ADVERTISEMENT

ಹರಿಹರ| ಸುಪ್ತ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಅಗತ್ಯ: ಶಾಸಕ ಬಿ.ಪಿ. ಹರೀಶ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:45 IST
Last Updated 8 ಡಿಸೆಂಬರ್ 2025, 5:45 IST
ಹರಿಹರದಲ್ಲಿ ಜಿಪಂ, ತಾಪಂ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವಕ್ಕೆ ಶಾಸಕ ಬಿ.ಪಿ.ಹರೀಶ್ ಚಾಲನೆ ನೀಡಿದರು. ಬಿಇಒ ಡಿ.ಹನುಮಂತಪ್ಪ, ಸಿಪಿಐ ಸುರೇಶ್ ಸಗರಿ ಹಾಗೂ ಇತರರಿದ್ದರು.
ಹರಿಹರದಲ್ಲಿ ಜಿಪಂ, ತಾಪಂ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವಕ್ಕೆ ಶಾಸಕ ಬಿ.ಪಿ.ಹರೀಶ್ ಚಾಲನೆ ನೀಡಿದರು. ಬಿಇಒ ಡಿ.ಹನುಮಂತಪ್ಪ, ಸಿಪಿಐ ಸುರೇಶ್ ಸಗರಿ ಹಾಗೂ ಇತರರಿದ್ದರು.   

ಹರಿಹರ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಹೊರತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಅತ್ಯುತ್ತಮ ವೇದಿಕೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಮರಿಯಾ ನಿವಾಸ ಶಾಲೆಯ ಸಭಾಂಗಣದಲ್ಲಿ ಜಿಪಂ, ತಾಪಂ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಗೆಲುವು-ಸೋಲು ಮುಖ್ಯವಲ್ಲ, ಸಕ್ರಿಯವಾಗಿ ಪಾಲ್ಗೊಳ್ಳುವುದು ಮುಖ್ಯ ಎಂದರು.

ತಾಲೂಕಿನ 14 ಸಮೂಹ ಸಂಪನ್ಮೂಲ ಕೇಂದ್ರಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಪ್ರಥಮ ಸ್ಥಾನ ಪಡೆದ ತಂಡ ಜಿಲ್ಲಾಮಟ್ಟಕ್ಕೆ, ಅಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯಮಟ್ಟದ ಹಂತಕ್ಕೆ ಪ್ರವೇಶ ಪಡೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರುಗಪ್ಪ ತಿಳಿಸಿದರು.
ವೈಯಕ್ತಿಕ ವಿಭಾಗದಲ್ಲಿ ಭರತನಾಟ್ಯ, ಭಾಷಣ, ಚರ್ಚಾ ಸ್ಪರ್ಧೆ, ಚಿತ್ರಕಲೆ, ರಂಗೋಲಿ, ಜಾನಪದ ಗೀತೆ, ಪ್ರಬಂಧ, ಕವನವಾಚನ ಸೇರಿ ಒಟ್ಟು 13 ವಿಭಾಗಗಳಿಗೆ 1–4, 5–7 ಹಾಗೂ 8–10 ನೇ ತರಗತಿಯ ವಿದ್ಯಾರ್ಥಿಗಳಿಗೆ 3 ಹಂತಗಳಲ್ಲಿ ಸ್ಪರ್ಧೆಗಳು ನಡೆದವು. ಸಮೂಹ ವಿಭಾಗದಲ್ಲಿ ಜಾನಪದ ನೃತ್ಯ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಆಯೋಜಿಸಲಾಗಿತ್ತು. ತಾಲೂಕಿನ ವಿವಿಧ ಶಾಲೆಗಳಿಂದ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ADVERTISEMENT

ಸಿಪಿಐ ಸುರೇಶ್ ಸಗರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವೀರೇಶ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿಜಯಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ್ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.