
ಹರಿಹರ: ಕಾರ್ಖಾನೆಯ ಅಕ್ರಮ ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ತಾಲ್ಲೂಕಿನ ಬೆಳ್ಳೂಡಿ ಸಮೀಪದ ಕಾರ್ಗಿಲ್ ಕಂಪನಿ ಎದುರು ಕಾರ್ಮಿಕರು ಶುಕ್ರವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.
‘ನಾನೂ ಕಾರ್ಮಿಕ ಸಂಘಟನೆಯ ಮೂಲಕ ಸಾರ್ವಜನಿಕ ಜೀವನ ಆರಂಭಿಸಿದೆ. ಈ ಕ್ಷೇತ್ರದ ಶಾಸಕನಾಗಿ ಕಂಪನಿಯ ಕಾರ್ಮಿಕರ ಪರವಾಗಿ ನಿಲ್ಲುತ್ತೇನೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಬಿ.ಪಿ.ಹರೀಶ್ ಭರವಸೆ ನೀಡಿದರು.
‘ಈ ಕಂಪನಿಗಾಗಿ ಈ ಹಿಂದೆ ಭೂಸ್ವಾಧೀನ ಪ್ರಕ್ರಿಯೆ ನಡೆಯುವಾಗ ನಾನು ಶಾಸಕನಾಗಿದ್ದೆ. ಈ ಭಾಗದ ಅಭಿವೃದ್ಧಿ ಹಾಗೂ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ಉದ್ದೇಶದಿಂದ ಎಲ್ಲ ರೀತಿಯ ಸಹಕಾರ ನೀಡಿದ್ದೆ. ಆದರೆ ಆಡಳಿತ ಮಂಡಳಿಯವರು ಕಾರ್ಮಿಕ ವಿರೋಧಿ ನಿಲುವು ತಾಳಿರುವುದು ಬೇಸರ ಮೂಡಿಸಿದೆ’ ಎಂದರು.
‘ಮಾ.3 ರಂದು ಕಲಬುರಗಿಯಲ್ಲಿ ಕಾರ್ಮಿಕ ಉಪ ಆಯುಕ್ತರ ಕಚೇರಿಯಲ್ಲಿ, ನಂತರ ದಾವಣಗೆರೆಯಲ್ಲಿ ನಡೆಯಲಿರುವ ಸಭೆಗಳಲ್ಲಿ ಭಾಗವಹಿಸುತ್ತೇನೆ. ಅವುಗಳ ಮಾಹಿತಿ ನೀಡಿ’ ಎಂದು ಸ್ಥಳದಲ್ಲಿದ್ದ ಕಾರ್ಮಿಕ ಸಹಾಯಕ ಆಯುಕ್ತ ಅವಿನಾಶ ನಾಯಕ, ಜಿಲ್ಲಾ ಕಾರ್ಮಿಕ ಅಧಿಕಾರಿ ಅರವಿಂದ ಹಾಗೂ ಕಾರ್ಮಿಕ ಅಧಿಕಾರಿ ಕವಿತಾ ಅವರಿಗೆ ಸೂಚಿಸಿದರು.
ಬೀದಿಬದಿ ವ್ಯಾಪಾರಿಗಳ ಸಂಘ, ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು, ಕೆನರಾ ಬ್ಯಾಂಕ್ ನೌಕರರ ಸಂಘದ ಮುಖಂಡ ಹಿರೇಮಠ, ಕಾರ್ಮಿಕ ಮುಖಂಡ ಶಿವಾಜಿ ಅವರು ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಸಂಘದ ಗೌರವಾಧ್ಯಕ್ಷ ಮಂಜುನಾಥ್ ಕೈದಾಳೆ, ಪ್ರಧಾನ ಕಾರ್ಯದರ್ಶಿ ಮೋಹನ್, ಕಾರ್ಮಿಕರಾದ ಬಸವರಾಜ ಕೆ.ಜಿ., ಅರುಣ್ ಮಾಕನೂರ್, ಬಸವರಾಜ್ ಬಿ.ಎಚ್.ಉದಯ್ ಕುಮಾರ್, ಮಲ್ಲಿಕುರ್ಜುನ್ ಕೆ.ಆರ್., ಮಲ್ಲಿಕಾರ್ಜುನ್ ಯು.ಎಂ., ಪ್ರವೀಣ್, ಸುನೀಲ್ ನಾಯಕ್, ರಾಘವೇಂದ್ರ, ಪ್ರಭು, ಪ್ರವೀಣ್ ಕುಮಾರ್, ಜಯಕುಮಾರ್, ದಿನೇಶ್, ಜಗದೀಶ್, ಜಗನ್ನಾಥ್ ಗುತ್ತಿಗೆ ಆಧಾರಿತ ಕಾರ್ಮಿಕರದ ಮಂಜುನಾಥ್ ಬಾರ್ಕಿ, ರಾಘವೇಂದ್ರ, ಅಪ್ಸರ್ ಖಾನ್, ಪ್ರಕಾಶ್, ಮಾಲತೇಶ್, ಪ್ರದೀಪ್ ಸೇರಿದಂತೆ ಇತರರು ಇದ್ದರು.
ಮಾರಾಟ ಅಕ್ರಮ: ಜೆ. ಸಂಜಯ್
‘ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣ ಇರುವಾಗಲೇ ಆಡಳಿತ ಮಂಡಳಿಯು ಗುಜರಾತಿನ ರಿದ್ಧಿ ಸಿದ್ಧಿ ಎಂಬ ಕಂಪನಿಗೆ ಈ ಕಾರ್ಖಾನೆಯನ್ನು ಮಾರಾಟ ಮಾಡುತ್ತಿರುವುದು ಅಕ್ರಮ’ ಎಂದು ಕಾರ್ಗಿಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ.ಸಂಜಯ್ ದೂರಿದರು.
ಕಂಪನಿಯಲ್ಲಿ 120 ಕಾಯಂ ಹಾಗೂ 273 ಗುತ್ತಿಗೆ ಕಾರ್ಮಿಕರಿದ್ದಾರೆ. ನಾಲ್ಕು ತಿಂಗಳಿನಿಂದ ಉತ್ಪಾದನೆ ಸ್ಥಗಿತಗೊಳಿಸಿದ್ದು 60ಕ್ಕೂ ಹೆಚ್ಚು ಕಾಯಂ ಕಾರ್ಮಿಕರನ್ನು ಕೆಲಸದಿಂದ ಹೊರ ದಬ್ಬಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊರಕಳಿಸಿದ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳಬೇಕು ಸೇವಾ ಭದ್ರತೆ ಒದಗಿಸಬೇಕು ನಿರಂತರ ಉತ್ಪಾದನೆಯ ಆಶ್ವಾಸನೆ ನೀಡಬೇಕು ಕಾರ್ಮಿಕ ನ್ಯಾಯಾಲದಲ್ಲಿರುವ ಪ್ರಕರಣ ಬಗೆಹರಿಯುವವರೆಗೆ ಮಾರಾಟ ಪ್ರಕ್ರಿಯೆ ನಡೆಸಬಾರದು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.