಳುವ ಕೆಲಸ ಶುಭವಾಗುತ್ತದೆ ಎಂಬ ನಂಬಿಕೆಯಿಂದ ಮಹಿಳೆಯರು, ಹೆಣ್ಣುಮಕ್ಕಳು ಚಿನ್ನ, ಬೆಳ್ಳಿ ಆಭರಣಗಳ ಖರೀದಿಯಲ್ಲಿ ತೊಡಗಿದ್ದರು.

ಮುಂಜಾನೆಯೇ ಆಭರಣ ಮಳಿಗೆಗಳಲ್ಲಿ ಗ್ರಾಹಕರ ದಂಡು ನೆರೆದಿತ್ತು. ಕೆಲವರು ಚಿನ್ನದ ಸರ, ನೆಕ್ಲೇಸ್, ಉಂಗುರ, ಬಳೆಗಳು ಹಾಗೂ ವಿವಿಧ ವಿನ್ಯಾಸದ ಆಭರಣಗಳನ್ನು ಖರೀದಿಸಿ ಖುಷಿಪಟ್ಟರು. ಕೆಲವರು ಆಭರಣ ಮಳಿಗೆಯಲ್ಲಿ ‘ಸೆಲ್ಫಿ’ ತೆಗೆದುಕೊಂಡು ಬೀಗಿದರು. ಮಳಿಗೆಗಳ ಮುಂದೆ ವಾಹನಗಳನ್ನು ಪಾರ್ಕಿಂಗ್‌ ಮಾಡಲು ಜಾಗ ಇರದಷ್ಟು ಜನ ಬಂದಿದ್ದರು.

ADVERTISEMENT

ಅಕ್ಷಯ ತೃತೀಯಾ ಖರೀದಿಗೆ ಕೆಲವರು ಒಂದು ತಿಂಗಳ ಮುಂಚಿತವಾಗಿ ಮುಂಗಡ ಬುಕಿಂಗ್‌ ಮಾಡಿದ್ದರೆ ಕೆಲವರು ವಾರದ ಹಿಂದೆಯೇ ಬುಕ್‌ ಮಾಡಿದ್ದರು. ಆಭರಣ ಮಳಿಗೆಗಳು ನವವಧುವಿನಂತೆ ಸಿಂಗರಿಸಿಕೊಂಡು ಗ್ರಾಹಕರನ್ನು ಕೈಬೀಸಿ ಕರೆಯುತ್ತಿದ್ದವು. ಮಾಮೂಲಿ ದಿವಸಗಳಲ್ಲಿ ಆರಂಭವಾಗುತ್ತಿದ್ದುದಕ್ಕಿಂತ ಮುಂಚಿತವಾಗಿಯೇ ಒಡವೆ ಅಂಗಡಿಗಳ ಬಾಗಿಲು ತೆರೆದಿದ್ದವು. ಜೋಯ್ಆಲುಕ್ಕಾಸ್‌ ಮಳಿಗೆ ಬೆಳಿಗ್ಗೆ 7ಕ್ಕೇ ಕೆಲಸ ಆರಂಭಿಸಿತ್ತು.

ವಿವಿಧ ಆಫರ್‌ಗಳು:

ಅಕ್ಷಯ ತೃತೀಯಾ ದಿವಸ ಗ್ರಾಹಕರನ್ನು ಸೆಳೆಯಲು ಆಭರಣ ಮಳಿಗೆಗಳು ವಿವಿಧ ಆಫರ್‌ಗಳನ್ನು ನೀಡಿದ್ದವು. ಜೋಯ್ಆಲುಕ್ಕಾಸ್‌ ₹ 50 ಸಾವಿರದವರೆಗೆ ಚಿನ್ನವನ್ನು ಖರೀದಿಸಿದರೆ 20 ಮಿಲಿ ಗ್ರಾಂ ಚಿನ್ನದ ನಾಣ್ಯ ಉಚಿತ; ₹ 50 ಸಾವಿರದವರೆಗೆ ವಜ್ರದ ಆಭರಣಕ್ಕೆ 1 ಗ್ರಾಂ ಚಿನ್ನದ ನಾಣ್ಯ ಉಚಿತವಾಗಿ ನೀಡುತ್ತಿತ್ತು.

