ಹೊನ್ನಾಳಿ: ತಾಲ್ಲೂಕಿನ ಹುಣಸಘಟ್ಟ ಗ್ರಾಮದಲ್ಲಿ ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು 24 ಗಂಟೆಯೊಳಗೆ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಡಿವೈಎಸ್‍ಪಿ ಸ್ಯಾಮ್ ವರ್ಗೀಸ್ ತಿಳಿಸಿದರು.
ಬುಧವಾರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಅಕ್ಟೋಬರ್ 14ರ ಸಂಜೆ ಹುಣಸಘಟ್ಟದ ಪಾರ್ವತಮ್ಮ(85) ತಮ್ಮದೇ ಅಡಿಕೆ ತೋಟದಲ್ಲಿ ಹುಲ್ಲು ಕೀಳುತ್ತಿರುವಾಗ ಮುಖಕ್ಕೆ ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಬಂದ ಕಣ್ಣಿಗೆ ಮೆಣಸಿನಪುಡಿ ಸವರಿ 30 ಗ್ರಾಂ ತೂಕದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು, ಪಕ್ಕದ ತೋಟದಲ್ಲಿ ಗಮನಿಸುತ್ತಾ ನಿಂತಿದ್ದ ಇನ್ನೊಬ್ಬ ವ್ಯಕ್ತಿಯ ಜೊತೆ ಬೈಕ್‌ನಲ್ಲಿ ಪರಾರಿಯಾಗಿದ್ದ ಎಂದು ವೃದ್ಧೆ ತಿಳಿಸಿದ್ದರು.
ಸಿಪಿಐ ಸುನೀಲ್‍ಕುಮಾರ್ ಅವರು ವೃದ್ಧೆ ಪಾರ್ವತಮ್ಮ ಅವರ ಸಂಬಂಧಿಕರಾದ ದರ್ಶನ್ ಹಾಗೂ ವಿನಯ್ ಎಂಬ ಇಬ್ಬರು ವ್ಯಕ್ತಿಗಳನ್ನು ಕರೆತಂದು ವಿಚಾರಣೆ ನಡೆಸಿದಾಗ, ತಾವು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸುವ ಸಲುವಾಗಿ ಸರಗಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ವೃದ್ಧೆ ಪಾರ್ವತಮ್ಮನವರ ದಿನಚರಿಯನ್ನು ಗಮನಿಸಿ ಈ ಕೃತ್ಯಕ್ಕೆ ಕೈ ಹಾಕಿದ್ದಾರೆ. ಬಂಧಿತರಿಂದ ₹ 3 ಲಕ್ಷ ಮೌಲ್ಯದ 30 ಗ್ರಾಂ ತೂಕದ ಬಂಗಾರದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ ₹ 30 ಸಾವಿರ ಮೌಲ್ಯದ ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಇನಿಖೆ ವೇಳೆ ಸುನೀಲ್‍ಕುಮಾರ್ ಜೊತೆ ಪಿಎಸ್‍ಐ ಕುಮಾರ್, ಎಲ್. ನಿರ್ಮಲಾ, ಎಎಸ್‍ಐ ಹರೀಶ್, ಸಿಬ್ಬಂದಿ ರಾಮಚಂದ್ರಪ್ಪ, ಹೇಮಾನಾಯ್ಕ, ಜಗದೀಶ್ ಇದ್ದರು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.