
ಪ್ರಜಾವಾಣಿ ವಾರ್ತೆ
ಹರಿಹರ: ‘ನಗರದ ಹೊರವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಜ. 15 ರಂದು ಆಯೋಜಿಸಿರುವ ಹರಜಾತ್ರಾ ಮಹೋತ್ಸವ, ಕಿತ್ತೂರ ರಾಣಿ ಚನ್ನಮ್ಮ ದ್ವಿ–ಶತಮಾನ ವಿಜಯೋತ್ಸವದ ಸಮಾರೋಪ ಸಮಾರಂಭ ಹಾಗೂ ಗುರುಪೀಠದ ಶ್ರೀಯವರ ಅಷ್ಟಮ ವಾರ್ಷಿಕ ಪೀಠಾರೋಹಣದಲ್ಲಿ ಸಾಧಕರೊಬ್ಬರಿಗೆ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು.
‘ಸಾಧಕರನ್ನು ಆಯ್ಕೆ ಮಾಡಲು ಸಮಿತಿಯೊಂದನ್ನು ರಚಿಸಲಾಗುವುದು. ಜಾತ್ರೆಯಲ್ಲಿ ವಿವಿಧ ಮಠಾಧೀಶರು, ಶಾಸಕರು, ಸಂಸದರು, ಸಚಿವರು, ಸಮಾಜದ ಮುಖಂಡರು ಭಾಗವಹಿಸುವರು. ರಾಜ್ಯದ ವಿವಿಧೆಡೆಯಿಂದ 10 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ನಮ್ಮ ಮನವಿಯ ಮೇರೆಗೆ ಕಿತ್ತೂರ ರಾಣಿ ಚನ್ನಮ್ಮಾಜೀ ದ್ವಿ–ಶತಮಾನ ವಿಜಯೋತ್ಸವದ ನಿಮಿತ್ತ ಕೇಂದ್ರ ಸರ್ಕಾರ ₹ 200 ಮುಖಬೆಲೆ ನಾಣ್ಯವನ್ನು ಬಿಡುಗಡೆ ಮಾಡಿರುವುದು ಸಂತಸ ಮೂಡಿಸಿದೆ’ ಎಂದರು.
‘ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ (ಒಬಿಸಿ) ಎಲ್ಲಾ ವರ್ಗದವರಿಗೆ ಕೇಂದ್ರದ ಹಿಂದುಳಿದ ವರ್ಗದಲ್ಲಿಯೂ ಸ್ಥಾನ ಸಿಗುವಂತೆ ಮಾಡಬೇಕು. ಸೂಕ್ತ ಸಿದ್ಧತೆ ಮಾಡಿಕೊಂಡು ಈ ಮೀಸಲಾತಿ ನೀಡಿದರೆ ತೊಡಕುಗಳನ್ನು ನಿವಾರಿಸಬಹುದಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಉತ್ತರಾಯಣ ಪುಣ್ಯ ಕಾಲಕ್ಕೆ ಸೂರ್ಯ ಪಥ ಬದಲಿಸುವ ಮಕರ ಸಂಕ್ರಾಂತಿ ಹಬ್ಬದ ದಿನ ನಡೆಯುವ ಹರಜಾತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಹರ ಜಾತ್ರೆಯ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ್ರು, ಗುರುಪೀಠದ ಪ್ರದಾನ ಟ್ರಸ್ಟಿ ಬಿ.ಸಿ.ಉಮಾಪತಿ, ಆಡಳಿತಾಧಿಕಾರಿ ಡಾ.ಎಚ್.ಪಿ.ರಾಜಕುಮಾರ್, ಹರಜಾತ್ರೆ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಬಸವರಾಜ್ ವೀರಾಪುರ್, ಪದಾಧಿಕಾರಿಗಳಾದ ಚಂದ್ರಶೇಖರ್ ಪೂಜಾರ್, ಪ್ರಕಾಶ್ ಪಾಟೀಲ್, ಸಂತೋಷ್ ಕುಮಾರ್, ರಶ್ಮಿ ಕುಂಕದ್, ರಾಜೇಶ್ವರಿ ಬಳ್ಳಾರಿ, ಸುಷ್ಮಾ ಪಾಟೀಲ್, ವೀರಣ್ಣ, ಬಸವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.