
ಜಗಳೂರು: ಪ್ರಧಾನಮಂತ್ರಿ ಕುಸುಮ ಯೋಜನೆಯಡಿ ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ 20 ಎಕರೆ ಪ್ರದೇಶದಲ್ಲಿ ಸೌರಶಕ್ತಿ ಘಟಕ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹೇಳಿದರು.
ತಾಲ್ಲೂಕಿನ ಬಸವನಕೋಟೆ, ಗುರುಸಿದ್ದಾಪುರ, ಸೊಕ್ಕೆ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಹಳ್ಳಿಗಳಿಗೆ ಗುರುವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಕೇಂದ್ರ ಸರ್ಕಾರದ ಮಹತ್ತರ ಯೋಜನೆ ಸೋಲಾರ್ ಅಳವಡಿಕೆಗೆ ಸೊಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಲಾಪುರ ಗ್ರಾಮ ಆಯ್ಕೆಯಾಗಿದ್ದು, 20 ಎಕರೆ ಭೂ ಪರಿವರ್ತನೆ ಆಗಿದೆ. ಈ ಯೋಜನೆಯ ಸಾಕಾರದಿಂದ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಲಿದೆ. ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
‘ತಾಲ್ಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಕೊಳವೆಬಾವಿ ದುರಸ್ತಿ ಮಾಡಿ ನೀರಿನ ಸಮರ್ಪಕ ಪೂರೈಕೆ ಮಾಡಬೇಕು’ ಎಂದು ಸೂಚಿಸಿದ ಅವರು, ಜೆಜೆಎಂ ಕಾಮಗಾರಿ ವೀಕ್ಷಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸಲಹೆ ನೀಡಿದರು. ‘ಗುರುಸಿದ್ದಾಪುರ ಗ್ರಾಮದ ಜೆಜೆಎಂ ಯೋಜನೆ ಕಾಮಗಾರಿ ಗುಣಮಟ್ಟದ್ದಾಗಿದೆ. ಇದೇ ರೀತಿ ಎಲ್ಲಕಡೆ ಕಾಮಗಾರಿ ನಡೆಯಲಿ’ ಎಂದು ಹೇಳಿದರು.
ಗುರುಸಿದ್ದಾಪುರ ಗ್ರಾಮದ ಗ್ರಂಥಾಲಯದಲ್ಲಿ ಕಳೆದ ತಿಂಗಳಿನಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಬೆಳಕಿನ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿ, ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಪರಿಣಾಮ ಸ್ಥಳದಲ್ಲಿಯೇ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.
ಸೊಕ್ಕೆ ಗ್ರಾಮದ ಕೆಜಿವಿಬಿ ವಸತಿ ಶಾಲೆಗೆ ಭೇಟಿ ನೀಡಿದ ಸಿಇಒ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಅಲ್ಲಿನ ಶೌಚಾಲಯ, ಮೂಲ ಸೌಕರ್ಯ, ಊಟದ ಅವ್ಯವಸ್ಥೆ ಕಂಡು, ಗರಂ ಆದರು. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ತರಾಟೆಗೆ ತೆಗದುಕೊಂಡರು.
‘ವಿದ್ಯಾರ್ಥಿನಿಯರಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ತೊಂದರೆಯಾದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಇದಕ್ಕೆ ತಾವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಸೊಕ್ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ, ಅಂಧ ವಿದ್ಯಾರ್ಥಿನಿಯ ಕಲಿಕೆಯನ್ನು ಪರೀಕ್ಷಿಸಿದ ಸಿಇಒ, ‘ಬಾಲಕಿಯ ಕಲಿಕೆಗೆ ಅನುಕೂಲವಾಗುವಂತೆ ಇಲಾಖೆಯಿಂದ ಬ್ರೈಲ್ ಲಿಪಿ ಯಂತ್ರ ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಇೊ ಕೆಂಚಪ್ಪ, ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ಸಾಧಿಕ್ ಉಲ್ಲಾ, ಇ. ಮಹಾಂತೇಶ್, ಪಿ.ಆರ್.ಇ.ಡಿ ಇಲಾಖೆ ಎಇಇ ಶಿವಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಮ್ಮ, ಸದಸ್ಯರಾದ ರಾಜು, ಸಿದ್ದಪ್ಪ, ಪಿಡಿಒಗಳಾದ ವಾಸುದೇವ, ವಿರೂಪಾಕ್ಷಿ, ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.