
ಶ್ಯಾಮ್ ಭಟ್
ದಾವಣಗೆರೆ: ರಾಜ್ಯ ಮಾನವ ಹಕ್ಕುಗಳ ಆಯೋಗದ ಎದುರು 3,413 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಇವುಗಳ ತ್ವರಿತ ವಿಲೇವಾರಿಗೆ ಒತ್ತು ನೀಡಲಾಗುತ್ತಿದೆ. ಜಿಲ್ಲೆಯ 15 ಪ್ರಕರಣಗಳನ್ನು ಗುರುವಾರ ಇತ್ಯರ್ಥ ಮಾಡಲಾಗಿದ್ದು, 3 ಪ್ರಕರಣ ಮಾತ್ರ ಬಾಕಿ ಇವೆ ಎಂದು ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದೂರುಗಳ ವಿಚಾರಣೆ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ, ಸಾರ್ವಜನಿಕರ ಅಹವಾಲು ಸ್ವೀಕಾರದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ದಾವಣಗೆರೆ ಜಿಲ್ಲೆಯ 18 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು. ಇದರಲ್ಲಿ ಬಹುತೇಕ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿ ವಿಲೇವಾರಿ ಮಾಡಲಾಗಿದೆ. ಹೊಸದಾಗಿ 6 ದೂರುಗಳು ಬಂದಿವೆ. ಇವುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ವರದಿ ಕೇಳಲಾಗಿದೆ’ ಎಂದು ಮಾಹಿತಿ ನೀಡಿದರು.
‘ಅಧ್ಯಕ್ಷರಾಗುವುದಕ್ಕೂ ಮುನ್ನ ಆಯೋಗದಲ್ಲಿ 5,400 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು. ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ವರದಿ ಪಡೆಯುವ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದಿಂದ ತ್ವರಿತ ವಿಲೇವಾರಿ ಕಷ್ಟವಾಗಿದೆ’ ಎಂದರು.
‘ಮಾನವಹಕ್ಕುಗಳ ಹೆಸರಿನಲ್ಲಿ ಸಂಸ್ಥೆಗಳನ್ನು ರಚಿಸಿಕೊಂಡ ಕೆಲವರು ಬ್ಲ್ಯಾಕ್‌ಮೇಲ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರಿ ಅಧಿಕಾರಿಗಳನ್ನು ಬೆದರಿಸುವ ಹಾಗೂ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿದೆ. ಇಂತಹ ವ್ಯಕ್ತಿಗಳ ವಿರುದ್ಧ ಪೊಲೀಸ್ ಠಾಣೆ ಅಥವಾ ಆಯೋಗಕ್ಕೆ ದೂರು ನೀಡಿ’ ಎಂದು ಮನವಿ ಮಾಡಿದರು.
‘ಬಹಿಷ್ಕಾರ, ಮೌಢ್ಯಾಚರಣೆ ಕೂಡ ಮಾನವಹಕ್ಕುಗಳ ಉಲ್ಲಂಘನೆಯ ವ್ಯಾಪ್ತಿಗೆ ಬರುತ್ತವೆ. ನೊಂದವರು ಅಥವಾ ಅವರ ಪರವಾಗಿ ಇತರರು ದೂರು ನೀಡಲು ಅವಕಾಶವಿದೆ. ಪೊಲೀಸ್ ಠಾಣೆ, ಕಾರಾಗೃಹದಲ್ಲಿ ಸಂಭವಿಸುವ ಸಾವಿನ ಪ್ರಕರಣಗಳ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುತ್ತದೆ’ ಎಂದು ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಮಾಹಿತಿ ನೀಡಿದರು.
ಕೆಲಸದ ಹೊರೆ: ಸಿಬ್ಬಂದಿ ಅಳಲು
‘ಅಡುಗೆ ಸಿಬ್ಬಂದಿ ಕಡಿಮೆ ಇದ್ದೇವೆ. ಕೆಲಸದ ಹೊರೆ ಹೆಚ್ಚಾಗಿದೆ. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿದರೆ ಅನುಕೂಲ’ ಎಂದು ಹಾಸ್ಟೆಲ್ ಸಿಬ್ಬಂದಿ ಮಾನವ ಹಕ್ಕುಗಳ ಆಯೋಗದ ಎದುರು ಅಳಲು ತೋಡಿಕೊಂಡರು.
ನಗರದ ಜೆ.ಎಚ್. ಪಟೇಲ್ ಬಡಾವಣೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಗಳಿಗೆ ಭೇಟಿ ನೀಡಿದಾಗ ಸಿಬ್ಬಂದಿ ಅಹವಾಲು ಸಲ್ಲಿಸಿದರು. ವೇತನ ಕಡಿಮೆ ಇರುವ ಬಗ್ಗೆ ರಾತ್ರಿ ಕಾವಲುಗಾರರೊಬ್ಬರು ಬೇಸರ ವ್ಯಕ್ತಪಡಿಸಿದರು.
‘ಪ್ರವೇಶಾತಿ ಕೋರಿ ಹಲವು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರಿಂದ ಹಾಸ್ಟೆಲ್‌ಗಳ ಮೇಲೆ ಒತ್ತಡ ಹೆಚ್ಚಾಗಿದೆ. ಹೊಸ ಹಾಸ್ಟೆಲ್ ನಿರ್ಮಾಣಕ್ಕೆ 22 ನಿವೇಶನ ಒದಗಿಸಿರುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡಿದೆ’ ಎಂದು ಶ್ಯಾಮ್ ಭಟ್ ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಶಿವಕುಮಾರ್ ಹಾಜರಿದ್ದರು.
