
ದಾವಣಗೆರೆ: ‘ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ನಿರ್ಧರಿಸಿರುವುದು ಸ್ವಾಗತಾರ್ಹ. ಶೇ 56ರಷ್ಟು ಮೀಸಲಾತಿ ಅನ್ವಯವೇ ನೇಮಕಾತಿ ಮಾಡಬೇಕು. ನ್ಯಾಯಾಲಯದ ನೆಪ ಹೇಳಿ, ಮೀಸಲಾತಿಯನ್ನು ಕಾಯ್ದಿರಿಸುವುದು ಸೂಕ್ತ ನಿರ್ಧಾರವಲ್ಲ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದರು.
‘ಹಳೆಯ ಮೀಸಲಾತಿ ಪದ್ಧತಿ ಅನ್ವಯ 56,432 ಹುದ್ದೆಗಳಿಗೆ ನೇರ ನೇಮಕಾತಿ ಪ‍್ರಕ್ರಿಯೆ ಆರಂಭಿಸುವ ಸರ್ಕಾರದ ನಡೆ ಸರಿಯಲ್ಲ. ಕೋರ್ಟ್ ಆದೇಶಕ್ಕೂ ಮುನ್ನ ಸರ್ಕಾರವೇ ಈ ಬಗ್ಗೆ ತೀರ್ಮಾನಿಸಿರುವುದು ಪರಿಶಿಷ್ಟ ಸಮುದಾಯಗಳಿಗೆ ಮಾಡಿರುವ ಅನ್ಯಾಯ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮೀಸಲಾತಿ ಪ್ರಮಾಣ ಶೇ 50 ಮೀರುವಂತಿಲ್ಲ ಎಂಬ ಕೋರ್ಟ್ ಆದೇಶವಿದ್ದರೂ, ನೇಮಕಾತಿ ಅಧಿಸೂಚನೆ ಹೊರಡಿಸಲು, ಹಾಗೂ ಪರೀಕ್ಷೆ ನಡೆಸಲು ಅಡ್ಡಿಯಲ್ಲ. ಫಲಿತಾಂಶವನ್ನು ತೀರ್ಪಿನ ಬಳಿಕ ಪ್ರಕಟಿಸಬಹುದು ಎಂಬುದಾಗಿ ಕೋರ್ಟ್ ತಿಳಿಸಿದೆ. ಹೀಗಿರುವಾಗ, ಎರಡೂ ಸಮುದಾಯಗಳಿಗೆ ನೀಡಲಾಗಿರುವ ಒಟ್ಟಾರೆ ಶೇ 24ರ ಮೀಸಲಾತಿಯನ್ನು ಶೇ 18ಕ್ಕೆ ಇಳಿಸಿ ನೇಮಕಾತಿಗೆ ಮುಂದಾಗಿರುವುದು ಏಕೆ?’ ಎಂದು ಪ್ರಶ್ನಿಸಿದರು.
‘ಒಳಮೀಸಲಾತಿ ಕಾರಣ ಮೂರ್ನಾಲ್ಕು ವರ್ಷಗಳಿಂದ ನೇಮಕಾತಿ ಕಾಯ್ದಿರಿಸಲಾಗಿತ್ತು. ಹಳೆಯ ಪದ್ಧತಿಗೆ ಮರಳುವುದಾದರೆ ಇಷ್ಟು ವರ್ಷ ಕಾದಿದ್ದಕ್ಕೆ ಏನು ಪ್ರಯೋಜನ?’ ಎಂದು ಪ್ರಶ್ನಿಸಿದರು. ಒಳಮೀಸಲಾತಿ ಕೈಬಿಟ್ಟಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಬಲಿಷ್ಠರು ಹೆಚ್ಚು ಹುದ್ದೆ ಕಬಳಿಸಲಿದ್ದಾರೆ. ಇದಕ್ಕಾಗಿ ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದರು.
ಶೇ 24ರಷ್ಟು ಮೀಸಲಾತಿ ನೀಡಿಯೇ ನೇಮಕಾತಿ ನಡೆಸಲು ಒತ್ತಾಯಿಸಿ ಸಮುದಾಯದ ಸಚಿವರು, ಶಾಸಕರೊಂದಿಗೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.