ಮಲಬಾರ್ ಗೋಲ್ಡ್‌ನಲ್ಲಿ ಅಕ್ಷಯ ತೃತೀಯಾಕ್ಕೆ ವಿಶೇಷ ವಿನ್ಯಾಸದ ಆಭರಣಗಳನ್ನು ಇಟ್ಟಿತ್ತು. ಅವುಗಳಲ್ಲಿ ಅನ್‌ಕಟ್‌ ಹಾಗೂ ಪ್ರೀಸಿಯಸ್‌ ಮುಖ್ಯವಾದವು. ಮುಂಗಡ ಬುಕಿಂಗ್‌ ಮಾಡಿದವರಿಗೆ ಬೆಳ್ಳಿ ನಾಣ್ಯವನ್ನು ಉಚಿತವಾಗಿ ನೀಡುವ ಆಫರ್‌ ಘೋಷಿಸಿತ್ತು. ಅಲ್ಲದೇ ಚಿನ್ನದ ನಾಣ್ಯ ಖರೀದಿಸಿದರೆ ಸೇವಾ ಶುಲ್ಕ (ಸರ್ವೀಸ್‌ ಚಾರ್ಜ್‌) ಉಚಿತವಾಗಿತ್ತು.

ಕಲ್ಯಾಣ್‌ ಜುವೆಲರ್ಸ್‌ನಲ್ಲಿ ₹ 50 ಸಾವಿರದವರೆಗೆ ಆಭರಣ ಖರೀದಿಸಿದರೆ ಒಂದು ಗ್ರಾಂ ಗೋಲ್ಡ್‌ ₹ 25 ಸಾವಿರದವರೆಗೆ ಖರೀದಿಸಿದರೆ 400 ಮಿಲಿ ಗ್ರಾಂ ನಾಣ್ಯಗಳನ್ನು ಉಚಿತವಾಗಿ ನೀಡುವ ಆಫರ್ ನೀಡಿತ್ತು.

‘ಅಕ್ಷಯ ತೃತೀಯಾ ದಿವಸಕ್ಕಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಿದ ಆಭರಣಗಳನ್ನು ಇಟ್ಟಿದ್ದೇವೆ. ಇವುಗಳಿಗೆ ಬೇಡಿಕೆಯೂ ಹೆಚ್ಚಿದೆ. ಒಂದು ತಿಂಗಳ ಹಿಂದೆಯೇ ಗ್ರಾಹಕರು ಮುಂಗಡವಾಗಿ ಬುಕ್ಕಿಂಗ್ ಮಾಡಿದ್ದಾರೆ. ಅವುಗಳಿಗೆ ಬೇಡಿಕೆ ಹೆಚ್ಚಿದೆ’ ಎನ್ನುತ್ತಾರೆ ಮಲಬಾರ್ ಗೋಲ್ಡ್‌ ಮಳಿಗೆಯ ಅಸಿಸ್ಟೆಂಟ್ ಮ್ಯಾನೇಜರ್ ಮೆಹಬೂಬ್.

‘ಅಕ್ಷಯ ತೃತೀಯಾ ದಿನ ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂದು ಜನ ಹೇಳುತ್ತಾರೆ. ಮೂರು ವರ್ಷಗಳಿಂದ ಈ ದಿನದಂದು ಚಿನ್ನ ಖರೀದಿಸುತ್ತಿದ್ದೇನೆ. ನನಗೂ ಒಳ್ಳೆಯದಾಗಿದೆ’ ಎಂದು ಆಭರಣ ಖರೀದಿಸಿದ ಗೃಹಿಣಿಯೊಬ್ಬರು ಹೇಳಿದರು.

‘ಅಕ್ಷಯ ತೃತೀಯಾ ದಿವಸ ಆಭರಣ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬುದು ಒಂದು ಭ್ರಮೆಯಷ್ಟೇ. ಅದರಿಂದ ಏನೂ ಆಗುವುದಿಲ್ಲ’ ಎಂಬುದು ಡಾ. ನಂದೀಶ್ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.