ಜಿಲ್ಲಾ ಆಸ್ಪತ್ರೆ ಶಿಥಿಲಾವಸ್ಥೆಗೆ ಬೇಸರ
ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಕಟ್ಟಡದ ಶಿಥಿಲಾವಸ್ಥೆ ಕಂಡು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಹಾಗೂ ಸದಸ್ಯ ಎಸ್.ಕೆ. ವಂಟಿಗೋಡಿ ಬೇಸರ ವ್ಯಕ್ತಪಡಿಸಿದರು. ದುರಂತ ಸಂಭವಿಸುವುದಕ್ಕೂ ಮುನ್ನ ಪರ್ಯಾಯ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿದರು.
ಆಸ್ಪತ್ರೆ ಪ್ರವೇಶಿಸುತ್ತಿದ್ದಂತೆ ಚಾವಣಿ ಹಾಳಾಗಿದ್ದು ಕಣ್ಣಿಗೆ ಬಿದ್ದಿತು. ಕೊಂಚ ಆತಂಕದಿಂದಲೇ ದಿಟ್ಟಿಸಿದ ಅಧ್ಯಕ್ಷರು ಕಟ್ಟಡದ ಸ್ಥಿತಿಯ ಬಗ್ಗೆ ಪ್ರಶ್ನಿಸಿದರು.
‘ಕಟ್ಟಡ ನಿರ್ಮಾಣವಾಗಿ 50 ವರ್ಷ ಕಳೆದಿದೆ. ಪಕ್ಕದಲ್ಲೇ 400 ಹಾಸಿಗೆಯ ಕಟ್ಟಡ ನಿರ್ಮಾಣವಾಗಲಿದೆ. ಅಪಾಯಕಾರಿ ಸ್ಥಿತಿಯಲ್ಲಿದ್ದ ಎರಡು ವಾರ್ಡ್‌ಗಳನ್ನು ಖಾಲಿ ಮಾಡಲಾಗಿದೆ’ ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ಎಂ.ಬಿ. ನಾಗೇಂದ್ರಪ್ಪ ಮಾಹಿತಿ ನೀಡಿದರು.
‘ಜಿಲ್ಲಾ ಆಸ್ಪತ್ರೆಯ ಕಟ್ಟಡ ದುರಸ್ತಿಗೊಳಿಸಲು ಸಾಧ್ಯವಿಲ್ಲದಷ್ಟು ಹದಗೆಟ್ಟಿದೆ. ಪರ್ಯಾಯವಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಗಳು ನಡೆಯುತ್ತಿವೆ’ ಎಂದು ಟಿ. ಶ್ಯಾಮ್ ಭಟ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಎಕ್ಸ್‌ರೇ ಘಟಕದ ಬಳಿ ರೋಗಿಗಳ ಸರತಿ ಸಾಲು ದೊಡ್ಡದಾಗಿರುವುದನ್ನು ಗಮನಿಸಿದ ಶ್ಯಾಮ್ ಭಟ್, ರೋಗಿಗಳನ್ನು ಪ್ರಶ್ನಿಸಿದರು. ಎಕ್ಸ್‌ರೇಗೆ ಬಹುಹೊತ್ತಿನಿಂದ ಸರತಿ ಸಾಲಿನಲ್ಲಿ ಕಾಯಬೇಕಾದ ಸ್ಥಿತಿಯ ಬಗ್ಗೆ ರೋಗಿಯೊಬ್ಬರು ಅಳಲು ತೋಡಿಕೊಂಡರು.
‘ಆಸ್ಪತ್ರೆಯಲ್ಲಿ ಅರೆವೈದ್ಯಕೀಯ ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದೆ. ವೈದ್ಯಕೀಯ ಕಾಲೇಜುಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಿಬ್ಬಂದಿ ನೇಮಕಕ್ಕೆ ಸೂಚನೆ ನೀಡಲಾಗಿದೆ’ ಎಂದು ಶ್ಯಾಮ್ ಭಟ್ ತಿಳಿಸಿದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಉತ್ತಮವಾಗಿದೆ. ಆದರೆ, ಜಿಲ್ಲಾ ಕಾರಾಗೃಹ ಕಿರಿದಾಗಿದೆ. ನೂತನ ಕಾರಾಗೃಹಕ್ಕೆ 10 ಎಕರೆ ಭೂಮಿ ಲಭ್ಯವಾಗಿರುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡಿದೆಟಿ.ಶ್ಯಾಮ್ ಭಟ್, ಅಧ್ಯಕ್ಷ ರಾಜ್ಯ ಮಾನವ ಹಕ್ಕುಗಳ ಆಯೋಗ
ತಾವರೆಕೆರೆಯ ಮಸೀದಿಯ ಎದುರು ಮಹಿಳೆಯೊಬ್ಬರನ್ನು ಥಳಿಸಿದ ಪ್ರಕರಣದಲ್ಲಿ 6 ಜನರನ್ನು ಬಂಧಿಸಲಾಗಿದೆ. ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ.ಉಮಾ ಪ್ರಶಾಂತ್, ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.